
Karnataka
oi-Hitesh Y
Karnataka Coastal: ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ಹಿರಿಯ ಪತ್ರಕರ್ತ, ಬರಹಗಾರ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಕರಾವಳಿಯ ಅತಿಬುದ್ಧಿವಂತಿಕೆಯನ್ನು ಎಷ್ಟು ಹೊಗಳಿದರೂ ಸಾಲದು. ಇಲ್ಲಿ ಹುಟ್ಟಿಕೊಳ್ಳುತ್ತಿರುವ ಪುಟ್ಟಪುಟ್ಟ ನಗರಗಳ, ಪಟ್ಟಣಗಳ ಘನತ್ಯಾಜ್ಯ ವಿಲೇವಾರಿಯ ಕುರಿತಂತೆ ಊರೂರುಗಳ ನಡುವೆ ತಗಾದೆ, ವ್ಯಾಜ್ಯಗಳ ಪರಾಕ್ರಮ ಹೇಳಿತೀರದು. ಇಂತಹ ನೂರಾರು ಅರ್ಜಿಗಳು ಕಾರ್ಯಾಂಗ, ನ್ಯಾಯಾಂಗಗಳಲ್ಲಿ ವಿಲೇವಾರಿ ಕಾದು ಕುಳಿತಿವೆ. ಜನ, ಸ್ಥಳೀಯ ರಾಜಕೀಯಗಳು ಸಿಟ್ಟು, ದುಗುಡ, ದುಮ್ಮಾನಗಳಲ್ಲಿ ದಿನ ಕಳೆಯುತ್ತಿದ್ದಾರೆ. ಇವರು ಯಾರಿಗೂ ತಮ್ಮ ಕಾಲಡಿಯಲ್ಲೇ ಅಗ್ನಿಕುಂಡಗಳು ಪ್ರತಿಷ್ಠಾಪನೆ ಆಗುತ್ತಿರುವುದು ಗೊತ್ತೇ ಇಲ್ಲ; ಅಥವಾ ಗೊತ್ತಿದ್ದೂ ತಮ್ಮ ರಾಜಕೀಯ ಹಿತಾಸಕ್ತಿ / ಸಾಮಾಜಿಕ ದೊಡ್ಡಸ್ತಿಕೆಗಳನ್ನು ಕಾಪಾಡಿಕೊಂಡು ಏನೂ ಆಗೇ ಇಲ್ಲ, ಆದಾಗ ನೋಡಿಕೊಳ್ಳೋಣ ಎಂದುಕೊಂಡು ಸುಖದಿಂದಿದ್ದಾರೆ.

ಕರಾವಳಿಯಲ್ಲಿ ISPRL ಪಾದೂರು ಬಳಿ 2.5MMT ಮತ್ತು ಮಂಗಳೂರು ಬಳಿ 1.5 MMT ಕಚ್ಛಾತೈಲವನ್ನು ಭೂಗರ್ಭದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದೆ. ಸಾಮಾನ್ಯವಾಗಿ ಜನವಸತಿ ರಹಿತ, ಸುರಕ್ಷಿತ ಪ್ರದೇಶಗಳಲ್ಲಿ ಇರಬೇಕಾದಂತಹ ಈ ದಹನಶೀಲ ರಾಸಾಯನಿಕ ಸಂಗ್ರಹಾಗಾರಗಳನ್ನು, ಅವು ದೇಶದ ಸ್ಟ್ರಾಟಜಿಕ್ ಭದ್ರತೆಗೆ, ಎಂದು ವಾಜಪೇಯಿ ಅವರ ಕಾಲದಲ್ಲಿ ನಿರ್ಧರಿಸಿದ್ದಾಗ ಕರಾವಳಿ ದೊಡ್ಡ ಮನಸ್ಸಿನಿಂದ ಒಪ್ಪಿತ್ತು. 2018ರಲ್ಲಿ ಅದು ಕಾರ್ಯಾರಂಭ ಮಾಡಿದೆ. ಅಲ್ಲೀಗ ಅದನ್ನು ಖಾಸಗಿಯವರಿಗೆ ಬಾಡಿಗೆ ನೀಡಿ, ಅವರು ತಮ್ಮ ತೈಲ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಸಂಗ್ರಹದ ಫರ್ಸ್ಟ್ ರೈಟ್ ನಮಗೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಇಲ್ಲಿ, ಪತ್ರಿಕೆಗಳಲ್ಲಿ ಬರೆದಿದ್ದೇನೆ. ಈ ವ್ಯವಸ್ಥೆ ಹೇಗೆ ಕೆಲಸ ಮಾಡಲಿದೆ ಎಂಬುದು (ನಮ್ಮ ದುರಾದೃಷ್ಟಕ್ಕೆ) ಗಲ್ಫ್ ಕದನ ಮುಂದುವರಿದರೆ ನಮ್ಮ ಅನುಭವಕ್ಕೆ ಬರಲಿದೆ.
ಈಗ ಹೊಸತೊಂದು ಯೋಜನೆ ಜಾರಿಗೆ ಬಂದಾಗಿದೆ. ಇದಂತೂ ಊಹಿಸಿದರೆ ಆತಂಕ ಆಗುವಂತಹದು. 80,000 ಮೆಟ್ರಿಕ್ ಟನ್ ಪ್ರಮಾಣದಲ್ಲಿ LPGಯಂತಹ ದಹನಶೀಲ ಅನಿಲವನ್ನು ಸುರತ್ಕಲ್‌ನ ಬಾಳ ಬಳಿ, ನೆಲದಡಿ ಕೊರೆಯಲಾಗಿರುವ ಗುಹಾಂತರ ಸಂಗ್ರಹಾಗಾರದಲ್ಲಿ (caverns) ಶೇಖರಿಸಿಡಲು ವ್ಯವಸ್ಥೆ ಮಾಡಲಾಗಿದೆ.
ಇವೆಲ್ಲ ಜನವಸತಿ ದಟ್ಟಣೆ ಇರುವ ಜಾಗಗಳಲ್ಲಿ ಮಾಡಲು ಯೋಗ್ಯವಾದ ಯೋಜನೆಗಳೆ, ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ/ಒಪ್ಪಿಗೆ ಪಡೆಯಲಾಗಿದೆಯೆ ? ಇಂತಹದಕ್ಕೆಲ್ಲ ಉತ್ತರ ದೇವರೇ ಗತಿ. ಏನಾದರೂ ಹೆಚ್ಚುಕಡಿಮೆ ಆದರೆ ದೇವರ ಆಟ! ಕರಾವಳಿ ನಂಬಿದ ದೈವಂಕುಲೇ ನಮ್ಮನ್ನು ಕಾಪಾಡಬೇಕು! ಇಂದಿರುವ ಬಂಕರ್ ಬಸ್ಟರ್ ಶಸ್ತ್ರಾಸ್ತ್ರಗಳು ಆ ಆಳಕ್ಕೆ ಇಳಿಯಲಾರವೆ? ಮೊನ್ನೆ ಗಲ್ಫ್ ಕದನದಲ್ಲಿ ತೈಲ ಸಂಗ್ರಹಾಗಾರ, ತೈಲಬಾವಿ, ರಿಫೈನರಿಗಳಿಗೆಲ್ಲ ಬಾಂಬ್ ದಾಳಿ ಆದಾಗ, ಆ ಯಾವ ಜಾಗಗಳೂ ಜನವಸ್ತಿ ಪ್ರದೇಶಗಳಾಗಿರಲಿಲ್ಲ, ನಗರಗಳಿಂದ ದೂರ ಇದ್ದವು ಎಂಬುದನ್ನು ಗಮನಿಸಿದ್ದೀರಾ.
ದೇಶದ ಎರಡನೇ ಹಾಗೂ ದೇಶದ ಅತ್ಯಂತ ದೊಡ್ಡ LPG ಸಂಗ್ರಹಾಗಾರ ಇದು ಎಂದು ಮಂಗಳೂರಿನ LPG ಕ್ಯಾವರ್ನ್ ನಿರ್ಮಿಸಿರುವ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಸಂಸ್ಥೆ ಹೇಳಿಕೊಂಡಿದೆ. ನೆಲದಡಿ 220ಮತ್ತು 225 ಮೀ ಆಳದಲ್ಲಿ ರಚಿಸಲಾಗಿರುವ ಈ ಸಂಗ್ರಹಾಗಾರ ತಲುಪಲು 1100 ಮೀ (ಒಂದು ಕಿ.ಮೀಗೂ ಹೆಚ್ಚು) ಉದ್ದದ ಸುರಂಗ ರಚಿಸಲಾಗಿದೆಯಂತೆ; ಗ್ಯಾಸ್ ಲೀಕ್ ಆಗದಂತೆ ನೀರಿನ ತಡೆಗೋಡೆ ರಚಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. 854 ಕೋಟಿ ರೂ. ವೆಚ್ಚದ ಈ ಯೋಜನೆ 2025ರಲ್ಲಿ ಪೂರ್ಣಗೊಂಡು, ಅಲ್ಲಿ ಪ್ರಾಥಮಿಕ ತಪಾಸಣೆಗಳೂ ಪೂರ್ಣಗೊಂಡಿವೆ.
ಇನ್ನು ಜನ ಆಕ್ಷೇಪ ಎತ್ತಿದರೂ ಆಗುವಂತಹದು ಏನಿಲ್ಲ. ಹೆಚ್ಚೆಂದರೆ ಜನಪ್ರತಿನಿಧಿಗಳನ್ನು ಯಾಕೆ ಹೀಗೆ ನಮ್ಮನ್ನೆಲ್ಲ ಮರೆಯಲ್ಲಿಟ್ಟು ಮಾಡಿದಿರಿ ಎಂದು ಕೇಳಬಹುದು, ಮತ್ತು ನಮ್ಮ ಸ್ಥಿತಿಗೆ ನಾವೇ ಮರುಕ ಪಟ್ಟುಕೊಳ್ಳಬಹುದು. ರಾಜಕೀಯವಾಗಿ ಸಾರಾಸಗಟು ಮಾರಿಕೊಂಡಾಗ ಇಂತಹವೆಲ್ಲ ಆಗುವುದು ಸಹಜ. ನಾವೀಗ ಏನಿದ್ದರೂ ಘನತ್ಯಾಜ್ಯ ವಿಲೇವಾರಿಗಾಗಿ ಉರುಳಾಡಿಕೊಳ್ಳುವುದಕ್ಕೇ ಫಿಟ್. ಕರಾವಳಿ ಕರಾವಳಿಯ ಸಮುದ್ರ ತೀರ, ಎಲ್ಲವೂ ಇಂಚಿಂಚಾಗಿ ಇಲ್ಲಿನ ಜನರ ಕೈ ಬಿಟ್ಟು ಹೋಗುತ್ತಿದೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಅಗತ್ಯವಿದೆಯೇ.
ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-coastal-crisis-rajaram-tallur-highlights-hidden-dangers-behind-waste-management-battle-448443.html. xn--babytilbehr-pgb.com does not claim ownership of this content. All rights remain with the original publisher.
