ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತಕ್ಕೆ ಮಾಸ್ಟರ್ ಪ್ಲಾನ್: 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ | Free HPV Vaccine for Girls: Central Govt announced New Initiative to Prevent Cervical Cancer

India

oi-Shankrappa Parangi

HPV Vaccine Drive: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಉತ್ತೇಜನ, 2047ಕ್ಕೆ ದೇಶದ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್ (5 ಟ್ರಿಲಿಯನ್ ಡಾಲರ್) ಮುಟ್ಟುವ ಗುರಿ ಸಾಧಿಸುವುದು ಸೇರಿ ಹಲವು ದೂರದೃಷ್ಟಿ ಯೋಜನೆಗಳತ್ತ ಗಮನ ಹರಿಸಿರುವ ಕೇಂದ್ರ ಸರ್ಕಾರವು ದೇಶದ ಮಹಿಳೆಯರ ಆರೋಗ್ಯ ರಕ್ಷಣೆ ವಿಚಾರವನ್ನು ಮರೆತಿಲ್ಲ. ಹೆಣ್ಣುಮಕ್ಕಳ ಆರೋಗ್ಯ ಸುಧಾರಣೆಗೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಹದಿಹರೆಯದ ಹುಡುಗಿಯರಿಗೆ ರಾಷ್ಟ್ರವ್ಯಾಪಿ ‘ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಲಸಿಕೆ ಪರಿಚಯಿಸಿದೆ. ಲಸಿಕೆಯ ಉಚಿತ ವಿತರಣೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಏನಿದು ಲಸಿಕೆ? ಬಳಕೆಯಿಂದಾಗುವ ಪ್ರಯೋಜನಗಳೇನು? ಅಪಾಯಕಾರಿಯೆ? ಯಾರನ್ನು ಗುರಿಯಾಗಿಸಿ ಹೊಸ ಅರೋಗ್ಯ ಉಪಕ್ರಮ ಘೋಷಿಸಲಾಗಿದೆ? ಈ ಎಲ್ಲ ಮಾಹಿತಿ ಮುಂದಿನ ಸಾಲುಗಳಲ್ಲಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಈ ಉಚಿತ ಲಸಿಕೆ ವಿತರಣೆ ಉಪಕ್ರಮವು ಸರ್ಕಾರಿ ಆರೋಗ್ಯ ಸೌಲಭ್ಯಗಳ ಮೂಲಕ ಒದಗಿಸಲು ತೀರ್ಮಾನಿಸಲಾಗಿದೆ. 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳನ್ನು ಗುರಿಯಾಗಿರಿಸಿಕೊಂಡು ಲಸಿಕೆ ವಿತರಣೆ ಮಾಡುವ ಮಹತ್ತರ ಪ್ರಯತ್ನ ಇದಾಗಿದೆ. ದೇಶದಲ್ಲಿನ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಆರಂಭಿಕ ಹಂತದಲ್ಲೇ ತಡೆಗಟ್ಟುವ ಉದ್ದೇಶ ಹೊಂದಿದೆ. ಸಾವಿರಾರು ಮಹಿಳೆಯರನ್ನು ಈ ಗರ್ಭಕಂಠದ ಕ್ಯಾನ್ಸರ್ ಸಾವಿಗೂ ನೂಕಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಸಾವು ನೋವು, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿಯೊಂದಿಗೆ ಉಪಕ್ರಮವನ್ನು ಘೋಷಿಸಲಾಗಿದೆ.

Free HPV Vaccine for Girls

ಆರೋಗ್ಯ ಕಾರ್ಯಕ್ರಮಗಳಡಿ ಉಚಿತ ಲಸಿಕೆ ವಿತರಣೆ

ಕೇಂದ್ರ ‘ಸ್ವಸ್ಥ ನಾರಿ’ ಶೀರ್ಷಿಕೆಯಡಿ ಭಾರತಾದ್ಯಂತ ಲಸಿಕೆ ವಿತರಣೆ ಅಭಿಯಾನ ಆರಂಭಿಸುವುದಾಗಿ ತಿಳಿಸಿದೆ. ಕೇಂದ್ರ ಸಚಿವಾಲಯದ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಈ ‘ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಲಸಿಕೆಯನ್ನು ದೇಶದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಲು ರೂಪರೇಷೆ ಸಿದ್ಧಪಡಿಸಲಾಗಿದೆ. ಈ ಲಸಿಕೆ ಬಗ್ಗೆ ಜಾಗೃತಿ ಸಹ ಮೂಡಿಸಲಾಗುತ್ತಿದೆ.

ಎಲ್ಲೆಲ್ಲಿ ಈ ಲಸಿಕೆ ದೊರೆಯುತ್ತದೆ?

1. ಆಯುಷ್ಮಾನ್ ಆರೋಗ್ಯ ಮಂದಿರಗಳು
2. ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳು
3. ಸರ್ಕಾರಿ ವೈದ್ಯಕೀಯ ಕಾಲೇಜುಗಳು

ಈ ಲಸಿಕೆಯನ್ನು ಹೆಣ್ಣುಮಕ್ಕಳು ಸ್ವಯಂ ಪ್ರೇರಿತವಾಗಿ ಪಡೆಯಬಹುದಾಗಿದೆ. ತರಬೇತಿ ಪಡೆದ ವೈದ್ಯಕೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಆರೋಗ್ಯ ಸಚಿವಾಲಯ ಲಸಿಕೆ ಕೊಟ್ಟು ಸುಮ್ಮನಾಗದೇ, ಲಸಿಕೆ ಸ್ವೀಕರಿಸುವವರನ್ನು ಮೇಲ್ವಿಚಾರಣೆ ಮಾಡಲು ಹಾಗೂ ಆ ಲಸಿಕೆಯಿಂದ ಹೆಣ್ಣುಮಕ್ಕಳಲ್ಲಿ ಯಾವುದಾದರೂ ಅಪರೂಪದ ಅಡ್ಡ ಪರಿಣಾಮಗಳು, ಅನಾರೋಗ್ಯಕ್ಕೆ ತುತ್ತಾಗುವ ಸಂಭವಗಳು ಇವೆಯಾ? ಎಂದು ನಿರ್ವಹಣೆ ಮಾಡಲಿದೆ. ಅದಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಸಚಿವಾಲಯ ನಿರ್ಧರಿಸಿದೆ.

160 ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

‘ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಲಸಿಕೆಯು ಜಾಗತಿಕವಾಗಿ 160 ಕ್ಕೂ ಹೆಚ್ಚು ದೇಶಗಳಲ್ಲಿ ನೀಡಲಾಗುತ್ತಿದೆ. ಭಾರತವು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮಗಳಲ್ಲಿ ಈಗಾಗಲೇ ಎಚ್‌ಪಿವಿ ಲಸಿಕೆಯನ್ನು ಪರಿಚಯಿಸಿದೆ. ಹೆಣ್ಣುಮಕ್ಕಳಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಲ್ಲೆಡೆ ಲಸಿಕೆ ಉಚಿತವಾಗಿ ಸಿಗುವಂತೆ ಮಾಡುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜಾಗತಿಕ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಲಿದೆ.

ಲಸಿಕೆ ಪೂರೈಕೆ ಮತ್ತು ಅನುಮೋದನೆ

ದೇಶಾದ್ಯಂತ ಮಹಿಳೆಯರಿಗೆ ಈ ಲಸಿಕೆ ನೀಡಲು ಬೇಕಾದ ಅಗತ್ಯ ಪೂರೈಕೆಗಾಗಿ ಭಾರತ ಸರ್ಕಾರ ಲಸಿಕೆ ಒಕ್ಕೂಟವಾದ ‘ಗವಿ’ ಜೊತೆಗಿನ ಪಾಲುದಾರಿಕೆ ಹೊಂದಿದೆ. ವಿಶ್ವಸಂಸ್ಥೆ, ಯುನಿಸೆಫ್ ಒಪ್ಪಿರುವ ಖಾಸಗಿ ಲಸಿಕೆ ಪೂರೈಕೆ ಒಕ್ಕೂಟ ‘ಗವಿ’ ದೇಶಾದ್ಯಂತ ಲಸಿಕೆ ಸರಬರಾಜುಗಳ ಹಕ್ಕು ಪಡೆದುಕೊಂಡಿದೆ. ಇದು ಕಟ್ಟುನಿಟ್ಟಾದ ಸುರಕ್ಷತೆ ಮತ್ತು ಶೇಖರಣಾ ಮಾನದಂಡಗಳನ್ನು ಪೂರೈಸುವ ಉತ್ತಮ ಗುಣಮಟ್ಟದ ಲಸಿಕೆಗಳನ್ನು ಖಚಿತಪಡಿಸುತ್ತದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಗಳು ನಂಬಿವೆ. ಅದರಂತೆ ಅಗತ್ಯ, ಗುಣಮಟ್ಟದ ಲಸಿಕೆ ಪೂರೈಸುವಲ್ಲಿ ಗವಿ ಖ್ಯಾತಿ ಪಡೆದಿದೆ. ಹೀಗಾಗಿ ‘ಗವಿ’ ಲಸಿಕೆ ಪೂರೈಕೆಗೆ ಸರ್ಕಾರ ಅನುಮೋದನೆ ನೀಡಿದೆ.

ಮಹಿಳೆ ಆರೋಗ್ಯ ರಕ್ಷಣೆಯ ಪ್ರಮುಖ ಈ ಲಸಿಕೆ ವಿತರಣೆ ನಿರ್ಧಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ವಯಂ ಮತ್ತು ಏಕಪಕ್ಷಿಯವಾಗಿ ಕೈಗೊಂಡಿಲ್ಲ. ಬದಲಾಗಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (NTAGI) ವೈಜ್ಞಾನಿಕ ವಿಮರ್ಶೆ ಮತ್ತು ಶಿಫಾರಸುಗಳನ್ನು ಅನುಸರಿಸಿ ತೀರ್ಮಾನಿಸಿದೆ. ಭಾರತವು ಉದ್ದೇಶಿತ ಲಸಿಕೆಯಲ್ಲಿ ‘ಕ್ವಾಡ್ರಿವೇಲೆಂಟ್ ಎಚ್‌ಪಿವಿ ಲಸಿಕೆ ಗಾರ್ಡಸಿಲ್’ ಬಳಸಲಿದೆ. ಇದು ಗರ್ಭಕಂಠದ ಕ್ಯಾನ್ಸರ್‌ಗೆ ಸಂಬಂಧಿಸಿದ ಅತ್ಯಂತ ಹಾನಿಕಾರಕ ಎಚ್‌ಪಿವಿ ಪ್ರಕಾರಗಳು ಮತ್ತು ಜನನಾಂಗದ ನರಹುಲಿಗಳನ್ನು ಉಂಟು ಮಾಡುವವರ ವಿರುದ್ಧ ರಕ್ಷಣೆ ನೀಡುತ್ತದೆ.

ಲಸಿಕೆ ವಿತರಣೆಯ ಮಹತ್ವ ಏನು?

ಭಾರತದಲ್ಲಿ ಮಹಿಳೆಯರಿಗೆ ಅತ್ಯಂತ ಗಂಭೀರವಾದ ಆರೋಗ್ಯ ಕಾಳಜಿಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಸಹ ಒಂದಾಗಿದೆ. ಇದು ಪ್ರಸ್ತುತ ಭಾರತೀಯ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಈ ಅನಾರೋಗ್ಯ ಸಮಸ್ಯೆಯು ಮಹಿಳೆಯರನ್ನು ಸಾವಿಗೂ ಕಾರಣವಾಗುಷ್ಟು ಗಂಭೀರವಾಗಿದೆ. ಹೀಗಾಗಿ ಇದರಿಂದ ಮಹಿಳೆ ರಕ್ಷಣೆ ಅಗತ್ಯವಾಗಿದೆ ಎಂದು ಕೇಂದ್ರ ನಂಬಿದೆ.

ಅಡ್ಡ ಪರಿಣಾಮವಿದೆಯೇ?: ಇದು ಜಾಗತಿಕವಾಗಿ 160ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿರುವ ಸುರಕ್ಷಿತ ಲಸಿಕೆಯಾಗಿದೆ. ಲಸಿಕೆ ನೀಡಿದ ನಂತರ ತರಬೇತಿ ಪಡೆದ ವೈದ್ಯಕೀಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಾರೆ. ಸಾಮಾನ್ಯ ಲಸಿಕೆಗಳಂತೆ ಸಣ್ಣ ಪ್ರಮಾಣದ ನೋವು ಅಥವಾ ಜ್ವರ ಕಾಣಿಸಿಕೊಳ್ಳಬಹುದು, ಆದರೆ ಗಂಭೀರ ಸಮಸ್ಯೆಗಳು ಅಪರೂಪ.

80,000 ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣ

ದೇಶದಲ್ಲಿ ವಾರ್ಷಿಕ ಸುಮಾರು 80,000 ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. 42,000 ಕ್ಕೂ ಹೆಚ್ಚು ಮಹಿಳೆಯರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಶೇಕಡಾ 80 ಕ್ಕೂ ಹೆಚ್ಚು ಪ್ರಕರಣಗಳು ಹೆಚ್ಚಿನ ಅಪಾಯದ HPV ಪ್ರಕಾರಗಳಿಗೆ (HPV 16 ಮತ್ತು 18) ಸಂಬಂಧಿಸಿದೆ. ಮುಂಬರುವ ದಶಕಗಳಲ್ಲಿ ಲಸಿಕೆ ವಿತರಣೆ ಆರಂಭಿಸುತ್ತಿದ್ದಂತೆ ಈ ಪ್ರಕರಣ ವರದಿ, ಸಾವು ನೋವು ಕಡಿಮೆ ಆಗಲಿದೆ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.

ಲಸಿಕೆಯಿಂದ ಗುಣಮುಖ: ಅಧ್ಯಯನದಿಂದ ಬಹಿರಂಗ

ವಿಶ್ವದಾದ್ಯಂತ 2006 ರಿಂದಲೇ 500 ಮಿಲಿಯನ್‌ಗಿಂತಲೂ ಹೆಚ್ಚು ಡೋಸ್‌ಗಳ HPV ಲಸಿಕೆಗಳನ್ನು ನೀಡಲಾಗಿದೆ. ಈ ಲಸಿಕೆಯು HPV ವಿಧಗಳಿಂದ ಉಂಟಾಗುವ ಗರ್ಭ ಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಪ್ರಮಾಣ ಶೇ.93 ರಷ್ಟು ಮತ್ತು 100ರಷ್ಟಿದೆ ಎಂದು ತಜ್ಞರ ಅಧ್ಯಯನಗಳಿಂದ ಸಾಬೀತಾಗಿದೆ.

HPV ಎಂದರೇನು? ಹೇಗೆ ಹರಡುತ್ತದೆ?

ಹ್ಯೂಮನ್ ಪ್ಯಾಪಿಲೋಮ್ ವೈರಸ್ (HPV) ಚರ್ಮದಿಂದ ಚರ್ಮಕ್ಕೆ ನಿಕಟ ಸಂಪರ್ಕದ ಮೂಲಕ ಹರಡುವ ಸಾಮಾನ್ಯ ವೈರಸ್‌ ಆಗಿದೆ. ಈ ವೈರಸ್‌ನ ಸೋಂಕು ಆರಂಭದಲ್ಲಿ ತೀವ್ರ ನೋವು ಉಂಟು ಮಾಡುವುದಿಲ್ಲ. ದೇಹ ಸೇರಿದ ಬಳಿಕ ವರ್ಷಗಳ ಕಾಲ ನೆಲೆಸುತ್ತದೆ. ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಅಥವಾ ತಡೆಯದಿದ್ದರೆ ಕಾಲಾನಂತರದಲ್ಲಿ ಅದು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈ ವೈರಸ್ ಪೈಕಿ HPV 16 ಮತ್ತು HPV 18 ವಿಧಗಳು ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿವೆ.

14 ವರ್ಷದ ಹೆಣ್ಣುಮಕ್ಕಳ ಟಾರ್ಗೆಟ್

ಅಧ್ಯಯನ ನಡೆಸಿದ ಆರೋಗ್ಯ ಅಧಿಕಾರಿಗಳು ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡುವಂತೆ ಶಿಫಾರಸು ಮಾಡುತ್ತಾರೆ. ಹೀಗಾಗಿ 14 ವರ್ಷ ವಯಸ್ಸಿನಲ್ಲಿ ಲಸಿಕೆ ನೀಡುವುದರಿಂದ ವೈರಸ್ ನಿರ್ನಾಮವಾಗುತ್ತದೆ. ಆ ವಯಸ್ಸಿನಲ್ಲಿ ಹೆಣ್ಣುಮಕ್ಕಳ ದೇಹ ಈ ವೈರಸ್‌ಗೆ ಒಡ್ಡಿಕೊಳ್ಳುವ ಮೊದಲೇ ಲಸಿಕೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಶುರು ಮಾಡುತ್ತದೆ. ಈ ಕಾರಣದಿಂದ ಹದಿನಾಲ್ಕು ವರ್ಷದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಉಚಿತ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಲಸಿಕೆಯಿಂದ ಆರೋಗ್ಯ ರಕ್ಷಣೆಯ ಖಾತ್ರಿ ಇದೆಯೇ?

* ಬಲವಾದ ಮತ್ತು ದೀರ್ಘ ಕಾಲೀನ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ಸಂಭವನೀಯ ಎಚ್‌ಪಿವಿ ಸೋಂಕು ಬಲಗೊಳ್ಳುವ ಮುನ್ನ ರಕ್ಷಣೆ ಸಿಗುತ್ತದೆ
* ಭವಿಷ್ಯದ ಗರ್ಭ ಕಂಠದ ಕ್ಯಾನ್ಸರ್ ಅಪಾಯ ಗಮನಾರ್ಹ ಇಳಿಕೆ ಆಗುತ್ತದೆ.
* ಲಸಿಕೆ ವಿತರಣೆ ಬಳಿಕ ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆ

ಎಷ್ಟು ಡೋಸ್ ಲಸಿಕೆ ಬೇಕಾಗುತ್ತದೆ?

ಜಾಗತಿಕ ಅಧ್ಯಯನಗಳ ಪ್ರಕಾರ, HPV ಲಸಿಕೆಯನ್ನು ಕೇವಲ ಒಂದೇ ಡೋಸ್ ಪಡೆದರೂ ಅದರಿಂದ ಸಾಕಷ್ಟು ಆರೋಗ್ಯ ರಕ್ಷಣೆ ಸಿಗುತ್ತದೆ ಎಂದು ನಂಬಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಸಲಹಾ ಗುಂಪುಗಳು ಒಂದೇ ಡೋಸ್ ನೀಡುವಂತೆ ಹೇಳಿದರೆ, ಕೆಲವು ಸಂಸ್ಥೆಗಳು ಹದಿ ಹರೆಯದವರಿಗೆ ಎರಡು ಡೋಸ್ ನೀಡಿದರೂ ಹೆಚ್ಚಿನ ರಕ್ಷಣೆ ಒದಗಿಸಬಹುದೆಂದು ತಿಳಿಸಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಿನ ಡೋಸ್ ನೀಡಬೇಕಾಗುತ್ತದೆ. ಈ ಕ್ರಮದಲ್ಲಿ ಲಸಿಕೆ ವಿತರಣೆಯು ಬೇರೆ ಬೇರ ದೇಶಗಳಲ್ಲಿ ನಡೆದಿದೆ.

ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳ ಆರೋಗ್ಯ ರಕ್ಷಿಸಿದರೆ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆದಂತೆ ಎಂಬುದನ್ನು ಆರೋಗ್ಯ ತಜ್ಞರು ನಂಬಿದ್ದಾರೆ. ಈ ಉಪ್ರಕಮ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಲ್ಲಿ ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ. ಭಾರತವು ಆರೋಗ್ಯಕರ ಪೀಳಿಗೆಯನ್ನು ಹೊಂದುತ್ತದೆ.

ಗರ್ಭಕಂಠದ ಕ್ಯಾನ್ಸರ್, ಲಸಿಕೆ ಬಗ್ಗೆ ಜನರು ಪದೇ ಪದೇ ಕೇಳುವ ಪ್ರಶ್ನೆಗಳು (FAQs)

1. ಎಚ್‌ಪಿವಿ (HPV) ಲಸಿಕೆ ಎಂದರೇನು ಮತ್ತು ಅದು ಏಕೆ ಮುಖ್ಯ?

HPV ಎಂದರೆ ಹ್ಯೂಮನ್ ಪ್ಯಾಪಿಲೋಮವೈರಸ್. ಇದು ಗರ್ಭಕಂಠದ ಕ್ಯಾನ್ಸರ್ (Cervical Cancer) ಉಂಟುಮಾಡುವ ಪ್ರಮುಖ ವೈರಸ್ ಆಗಿದೆ. ಈ ಲಸಿಕೆಯನ್ನು ನೀಡುವುದರಿಂದ ಭವಿಷ್ಯದಲ್ಲಿ ಮಹಿಳೆಯರಿಗೆ ಬರುವ ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ತಡೆಗಟ್ಟಬಹುದು.

2. ಈ ಉಚಿತ ಲಸಿಕೆಯನ್ನು ಯಾರಿಗೆ ನೀಡಲಾಗುತ್ತದೆ?

ಕೇಂದ್ರ ಸರ್ಕಾರದ ಈ ಯೋಜನೆಯಡಿ ಮುಖ್ಯವಾಗಿ 9 ರಿಂದ 14 ವರ್ಷ ವಯಸ್ಸಿನ ಹದಿಹರೆಯದ ಹೆಣ್ಣುಮಕ್ಕಳಿಗೆ ಈ ಲಸಿಕೆಯನ್ನು ನೀಡಲು ಆದ್ಯತೆ ನೀಡಲಾಗುತ್ತದೆ.

3. ಈ ಲಸಿಕೆ ಎಲ್ಲಿ ಉಚಿತವಾಗಿ ದೊರೆಯುತ್ತದೆ?

ಈ ಲಸಿಕೆಯು ಸರ್ಕಾರದ ಆಯುಷ್ಮಾನ್ ಆರೋಗ್ಯ ಮಂದಿರಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC), ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

4. ಈ ಲಸಿಕೆ ಸುರಕ್ಷಿತವೇ? ಅಡ್ಡ ಪರಿಣಾಮಗಳಿವೆಯೇ?

ಹೌದು, ಇದು ಜಾಗತಿಕವಾಗಿ 160ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿರುವ ಸುರಕ್ಷಿತ ಲಸಿಕೆಯಾಗಿದೆ. ಲಸಿಕೆ ನೀಡಿದ ನಂತರ ತರಬೇತಿ ಪಡೆದ ವೈದ್ಯಕೀಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಾರೆ. ಸಾಮಾನ್ಯ ಲಸಿಕೆಗಳಂತೆ ಸಣ್ಣ ಪ್ರಮಾಣದ ನೋವು ಅಥವಾ ಜ್ವರ ಕಾಣಿಸಿಕೊಳ್ಳಬಹುದು, ಆದರೆ ಗಂಭೀರ ಸಮಸ್ಯೆಗಳು ಅಪರೂಪ.

5. ಲಸಿಕೆ ಪಡೆಯಲು/ನೋಂದಣಿ ಮಾಡುವುದು ಹೇಗೆ?

ಸರ್ಕಾರಿ ಶಾಲೆಗಳ ಮೂಲಕ ಅಥವಾ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಲಸಿಕೆ ಪಡೆಯಬಹುದು. ಹೆಚ್ಚಿನ ವಿವರಗಳಿಗಾಗಿ ಆರೋಗ್ಯ ಇಲಾಖೆಯ ಅಧಿಕೃತ ಪೋರ್ಟಲ್ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/free-hpv-vaccine-for-girls-central-govt-announced-new-initiative-to-prevent-cervical-cancer-445055.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo