ಇದು ಹೊಸ ಇಂಡಿಯಾ, ಯಾರ ಮನೆಗೆ ಬೇಕಾದ್ರೂ ನುಗ್ತೀವಿ: ಕನ್ನಡದಲ್ಲೇ ಸವಾಲ್‌ ಹಾಕಿದ ರಣವೀರ್‌ ಸಿಂಗ್‌ | This Is New India Ranveer Singh Challenges In Kannada Ahead of Toxic vs Dhurandhar 2 Clash

Entertainment

oi-Manohara M

Ranveer Singh: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಕನ್ನಡದ ದೀಪಿಕಾ ಪಡುಕೋಣೆ ಅವರನ್ನ ಮದುವೆಯಾಗುವ ಮೂಲಕ ಕರ್ನಾಟಕದ ಅಳಿಯ ಎಂದೇ ಕರೆಸಿಕೊಂಡಿದ್ದಾರೆ. ಆದರೆ ಇದೀಗ ರಣವೀರ್‌ ಕನ್ನಡದಲ್ಲೇ ಡೈಲಾಗ್‌ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡದ ಟಾಕ್ಸಿಕ್‌ ಎದುರು ರಿಲೀಸ್‌ ಆಗುತ್ತಿರುವ ರಣವೀರ್‌ ಅಭಿನಯದ “ಧುರಂಧರ್‌-2” ಸಿನಿಮಾದ ಟೀಸರ್‌ ಕನ್ನಡದಲ್ಲೂ ಬಿಡುಗಡೆಯಾಗಿದ್ದು, ಅಚ್ಚರಿ ಎನ್ನುವಂತೆ ರಣವೀರ್‌ “ಯಾರ ಮನೆಗಾದ್ರೂ ನುಗ್ತೀವಿ, ಯಾರನ್ನಾದ್ರೂ ಸಾಯಿಸ್ತೀವಿ” ಎಂದು ಕನ್ನಡದಲ್ಲೇ ಸವಾಲ್‌ ಹಾಕಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಧುರಂಧರ್‌” ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರೀ ಗಳಿಕೆ ಕಂಡಿತ್ತು. ಹೀಗಾಗಿ ಇದರ ಸೀಕ್ವೆಲ್‌ “ಧುರಂದರ್‌-2” ಕೂಡ ತೆರೆಗೆ ಬರುತ್ತಿದೆ. ಆದರೆ ಅದೇ ದಿನ ನಮ್ಮ ಕನ್ನಡ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಹುನಿರೀಕ್ಷಿತ “ಟಾಕ್ಸಿಕ್‌” ಸಿನಿಮಾ ಕೂಡ ರಿಲೀಸ್‌ ಆಗಲಿದೆ. ಹೀಗಾಗಿ ಸಹಜವಾಗಿ ಈ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್‌ ವಾರ್‌ ನಡೆಯಲಿದೆ.

Ranveer Singh

ಇನ್ನು ಮಂಗಳವಾರ (ಫೆ.3) ರಿಲೀಸ್‌ ಆದ ಧುರಂಧರ್‌-2 (Dhurandhar:The Revenge) ಟೀಸರ್‌ ಕನ್ನಡವೂ ಸೇರಿ ಬಹುಭಾಷೆಗಳಲ್ಲಿದೆ. ಅಚ್ಚರಿ ವಿಚಾರ ನೋಡುವುದಾದರೆ ರಣವೀರ್‌ ಸಿಂಗ್‌ ಎಕ್ಸ್‌ನಲ್ಲಿ ಪ್ರತ್ಯೇಕವಾಗಿ ಪ್ರತಿ ಭಾಷೆಯ ಟೀಸರ್‌ ಹಾಗೂ ಡೈಲಾಗ್‌ ಅನ್ನು ಅದೇ ಭಾಷೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ. ಅದರಂತೆ ಕನ್ನಡದ ಟೀಸರ್‌ನೊಂದಿಗೆ “ಇದು ಹೊಸ ಭಾರತ. ಮನೆಯೊಳಗೆ ಪ್ರವೇಶಿಸುತ್ತದೆ, ಕೊಲ್ಲುತ್ತದೆ ಕೂಡ” ಎಂದು ರಣವೀರ್‌ ಬರೆದುಕೊಂಡಿದ್ದಾರೆ.

ಆದರೆ ಟೀಸರ್‌ನಲ್ಲಿ ಈ ಡೈಲಾಗ್‌ ಬೇರೆಯೇ ಶೈಲಿಯಲ್ಲಿದೆ. ಟೀಸರ್‌ನ ಕೊನೆಯಲ್ಲಿ ರಣವೀರ್‌ ಸಿಗರೇಟ್‌ ಸೇದುತ್ತಾ ರಗಡ್‌ ಲುಕ್‌ನಲ್ಲಿದ್ದು, ಈ ವೇಳೆ “ಇದು ಹೊಸ ಇಂಡಿಯಾ, ನಾವು ಯಾರ ಮನೆಗೆ ಬೇಕಾದ್ರೂ ನುಗ್ತೀವಿ, ಯಾರನ್ನ ಬೇಕಾದ್ರೂ ಸಾಯಿಸ್ತೀವಿ” ಎನ್ನುವ ಡೈಲಾಗ್‌ ಇದೆ. ಮತ್ತೊಂದೆಡೆ ಸಬ್‌ಟೈಟಲ್‌ನಲ್ಲೂ ಈ ಡೈಲಾಗ್‌ ಬೇರೆ ರೀತಿ ಇದೆ. ಇದೆಲ್ಲವೂ ರಣವೀರ್‌ ಮಾಡಿರುವ ಪೋಸ್ಟ್‌ನಲ್ಲೇ ಇದ್ದು ಕನ್ನಡಿಗರ ಗಮನ ಸೆಳೆದಿದೆ.

“ಟಾಕ್ಸಿಕ್‌ ನೋಡಿ ಧುರಂಧರ್‌ ಕಡೆ ಹೋಗೋಣ..”

ರಣವೀರ್‌ ಕನ್ನಡದಲ್ಲಿ ಹಂಚಿಕೊಂಡಿರುವ ಇದೇ ಪೋಸ್ಟ್‌ಗೆ ಹಲವು ಕನ್ನಡಿಗರು ಕಾಮೆಂಟ್‌ ಮಾಡಿದ್ದಾರೆ. ಅಲ್ಲದೆ ಕನ್ನಡಿಗರು ಧುರಂಧರ್‌ಗೂ ಸಪೋರ್ಟ್‌ ಮಾಡುವ ಮಾತುಗಳನ್ನಾಡಿದ್ದಾರೆ. ಒಬ್ಬರು,”ಕನ್ನಡದಲ್ಲಿ ಧುರಂಧರ್‌-2 ಸಿನಿಮಾ ರಿಲೀಸ್ ಆಗ್ತಿದೆ, ಇದು ಟೀಸರ್‌ಗಷ್ಟೇ ಸೀಮಿತವಾಗದೆ ಥಿಯೇಟರ್‌ಗಳಲ್ಲೂ ಕನ್ನಡ ಇರಲಿ. #ToxicTheMovie ಶೋ ಮುಗಿಸಿ ನಂತರ #DhurandharTheRevenge ಕಡೆಗೆ ಹೋಗುವ” ಎಂದು ಕಾಮೆಂಟ್‌ ಮಾಡಿದ್ದಾರೆ.

ತಪ್ಪು ಅನುವಾದದ ಬಗ್ಗೆ ಗೇಲಿ

ಟೀಸರ್‌ನಲ್ಲಿ ಹಾಗೂ ರಣವೀರ್‌ ಸಿಂಗ್‌ ಪೋಸ್ಟ್‌ನಲ್ಲಿ ತಪ್ಪಾದ ಅನುವಾದದ ಬಗ್ಗೆಯೂ ಕಾಲೆಳೆದಿರುವ ಕನ್ನಡಿಗರು, “ಅಪ್ಪ ತಂದೆ.. ಕನ್ನಡ ಗೊತ್ತಿರುವ ಯಾರನ್ನಾದರೂ ಅನುವಾದಕ್ಕೆ ಬಳಸಿಕೊಳ್ಳಿ” ಎಂದು ಗೇಲಿ ಮಾಡಿದ್ದಾರೆ. “ಪ್ರವೇಶ ಮಾಡೋಕೆ ಅದೇನು ಗೃಹ ಪ್ರವೇಶನಾ? It should be ನುಗ್ಗುತ್ತದೆ” ತಪ್ಪು ತಿದ್ದುಪಡಿಯ ಕೆಲಸವೂ ಮಾಡಿದ್ದಾರೆ. ಬಸವರಾಜ್‌ ಎಂಬುವವರು, “ನಾನು ಅದನ್ನು ನಿಮಗಾಗಿ ಸರಿಪಡಿಸಿದ್ದೇನೆ, ಇದು ಹೊಸ ಭಾರತ. ಮನೆಯೊಳಗೆ ನುಗ್ಗುತ್ತದೆ. ಕೊಲ್ಲುತ್ತದೆ ಕೂಡ. ಪ್ರವೇಶಿಸುತ್ತದೆ ಎನ್ನುವುದು ಬಹಳ ಮೃದುವಾದ ಪದ” ಎಂದು ರಿಪ್ಲೈ ಮಾಡಿದ್ದಾರೆ.

ಸಜಿತ್‌ ಎಂಬುವವರು “ಇಡೀ ಸಿನಿಮಾ ಗೂಗಲ್ ಟ್ರಾನ್ಸ್‌ಲೇಟ್‌ನಿಂದ ಆಗಬಾರದು ಎಂದು ಆಶಿಸುತ್ತೇನೆ. ಕನ್ನಡ ಅನುವಾದದ ಬಗ್ಗೆ ನಿಮ್ಮ ತಂಡಕ್ಕೆ ಸ್ವಲ್ಪ ಸಹಾಯದ ಅಗತ್ಯವಿದೆ” ಎಂದು ಸಲಹೆ ನೀಡಿದ್ದಾರೆ. ಮುಕುಂದ ಎನ್ನುವವರು, “ಹೊ! ಅಳಿಯಂದ್ರು, ಬಾವ ಬಾಮೈದ ಒಂದೇ ದಿನ ಪಿಚ್ಚರ್ ರಿಲೀಸ್ ಮಾಡ್ತಿದ್ದೀರಲ್ಲ, ಹಬ್ಬ ಬೆಂಗ್ಳೂರಲ್ಲಿ” ಎಂದು ಹಾಸ್ಯಚಟಾಕಿಯೂ ಹಾರಿಸಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/this-is-new-india-ranveer-singh-challenges-in-kannada-ahead-of-toxic-vs-dhurandhar-2-clash-442385.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo