ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಮಾಜಿ ಸಿಎಂ ಓ.ಪನ್ನೀರ್‌ಸೆಲ್ವಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆ | O Panneerselvam Joins DMK Former Tamil Nadu CM Big Political Shift Ahead of Assembly Elections

India

oi-Manohara M

ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಲ್ಲಿನ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆ ನಡೆದಿದೆ. ಎಐಎಡಿಎಂಕೆಯ (AIADMK) ಮಾಜಿ ನಾಯಕ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್‌ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ (DMK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ ‘ಅಣ್ಣಾ ಅರಿವಾಲಯಂ’ನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಸಮ್ಮುಖದಲ್ಲಿ ಪನ್ನೀರ್‌ಸೆಲ್ವಂ ಶುಕ್ರವಾರ ಅಧಿಕೃತವಾಗಿ ಡಿಎಂಕೆ ಪಕ್ಷಕ್ಕೆ ಸೇರಿದರು.

O Panneerselvam

ಐದು ದಶಕಗಳ ನಂಟು ಅಂತ್ಯ

ಸುಮಾರು ಐದು ದಶಕಗಳ ಕಾಲ ಎಐಎಡಿಎಂಕೆಯಲ್ಲಿ ನಿಷ್ಠಾವಂತರಾಗಿದ್ದ ಪನ್ನೀರ್‌ಸೆಲ್ವಂ, ಜಯಲಲಿತಾ ಅವರ ನಂಬಿಕಸ್ತ ನಾಯಕ ಎನಿಸಿಕೊಂಡಿದ್ದರು. ಆದರೆ, ಪಕ್ಷದ ನಾಯಕತ್ವಕ್ಕಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ನಡೆದ ಸುದೀರ್ಘ ಹೋರಾಟದ ನಂತರ 2022ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಎಐಎಡಿಎಂಕೆಗೆ ಮರಳಿ ಸೇರಲು ಪನ್ನೀರ್‌ಸೆಲ್ವಂ ಹಲವು ಬಾರಿ ಪ್ರಯತ್ನ ನಡೆಸಿದ್ದರೂ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪ್ರತಿ ಬಾರಿಯೂ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

ಎನ್‌ಡಿಎ ಮೈತ್ರಿಯಿಂದ ಹೊರಕ್ಕೆ

2025ರಲ್ಲಿ, ಬಿಜೆಪಿಯಿಂದ ತಮಗೆ “ಅವಮಾನ”ವಾಗಿದೆ ಎಂದು ಆರೋಪಿಸಿ ಪನ್ನೀರ್‌ಸೆಲ್ವಂ ಎನ್‌ಡಿಎ (NDA) ಮೈತ್ರಿಕೂಟದಿಂದ ಹೊರಬಂದಿದ್ದರು. ಎಐಎಡಿಎಂಕೆಯ ಪರಮ ವೈರಿ ಎಂದೇ ಪರಿಗಣಿಸಲಾಗುವ ಡಿಎಂಕೆ ಪಕ್ಷಕ್ಕೆ ಪನ್ನೀರ್‌ಸೆಲ್ವಂ ಸೇರಿರುವುದು ಈ ಬಾರಿಯ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವು ನೀಡಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಈ ನಿರ್ಧಾರ ನನ್ನದೇ: ಪನ್ನೀರ್‌ಸೆಲ್ವಂ

ಈ ನಿರ್ಧಾರವನ್ನು ನಾನು ಸ್ವತಃ ತೆಗೆದುಕೊಂಡಿದ್ದೇನೆ. ಎಐಎಡಿಎಂಕೆ (AIADMK) ನಾಯಕತ್ವದೊಂದಿಗೆ ಕಳೆದ ಕೆಲವು ವರ್ಷಗಳಿಂದ ಹೊಂದಿದ್ದ ಕಹಿ ಅನುಭವಗಳಿಗೆ ಪೂರ್ಣವಿರಾಮ ಹಾಕಲು ಈ ಹೆಜ್ಜೆ ಇಟ್ಟಿದ್ದಾಗಿ ಪನ್ನೀರ್‌ಸೆಲ್ವಂ ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಪಕ್ಷಕ್ಕೆ ಸೇರಿದ ನಂತರ ಓ. ಪನ್ನೀರ್‌ಸೆಲ್ವಂ ಅವರು ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆಡಳಿತವನ್ನು ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಸ್ಟಾಲಿನ್ ಅವರು ಜನರಿಗೆ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಮತ್ತು ಜನರು ಅದನ್ನು ಗಮನಿಸುತ್ತಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಅವರು ದಕ್ಷಿಣ ತಮಿಳುನಾಡಿನ ಯಾವುದೇ ನಾಯಕರು ಪ್ರಬಲರಾಗದಂತೆ ತಡೆಯಲು ಉತ್ಸುಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ದ್ರಾವಿಡ ಚಳವಳಿ ಮತ್ತು ದ್ರಾವಿಡ ಸಿದ್ಧಾಂತವನ್ನು ಉಳಿಸಲು ಡಿಎಂಕೆ ಮಾತ್ರ ಶ್ರಮಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾನು ಕೇವಲ ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರಿದ್ದೇನೆ. ಪಕ್ಷದ ಇತರ ಕಾರ್ಯಕರ್ತರಂತೆ ಒಬ್ಬನಾಗಿ ನಾನು ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಪನ್ನೀರ್‌ಸೆಲ್ವಂ ತಿಳಿಸಿದ್ದಾರೆ.

ಪಳನಿಸ್ವಾಮಿ ಒಬ್ಬ ಸರ್ವಾಧಿಕಾರಿ

ಪನ್ನೀರ್‌ಸೆಲ್ವಂ ಅವರು ಡಿಎಂಕೆ ಪಕ್ಷಕ್ಕೆ ಸೇರಿದ ನಂತರ ನೀಡಿದ ಹೇಳಿಕೆಗಳು ಅವರ ಮಾಜಿ ಸಹೋದ್ಯೋಗಿ ಎಡಪ್ಪಾಡಿ ಪಳನಿಸ್ವಾಮಿ ಅವರ ವಿರುದ್ಧದ ಆಕ್ರೋಶ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೇಲಿನ ನಂಬಿಕೆಯನ್ನು ಸ್ಪಷ್ಟಪಡಿಸಿವೆ. ನನ್ನನ್ನು ಡಿಎಂಕೆ ಪಕ್ಷಕ್ಕೆ ಬರಮಾಡಿಕೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಪೂರ್ಣ ಸಂತೋಷದಿಂದ ಈ ಪಕ್ಷವನ್ನು ಸೇರಿದ್ದೇನೆ ಎಂದಿರುವ ಅವರು, ಎಡಪ್ಪಾಡಿ ಪಳನಿಸ್ವಾಮಿ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರು ಇನ್ನು ಮುಂದೆ ಎಂದಿಗೂ ಗೆಲುವು ಸಾಧಿಸಲು ಸಾಧ್ಯವಾಗದ ಅಂತಹ ಎಐಎಡಿಎಂಕೆಯನ್ನು ಸೃಷ್ಟಿಸಿದ್ದಾರೆ ಎಂದಿದ್ದಾರೆ.

ಅವರ ಹಠಮಾರಿ ಧೋರಣೆಯಿಂದಾಗಿ ಪಕ್ಷವು ತನ್ನ ಹಳೆಯ ವರ್ಚಸ್ಸನ್ನು ಕಳೆದುಕೊಂಡಿದೆ. ಎಐಎಡಿಎಂಕೆಯಲ್ಲಿ ಈಗ ದ್ರಾವಿಡ ಸಿದ್ಧಾಂತಕ್ಕೆ ಬೆಲೆ ಇಲ್ಲದಂತಾಗಿದೆ. ದ್ರಾವಿಡ ಚಳವಳಿಯ ಮೂಲ ಆಶಯಗಳನ್ನು ಉಳಿಸಿಕೊಳ್ಳಲು ಡಿಎಂಕೆ ಮಾತ್ರ ಶ್ರಮಿಸುತ್ತಿದೆ, ಆದ್ದರಿಂದ ಆ ಸಿದ್ಧಾಂತವನ್ನು ಎತ್ತಿಹಿಡಿಯಲು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಪನ್ನೀರ್‌ಸೆಲ್ವಂ ಅವರು ಡಿಎಂಕೆಗೆ ಸೇರಿರುವುದು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ತಮಿಳುನಾಡಿನ ಮತ ಬ್ಯಾಂಕ್ ಮೇಲೆ ಭಾರಿ ಪ್ರಭಾವ ಬೀರುವ ಸಾಧ್ಯತೆಯಿದೆ. ಜಯಲಲಿತಾ ಅವರ ನಂತರ ಎಐಎಡಿಎಂಕೆಯಲ್ಲಿನ ಒಡಕು ಈಗ ಡಿಎಂಕೆಗೆ ದೊಡ್ಡ ಲಾಭವಾಗಿಯೂ ಪರಿಣಮಿಸುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/o-panneerselvam-joins-dmk-former-tamil-nadu-cm-big-political-shift-ahead-of-assembly-elections-445285.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo