
Karnataka
oi-Shankrappa Parangi
ಕರ್ನಾಟಕದಲ್ಲಿ ಶೋಷಿತರ ಅಭಿವೃದ್ಧಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿದೆ. ಅಸಾಮರ್ಥ್ಯ ಮುಚ್ಚಿಕೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಬೆನ್ನಿಗೆ ನಯವಾಗಿ ಇರಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.
ಇಂದು ಎಕ್ಸ್ ಪೋಸ್ಟ್ ಮಾಡಿರುವ ಬಿ.ವೈ.ವಿಜಯೇಂದ್ರ ಅವರು, ಪ್ರಸ್ತಕ ಸಾಲಿನ (2026-27) ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (SCSP) ಮತ್ತು ಬುಕಟ್ಟು ಉಪಯೋಜನೆ (TSP) ಅಡಿಯಲ್ಲಿ ಮೀಸಲಿಟ್ಟ ಒಟ್ಟು 44,632 ಕೋಟಿ ರೂಪಾಯಿಯಲ್ಲಿ ಬರೋಬ್ಬರಿ 14,200 ಕೋಟಿ ರೂ.ನಷ್ಟು ಹಣವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ದೂರಿದರು.

ಹಣ ಹೊಂದಿಸುವಲ್ಲಿ ಸರ್ಕಾರ ವಿಫಲ
ಕಳೆದ ಮೂರು ವರ್ಷಗಳಲ್ಲಿ ಸುಮಾರು 53,000 ಕೋಟಿ ರೂ.ಗಳಿಗೂ ಅಧಿಕ ಪರಿಶಿಷ್ಟ ಜಾತಿ, ಪಂಗಡಗಳ ಹಕ್ಕಿನ ಹಣವನ್ನು ಬೇರೆಡೆಗೆ ತಿರುಗಿಸಿರುವುದು ಈ ಕಾಂಗ್ರೆಸ್ ಸರ್ಕಾರದ “ದಲಿತ ವಿರೋಧಿ” ಮನಸ್ಥಿತಿಗೆ ಸಾಕ್ಷಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶೋಷಿತರ ಹಣ ವರ್ಗಾಯಿಸಿ, ನಿಮ್ಮ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದೇ ನಿಮ್ಮ ಸಾಮಾಜಿಕ ನ್ಯಾಯವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದೆಡೆ ದಲಿತರ ಕಲ್ಯಾಣದ ನಿಧಿಯನ್ನು ಲೂಟಿ ಮಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಿಗೆ ತಿಂಗಳಿಗೆ 5.98 ಲಕ್ಷ ರೂ. ವೇತನ ನೀಡುವ ಮೂಲಕ ತೆರಿಗೆದಾರರ ಹಣ ಪೋಲು ಮಾಡುತ್ತಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗಿಂತಲೂ ದುಪ್ಪಟ್ಟು ಸಂಬಳವನ್ನು ತನ್ನ ಪಕ್ಷದ ಕಾರ್ಯಕರ್ತರಿಗೆ ಹಂಚುತ್ತಿರುವ ನಿಮಗೆ ಯಾವ ನೈತಿಕತೆ ಉಳಿದಿದೆ. ಇದು ಕೇವಲ ಜನರ ಹಣದ ದುರುಪಯೋಗ ಮಾತ್ರವಲ್ಲ, ನಿಮ್ಮ ಅಧಿಕಾರದ ದರ್ಪ, ದೌಲತ್ತುಗಳ ನಿರ್ಲಜ್ಜ ಪ್ರದರ್ಶನ! ನಿಮ್ಮ ಈ ಎಲ್ಲ ಕರ್ಮಕಾಂಡಗಳಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಇದೇ ವಿಚಾರವಾಗಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಆರ್.ಅಶೋಕ್ ಅವರು, ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ? 4 ವರ್ಷಗಳಲ್ಲಿ 53,000 ಕೋಟಿ ರೂಪಾಯಿ ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ವಂಚಿಸಿದೆ ಎಂದು ಯಾವ ಯಾವ ವರ್ಷ ಎಷ್ಟು ಹಣ ಬಳಕೆ ಆಗಿದೆ ಎಂದು ಅವರು ಲೆಕ್ಕ ಕೊಟ್ಟಿದ್ದಾರೆ.
ದಲಿತರಿಗೆ ಸಿದ್ದರಾಮಯ್ಯರ ಕೊಡುಗೆ ಏನು?
2023-24ನೇ ಸಾಲಿನಲ್ಲಿ 11,114 ಕೋಟಿ ರೂಪಾಯಿ 2024-25ನೇ ಸಾಲಿನಲ್ಲಿ 14,282.38 ಕೋಟಿ ರೂಪಾಯಿ, 2025-26ನೇ ಸಾಲಿನಲ್ಲಿ 13,433 ಕೋಟಿ ರೂಪಾಯಿ, 2026-27ನೇ ಸಾಲಿನಲ್ಲಿ 14,198.93 ಕೋಟಿ ರೂಪಾಯಿ ವಂಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ನಿಮ್ಮ ಕೊಡಗೆಯಾದರೂ ಏನು ಸ್ವಾಮಿ? ದಲಿತರು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಹಿಂದ ರಾಜಕೀಯ ಮಾಡಿ, ಅವರು ವೋಟು ಗಿಟ್ಟಿಸಿಕೊಂಡು ಅಧಿಕಾರದ ಮೋಜು ಮಾಡಿದ್ದು ಬಿಟ್ಟರೆ ತಮ್ಮ ಸಾಧನೆಯಾದರೂ ಏನು ಸ್ವಾಮಿ? ಎಂದು ಲೇವಡಿ ಮಾಡಿದರು.
ದಿವಂಗತ ಮಾಜಿ ಸಿಎಂ ದೇವರಾಜು ಅರಸು ಅವರ ಮುಖ್ಯಮಂತ್ರಿ ಅಧಿಕಾರಾವಧಿಯ ರೆಕಾರ್ಡ್ ಮುರಿದಿದ್ದೀರಿ. ಆದರೆ ನಿಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದಾಖಲೆ ಅಂದರೆ ಪರಿಶಿಷ್ಟರ ಹಣವನ್ನು ಅವರ ಕಲ್ಯಾಣಕ್ಕೆ ವಿನಿಯೋಗಿಸದೆ ಬೇರೆ ಕಾರ್ಯಗಳಿಗೆ ಬಳಸಿ ಫಲಾನುಭವಿಗಳಿಗೆ ವಂಚಿಸಿದ್ದು ಎಂದರು.
ಎಷ್ಟು ವರ್ಷ ಕುರ್ಚಿಯಲ್ಲಿ ಕೂತಿದ್ದೀರಿ ಎನ್ನುವ ರೆಕಾರ್ಡ್ ಗಿಂತ, ಕುರ್ಚಿಯಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದೀರಿ ಎನ್ನುವ ಟ್ರ್ಯಾಕ್ ರೆಕಾರ್ಡ್ ಮುಖ್ಯ. ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಾದ ಹಣವನ್ನು ಕಬಳಿಸಿ ಅನ್ಯಾಯ ಮಾಡುತ್ತಿರುವುದು ಈ ದಲಿತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಅವರು ಕಿಡಿ ಕಾರಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/by-vijayendra-and-r-ashoka-slam-congress-over-diversion-of-scsp-tsp-funds-to-guarantee-schemes-448019.html. xn--babytilbehr-pgb.com does not claim ownership of this content. All rights remain with the original publisher.
