
Sports
oi-Madhusudhan KR
Ricky Ponting: ವಿಶ್ವದ ಅತ್ಯಂತ ದೊಡ್ಡ ಲೀಗ್ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದರ 19ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಟಿ20 ಪ್ರತಿಭೆಗಳನ್ನು ಹೊರತರಲು ಇಂಡಿಯನ್ ಪ್ರೀಮಿಯರ್ ಲೀಗ್ ಎಷ್ಟು ಮಹತ್ವ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಟೀಮ್ ಇಂಡಿಯಾದ ಅದ್ಭುತ ಟಿ20 ಶಕ್ತಿಯನ್ನು ಬೆಳೆಸುವಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಮುಖ ಪಾತ್ರ ವಹಿಸಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿರುವ ಪಾಂಟಿಂಗ್, “ಐಪಿಎಲ್ ಪಂದ್ಯಗಳ ತೀವ್ರತೆ ಮತ್ತು ಅಲ್ಲಿನ ಒತ್ತಡದ ಪರಿಸ್ಥಿತಿಗಳು ಭಾರತೀಯ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸಜ್ಜುಗೊಳಿಸುತ್ತವೆ,” ಎಂದು ಹೇಳಿದ್ದಾರೆ.

ಅಹಮದಾಬಾದ್ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಈ ಫಾರ್ಮ್ಯಾಟ್ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಸತತವಾಗಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ಭಾರತ ಬರೆಯಿತು.
ನ್ಯೂಜಿಲೆಂಡ್ ವಿರುದ್ಧ ಭಾರತ ದಾಖಲೆ
‘ದಿ ಐಸಿಸಿ ರಿವ್ಯೂ’ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಂಟಿಂಗ್, “ಕಳೆದ ಕೆಲವು ವರ್ಷಗಳಿಂದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ಸಾಧಿಸುತ್ತಿರುವ ಯಶಸ್ಸು ಪ್ರಸ್ತುತ ತಂಡದ ಬಲವನ್ನು ಎತ್ತಿ ತೋರಿಸುತ್ತದೆ,” ಎಂದು ಶ್ಲಾಘಿಸಿದ್ದಾರೆ.
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 255/5 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ.
ಮಿಂಚಿದ ಸಂಜು, ಬುಮ್ರಾ
ಸಂಜು ಸ್ಯಾಮ್ಸನ್ (89) ಮತ್ತು ಅಭಿಷೇಕ್ ಶರ್ಮಾ (52) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಈ ಸಾಧನೆ ಮಾಡಿತು. ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಕೂಡ ಪ್ರಮುಖ ಪಾತ್ರವಹಿಸಿತು. ಇನ್ನೂ ಈ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಪಡೆದರೆ, ಜಸ್ಪ್ರೀತ್ ಬುಮ್ರಾ ಫೈನಲ್ ಪಂದ್ಯದ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು.
ಭಾರತ ತಂಡವನ್ನು ಹಾಡಿಹೊಗಳಿದ ಪಾಂಟಿಂಗ್
“ಟೀಂ ಇಂಡಿಯಾದ ಸಾಧನೆಯನ್ನು ಅಲ್ಲಗಳೆಯುವುದು ಅಥವಾ ಇದಕ್ಕೆ ವಿರುದ್ಧವಾಗಿ ವಾದಿಸುವುದು ನಿಜಕ್ಕೂ ಕಷ್ಟ. ನೀವು ಕೇವಲ ಟಿ20 ತಂಡವನ್ನಷ್ಟೇ ಅಲ್ಲದೆ, ಕಳೆದ ಐದಾರು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತದ ಸೀಮಿತ ಓವರ್ಗಳ ದಾಖಲೆಯನ್ನು ಗಮನಿಸಿದರೆ, ಅದು ನಿಜಕ್ಕೂ ಗಮನಾರ್ಹವಾಗಿದೆ,” ಎಂದು ಪಾಂಟಿಂಗ್ ಹೇಳಿದ್ದಾರೆ.
ಟೀಂ ಇಂಡಿಯಾಗೆ ನನ್ನದೊಂದು ಸಲಾಂ: ಪಾಂಟಿಂಗ್
“ಇದು ಕೇವಲ ಟಿ20 ತಂಡವಷ್ಟೇ ಅಲ್ಲ, ಅತ್ಯಂತ ಬಲಿಷ್ಠವಾದ ಭಾರತೀಯ ಸೀಮಿತ ಓವರ್ಗಳ ತಂಡವಾಗಿದೆ. ಸತತವಾಗಿ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಇವರ ಸಾಧನೆಗೆ ನನ್ನದೊಂದು ಸಲಾಂ,” ಎಂದು ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಐಪಿಎಲ್ನಲ್ಲಿ ಸತತವಾಗಿ ಹೆಚ್ಚು ಒತ್ತಡದ ಪಂದ್ಯಗಳನ್ನು ಆಡುವುದರಿಂದ ಭಾರತೀಯ ಆಟಗಾರರು ಉತ್ತಮ ಅನುಭವ ಪಡೆಯುತ್ತಾರೆ. ಐಪಿಎಲ್ನಲ್ಲಿನ ಸ್ಪರ್ಧಾತ್ಮಕತೆಯು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಷ್ಟು ಮಹತ್ವ ಹಾಗೂ ಅದು ಆಟಗಾರರನ್ನು ಹೇಗೆ ಸಜ್ಜುಗೊಳಿಸುತ್ತದೆ ಎಂಬುದನ್ನು ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ವಿವರಿಸಿದ್ದಾರೆ.
“ಪ್ರಸ್ತುತ ತಂಡದ ವಿಷಯದಲ್ಲಿ ಬಹುಶಃ ಗಮನಹರಿಸದೆ ಬಿಟ್ಟಿರುವ ಒಂದು ಪ್ರಮುಖ ಅಂಶವೆಂದರೆ, ಈ ಆಟಗಾರರು ಹೊಂದಿರುವ ಅಪಾರ ಅನುಭವ ಮತ್ತು ಅವರು ಆಡಿರುವ ಕ್ರಿಕೆಟ್ನ ಪ್ರಮಾಣ. ಅದು ಅಂತಾರಾಷ್ಟ್ರೀಯ ಕ್ರಿಕೆಟ್ ಇರಲಿ ಅಥವಾ ಕೇವಲ ಐಪಿಎಲ್ ಇರಲಿ, ಇವೆಲ್ಲವೂ ಅವರಿಗೆ ದೊಡ್ಡ ಮಟ್ಟದ ಅನುಭವವನ್ನು ನೀಡಿವೆ,” ಎಂದು ಪಾಂಟಿಂಗ್ ಹೇಳಿದ್ದಾರೆ. ಹೀಗೆ ಟೀಂ ಇಂಡಿಯಾ ಆಟಗಾರರನ್ನು ಟಿ20 ವಿಶ್ವಕಪ್ಗೆ ಐಪಿಎಲ್ ಹೇಗೆ ತಯಾರಿ ಮಾಡುತ್ತದೆ ಎನ್ನುವ ಮನದಾಳದ ಮಾತನ್ನು ಪಾಂಟಿಂಗ್ ಬಿಚ್ಚಿಟ್ಟಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ricky-ponting-credits-ipl-for-shaping-india-s-t20-dominance-after-back-to-back-world-cup-wins-447359.html. xn--babytilbehr-pgb.com does not claim ownership of this content. All rights remain with the original publisher.
