
Entertainment
oi-Manohara M
ಧ್ರುವ ಸರ್ಜಾ ನಟನೆಯ, ಪ್ರೇಮ್ ನಿರ್ದೇಶನದ ‘ಕೆಡಿ: ದ ಡೆವಿಲ್’ ಚಿತ್ರದ ‘ಸರ್ಸೀ ಸರ್ಸೀ..’ (ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’) ಹಾಡಿನ ವಿವಾದ ಈಗ ದೆಹಲಿ ತಲುಪಿದೆ. ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಮತ್ತು ಲೈಂಗಿಕ ಪ್ರಚೋದಕ ದೃಶ್ಯಗಳಿವೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೆ (CBFC) ಸೂಚಿಸಿದೆ.
ಸೆನ್ಸಾರ್ ಮಂಡಳಿಗೆ ಖಡಕ್ ಸೂಚನೆ
ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡಿನ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೆನ್ಸಾರ್ ಮಂಡಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ಕುರಿತು ಬಂದಿರುವ ದೂರುಗಳು ನಿಜವೆಂದು ಸಾಬೀತಾದಲ್ಲಿ, ತಕ್ಷಣವೇ ಎಲ್ಲ ಮಾಧ್ಯಮ ವೇದಿಕೆಗಳಿಂದ (ಡಿಜಿಟಲ್ & ಸೋಷಿಯಲ್ ಮೀಡಿಯಾ) ಈ ಹಾಡನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಚಿವಾಲಯ ನಿರ್ದೇಶನ ನೀಡಿದೆ. ಹಾಡಿನಲ್ಲಿ ಬಳಸಿರುವ ಸಾಹಿತ್ಯ ಮತ್ತು ನೃತ್ಯ ಸಂಯೋಜನೆಯು ಅಸಭ್ಯತೆಯಿಂದ ಕೂಡಿದೆ ಎಂದು ಅನೇಕರು ದೂರಿದ್ದಾರೆ.

ಈ ಹಿಂದೆಯೇ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ನೋಟಿಸ್ ನೀಡಿದ್ದವು. ಈಗ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿರುವುದು ಚಿತ್ರತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಕೆಡಿ ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಮುನ್ನ ಅಥವಾ ಹಾಡಿನ ಪ್ರಸಾರಕ್ಕೆ ಸಂಬಂಧಿಸಿದಂತೆ ಸೆನ್ಸಾರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಪರಿಶೀಲಿಸುವಂತೆಯೂ ಮಂಡಳಿಗೆ ತಿಳಿಸಲಾಗಿದೆ.
ಹಾಡಿನಲ್ಲಿನ ಅಸಭ್ಯತೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಯೂಟ್ಯೂಬ್ನಿಂದ ಹಾಡಿನ ಹಿಂದಿ ಆವೃತ್ತಿಯನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ. ಈ ಚಲನಚಿತ್ರ ಮತ್ತು ಸಂಗೀತ ವೀಡಿಯೊಗಳಲ್ಲಿನ ಆಕ್ಷೇಪಾರ್ಹ ಅಂಶಗಳ ಮೇಲೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ತಡೆಯಲು, ಅಗತ್ಯಬಿದ್ದರೆ ಚಲನಚಿತ್ರ ಪ್ರಮಾಣೀಕರಣದ ನಿಯಮಗಳನ್ನೇ ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ನಿರ್ದೇಶಕ ಪ್ರೇಮ್ಗೆ ಸಂಕಷ್ಟ?
ಈಗಾಗಲೇ ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದ್ದು, ಈಗ ಸರ್ಕಾರದ ಕಠಿಣ ನಿಲುವಿನಿಂದಾಗಿ ಇಡೀ ಚಿತ್ರತಂಡ ಆತಂಕಕ್ಕೆ ಒಳಗಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವು ಈ ವಿವಾದಕ್ಕೆ ಹೊಸ ತಿರುವು ನೀಡಿದೆ. ಕೇವಲ ಪ್ರಚಾರಕ್ಕಾಗಿ ಅಶ್ಲೀಲತೆಯನ್ನು ಬಳಸುವ ಸಿನೆಮಾಗಳಿಗೆ ಮತ್ತು ಹಾಡುಗಳಿಗೆ ಇನ್ಮುಂದೆ ಸೆನ್ಸಾರ್ ಮಂಡಳಿಯ ಕತ್ತರಿ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕುವ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲವೂ ವ್ಯಕ್ತವಾಗುತ್ತಿದೆ.
ಹಾಡು ನಾನು ಬರೆದಿಲ್ಲ, ಅನುವಾದ ಮಾಡಿದ್ದಷ್ಟೇ
‘ಸರ್ಸೀ ಸರ್ಸೀ’ ಹಾಡಿನ ಹಿಂದಿ ಆವೃತ್ತಿಗೆ ಸಾಹಿತ್ಯ ಬರೆದಿದ್ದಾರೆನ್ನಲಾದ ರಕೀಬ್ ಆಲಂ, ಈಗ ಅಚ್ಚರಿಯ ಹೇಳಿಕೆ ನೀಡುವ ಮೂಲಕ ವಿವಾದದಿಂದ ದೂರ ಸರಿದಿದ್ದಾರೆ. “ಈ ಹಾಡಿನ ಸಾಹಿತ್ಯವನ್ನು ನಾನು ಬರೆದಿಲ್ಲ. ಚಿತ್ರದ ನಿರ್ದೇಶಕ ಪ್ರೇಮ್ ಅವರು ಕನ್ನಡದಲ್ಲಿ ಬರೆದ ಸಾಹಿತ್ಯವನ್ನೇ ನಾನು ಕೇವಲ ಹಿಂದಿಗೆ ಅನುವಾದ ಮಾಡಿದ್ದೇನೆ. ಅವರು ಹೇಳಿದ ಪದಗಳನ್ನೇ ಬಳಸಲು ನನಗೆ ಸೂಚಿಸಲಾಗಿತ್ತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ ಡಬಲ್ ಮೀನಿಂಗ್ ಸಾಹಿತ್ಯ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಮತ್ತು ಸೆನ್ಸಾರ್ ಮಂಡಳಿಯಿಂದ ತೊಂದರೆಯಾಗುತ್ತದೆ ಎಂದು ನಾನು ಚಿತ್ರತಂಡಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದೆ. ಇಂತಹ ಸಾಹಿತ್ಯ ಬರೆಯಲು ನಾನು ನಿರಾಕರಿಸಿದ್ದೆ ಎಂದೂ ಅವರು ಹೇಳಿದ್ದಾರೆ. ‘ಪುಷ್ಪ’ ಮತ್ತು ರಾಮ್ ಚರಣ್ ಅವರ ‘ಪೆದ್ದಿ’ ಅಂತಹ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ನನಗೆ, ಈ ಹಾಡಿನಿಂದಾಗಿ ಅವಮಾನವಾಗಿದೆ. ಒಳ್ಳೆಯ ಹಾಡುಗಳನ್ನು ಬರೆದಾಗ ಗುರುತಿಸದ ಜನರು, ಈಗ ಇಂತಹ ವಿವಾದಗಳಿಂದ ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kd-movie-controversy-centre-directs-cbfc-to-remove-song-kannada-director-prem-film-row-escalates-447477.html. xn--babytilbehr-pgb.com does not claim ownership of this content. All rights remain with the original publisher.
