ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು | Tamil Nadu Election 2026: DMK vs AIADMK, BJP Push, Vijay’s TVK Heats 234-Seat Battle, Know more

India

oi-Shankrappa Parangi

ಚೆನ್ನೈ; ಈ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆ 2026 ರಾಜ್ಯದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿ ರೂಪುಗೊಳ್ಳುತ್ತಿದೆ. ಪ್ರಬಲ ಪೈಪೋಟಿ, ಹೊಸ ಹೊಸ ರಣತಂತ್ರಗಳು, ಭರವಸೆಗಳ ಮುಖೇನ ವಿನೂತನವಾಗಿ ರೂಪಗೊಳ್ಳುತ್ತಿದೆ. ಇನ್ನೂ ಸಾಂಪ್ರದಾಯಿಕ ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆ ಹಾಗೂ ರಾಜಕೀಯಕ್ಕೆ ಖ್ಯಾತನಾಮರ ಹೊಸ ಪ್ರವೇಶದಿಂದಾಗಿ ಚುನಾವಣಾ ಸ್ಪರ್ಧೆ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಸೀಟುಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದೇ ತಿಂಗಳು ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಚುನಾವಣಾ ಕಣ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಏಪ್ರಿಲ್ 3 ಕೊನೆ ದಿನವಾಗಿದೆ. ಇಲ್ಲಿ ಗೆಲುವಿನ ಸ್ಥಾನದ ಟಾರ್ಗೆಟ್ 118 ಸೀಟುಗಳು. ಈ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳು, ಪ್ರಮುಖ ನಾಯಕರು, ಯಾವೆಲ್ಲ ವಿಷಯಗಳು ಚರ್ಚೆ ಆಗುತ್ತಿವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Tamil Nadu Election 2026

ಕಣದಲ್ಲಿರುವ ಪ್ರಮುಖ ಮೈತ್ರಿಕೂಟ ಹಾಗೂ ಪಕ್ಷಗಳು

ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪ್ರಮುಖ ಪಕ್ಷವಾಗಿದೆ. ಈ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ಅವರು ಸಿಎಂ ಆಗಿ ಐದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವು ಡಿಎಂಕೆ ಜೊತೆಗೆ ಮೈತ್ರಿ ಸಹಕಾರದಲ್ಲಿ ಅಖಾಡದಲ್ಲಿ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿದೆ. ಈ ಮೂಲಕ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುನಃ ಅಧಿಕಾರ ಗದ್ದುಗೆ ಏರಲು ಕಸರತ್ತು ನಡೆಸಿದ್ದಾರೆ. ಹೀಗಾಗಿಯೇ ದ್ರಾವಿಡ ಮಾದರಿ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಡಿಎಂಕೆ ಅಧಿಕ ಪ್ರಚಾರ ಮಾಡುತ್ತಿದೆ.

ಇನ್ನಿತರ ಪ್ರಮುಖ ಪಕ್ಷಗಳು

* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC),
* ವಿಸಿಕೆ,
* ಸಿಪಿಐ
* ಸಿಪಿಐ (ಎಂ),
* ಎಂಡಿಎಂಕೆ
* ಐಯುಎಂಎಲ್

ಎಐಎಡಿಎಂಕೆ ಮೈತ್ರಿಕೂಟ

ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ನೇತೃತ್ವದಲ್ಲಿ, ಎಐಎಡಿಎಂಕೆ ತನ್ನ ಭದ್ರಕೋಟೆಯನ್ನು ಮರಳಿ ಪಡೆಯಲು ಹೋರಾಟ ನಡೆಸಿದೆ.

* ಮೈತ್ರಿಕೂಟದ ನೇತೃತ್ವ- ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)
* ಮಿತ್ರ ಪಕ್ಷಗಳು- ಡಿಎಂಡಿಕೆ (ಪ್ರೇಮಲತಾ ವಿಜಯಕಾಂತ್)
* ಇತರ ಸಣ್ಣ ಪ್ರಾದೇಶಿಕ ಸಂಘಟನೆಗಳು

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ)

ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಜೊತೆ ಸಣ್ಣ ಪಕ್ಷಗಳು ಕೂಡಿಕೊಂಡು ಚುನಾವಣೆಗೆ ಇಳಿದಿವೆ. ಬಿಜೆಪಿ, ದ್ರಾವಿಡ ಪಕ್ಷಗಳಿಗೆ ಪ್ರಾಥಮಿಕ ಮತ್ತು ಪರ್ಯಾಯವಾಗಿ ತನ್ನನ್ನು ತಾನು ಮುಂದಿರಿಸಿಕೊಂಡಿದೆ.

* ಮೈತ್ರಿಕೂಟದ ಪ್ರಮುಖ ಪಕ್ಷ-ಬಿಜೆಪಿ
* ಮಿತ್ರ ಪಕ್ಷಗಳು- ಎಸ್. ರಾಮದಾಸ್ ನೇತೃತ್ವ ಪಿಎಂಕೆ
* ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ

ತಮಿಳುನಾಡಿನಲ್ಲಿ ಹೊಸ ಸವಾಲು

ಹೌದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿರುವ ಖ್ಯಾತ ನಟ ವಿಜಯ್ ಥಳಪತಿ ಅವರು ಈ ಬಾರಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಪೆರಂಬೂರಿನಿಂದ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ಪಕ್ಷದೊಂದಿಗೆ ಜನರ ಗೆಲ್ಲಿಸುತ್ತಾರೆಂಬ ಅಚಲ ವಿಶ್ವಾಸದೊಂದಿಗೆ ಏಕಾಂಗಿ ಶಕ್ತಿ ಪ್ರದರ್ಶನಕ್ಕೆ ವಿಜಯ್ ಮುಂದಾಗಿದ್ದಾರೆ.

ಟಿವಿಕೆಯಿಂದ ಡಿಎಂಕೆ, ಎಐಎಡಿಎಂಕೆಗೆ ಸಂಕಷ್ಟ?

ವಿಜಯ್ ಅವರು ಯುವ ಮತಗಳ, ಅಭಿಮಾನಿಗಳ ಬಲ ಮತಗಳಾಗಿ ಬದಲಾಗಲಿದೆ ಎಂಬ ಒಂದಷ್ಟು ಆಲೋಚನೆ ಇದೆ. ಮೂರನೇ ಮತ್ತು ಹಾಲಿ ಪಕ್ಷಗಳ ವಿರುದ್ಧ ತಟಸ್ಥ ಮತದಾರರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿ ಚುನಾವಣಾ ಹೋರಾಟ ನಡೆಸಿದ್ದಾರೆ. ಇದರಿಂದ ಡಿಎಂಕೆ ಹಾಗೂ ಎಐಎಡಿಎಂಕೆಗೆ ಸಾಕಷ್ಟು ಪೆಟ್ಟು ನೀಡುವ ಸಾಧ್ಯತೆ ಇದೆ. ಏಕೆಂದರೆ ದ್ರಾವಿಡರ ನೆಲದಲ್ಲಿ ಸ್ಥಳೀಯ ಖ್ಯಾತನಾಮರು, ಅಪಾರ ಜನಬೆಂಬಲ ಇರುವ ವಿಜಯ್ ನಂತಹ ವ್ಯಕ್ತಿಗಳು ನಿಂತರೆ ಅಲ್ಲಿನ ಪ್ರಮುಖ ಪಕ್ಷಗಳಿಗೆ ಹೊಡೆತ ಬೀಳುತ್ತದೆ. ಮತಗಳು ಹರಿದು ಹಂಚಿ ಹೋಗುತ್ತವೆ. ಇದು ಮತ್ತೊಮ್ಮೆ ಸಿಎಂ ಆಗುವ ತವಕದಲ್ಲಿರುವ ಸಿಎಂ ಎಂಕೆ ಸ್ಟಾಲಿನ್ ಅವರನ್ನು ಚಿಂತೆಗೀಡು ಮಾಡಿದೆ.

ಚರ್ಚೆ ಆಗುತ್ತಿರುವ ಪ್ರಮುಖ ವಿಷಯಗಳು

* ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಪರ ಒಂದಷ್ಟು, ವಿರುದ್ಧ ಒಂದಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಈ ಪೈಕಿ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ಬೇಡಿಕೆ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಇದು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

* ಫೆಡರಲಿಸಂ, ರಾಜ್ಯಪಾಲ-ರಾಜ್ಯ ಸಂಬಂಧಗಳು ಮತ್ತು “ದ್ರಾವಿಡ ಗುರುತು” ವಿಚಾರಗಳಿಗೆ ಸಂಬಂಧಿಸಿದಂತೆ ಒಂದಷ್ಟು ವಿಷಯಗಳು ಚರ್ಚೆಯಾಗುತ್ತಿವೆ.

* ಕಲ್ಯಾಣ ಯೋಜನೆಗಳಾದ “ಕಲೈಗ್ನರ್ ಮಗಲಿರ್ ಉರಿಮೈ ತೊಗೈ” (ಮಹಿಳೆಯರಿಗೆ ಮಾಸಿಕ ಸ್ಟೈಫಂಡ್) ಮತ್ತು ಉಚಿತ ಉಪಹಾರ ಯೋಜನೆ ಬಗ್ಗೆ ಹೆಚ್ಚು ಪ್ರಚಾರ ಸಿಗುವಂತೆ ಆಡಳಿತ ಪಕ್ಷ ನೋಡಿಕೊಳ್ಳುತ್ತಿದೆ.

* ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ, ಮಾದಕ ದ್ರವ್ಯ ಪಿಡುಗು ಮತ್ತು ಆಡಳಿತಾತ್ಮಕ ಭ್ರಷ್ಟಾಚಾರದ ವಿಪಕ್ಷಗಳ ಆರೋಪಗಳು ಚುನಾವಣೆ ಹೊತ್ತಲ್ಲಿ ಸದ್ದು ಮಾಡುತ್ತಿವೆ.

* ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ನಿರುದ್ಯೋಗ ಮತ್ತು ಮೂಲಸೌಕರ್ಯ ಸಮಸ್ಯೆಗಳ ಕುರಿತು ಹಾಗೂ ಉತ್ಪಾದನಾ ವಲಯದ ಅಭಿವೃದ್ಧಿ ಬಗ್ಗೆ ಸಾರ್ವಜನಿಕರಿಂದ ಒಂದಷ್ಟು ಚರ್ಚೆಗಳಾಗುತ್ತಿವೆ.

ಈ ವರ್ಷದ ತಮಿಳುನಾಡು ಚುನಾವಣೆ ವೈಶಿಷ್ಟ್ಯವೇನು?

ಈ ಬಾರಿ ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷದ ಮೂಲಕ ನೇರ ಸ್ಪರ್ಧಿಯಾಗಿದ್ದಾರೆ. ಇದು ಅವರ ಮೊದಲ ಚುನಾವಣೆ ಆಗಿದೆ. ಯುವ ಮತಗಳನ್ನು ವಿಜಯ್ ತನ್ನತ್ತ ಸೆಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಚಿಂತೆ ಡಿಎಂಕೆಗೆ ಇದೆ. ಅದು ತನ್ನ ಸಂಘಟನಾ ಬಲ ಅವಲಂಬಿಸಿದೆ. ವಿಪಕ್ಷ ಸ್ಥಾನದಲ್ಲಿರುವ ಎಐಎಡಿಎಂಕೆ ಮುಖ್ಯ ವಿರೋಧ ಪಕ್ಷವಾಗಿ ತನ್ನ ಉಳಿವಿಗಾಗಿ ಹೋರಾಡುತ್ತಿದೆ. ಇತ್ತ ಬಿಜೆಪಿ ದಕ್ಷಿಣದಲ್ಲಿ ಅದರಲ್ಲೂ ತಮಿಳುನಾಡಿನಲ್ಲೀ ಬೇರು ಬಿಡಲು ಹಾತೊರೆಯುತ್ತಿದೆ. ಇದೆಲ್ಲ ಅಂಶಗಳಿಂದ ಈ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಮುಖ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/tamil-nadu-election-2026-dmk-vs-aiadmk-bjp-push-vijay-s-tvk-heats-234-seat-battle-know-more-449101.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo