
International
oi-Manohara M
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಮಹತ್ವದ ದೂರವಾಣಿ ಸಂಭಾಷಣೆ ನಡೆದಿದೆ. ಉಭಯ ನಾಯಕರು ಪ್ರಚಲಿತ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಶಾಂತಿ ಸ್ಥಾಪನೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಅಧ್ಯಕ್ಷ ಟ್ರಂಪ್ ಅವರಿಂದ ಕರೆ ಬಂದಿತ್ತು. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ನಾವು ಉಪಯುಕ್ತ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ, ಎಂದು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿ ತಕ್ಷಣವೇ ತಿಳಿಯಾಗಬೇಕು ಮತ್ತು ಶಾಂತಿ ಮರುಸ್ಥಾಪನೆಯಾಗಬೇಕು ಎನ್ನುವುದು ಭಾರತದ ಆಶಯವಾಗಿದೆ. ಈ ನಿಟ್ಟಿನಲ್ಲಿ ಭಾರತವು ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಶಾಂತಿಯನ್ನು ಆದಷ್ಟು ಬೇಗ ನೆಲೆಗೊಳಿಸಲು ತನ್ನ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

‘ಹಾರ್ಮುಜ್ ಜಲಸಂಧಿ’ ಸುರಕ್ಷತೆಗೆ ಆದ್ಯತೆ
ಮಾತುಕತೆಯ ವೇಳೆ ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಸುರಕ್ಷತೆಯ ಬಗ್ಗೆ ಚರ್ಚೆ ನಡೆಸಲಾಯಿತು. ಹಾರ್ಮುಜ್ ಜಲಸಂಧಿಯು ವಿಶ್ವದ ಅತಿ ಹೆಚ್ಚು ತೈಲ ಪೂರೈಕೆಯಾಗುವ ಪ್ರಮುಖ ಜಲಮಾರ್ಗವಾಗಿದೆ. ಯುದ್ಧದ ಕಾರಣದಿಂದ ಈ ಮಾರ್ಗವು ಮುಚ್ಚಲ್ಪಟ್ಟರೆ ಅಥವಾ ಅಸುರಕ್ಷಿತವಾದರೆ ಇಡೀ ವಿಶ್ವದ ಇಂಧನ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಈ ಜಲಸಂಧಿಯು ಮುಕ್ತವಾಗಿರಬೇಕು, ಸುರಕ್ಷಿತವಾಗಿರಬೇಕು ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಿರಬೇಕು ಎಂಬುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಉಭಯ ನಾಯಕರು ಚರ್ಚಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪ್ರಯತ್ನಗಳ ಕುರಿತು ಪರಸ್ಪರ ಸಂಪರ್ಕದಲ್ಲಿರಲು ಮೋದಿ ಮತ್ತು ಟ್ರಂಪ್ ನಿರ್ಧರಿಸಿದ್ದಾರೆ. ಭಾರತವು ಇರಾನ್ ಮತ್ತು ಅಮೆರಿಕ ಎರಡೂ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ, ಮಧ್ಯಸ್ಥಿಕೆ ವಹಿಸುವ ಅಥವಾ ಶಾಂತಿ ಮಾತುಕತೆಗೆ ಪ್ರೇರೇಪಿಸುವಲ್ಲಿ ಭಾರತದ ಪಾತ್ರ ಈ ಬಾರಿ ಅತ್ಯಂತ ಮಹತ್ವದ್ದಾಗಿದೆ.
Received a call from President Trump and had a useful exchange of views on the situation in West Asia. India supports de-escalation and restoration of peace at the earliest. Ensuring that the Strait of Hormuz remains open, secure and accessible is essential for the whole world.…
— Narendra Modi (@narendramodi) March 24, 2026
ಇರಾನ್ ವಿರುದ್ಧದ ದಾಳಿ ತಾತ್ಕಾಲಿಕ ಮುಂದೂಡಿಕೆ
ಕಳೆದ ಕೆಲವು ದಿನಗಳಿಂದ ಯುದ್ಧದ ಕಾರ್ಮೋಡ ಕವಿದಿದ್ದ ಪಶ್ಚಿಮ ಏಷ್ಯಾದಲ್ಲಿ ಸದ್ಯಕ್ಕೆ ಪರಿಸ್ಥಿತಿ ತುಸು ತಿಳಿಯಾದ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ “ಸಂಪೂರ್ಣ ಮತ್ತು ಶಾಶ್ವತ ಪರಿಹಾರ” ಕಂಡುಕೊಳ್ಳುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಫಲಪ್ರದ ಸಂಭಾಷಣೆಗಳು ನಡೆದಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂವಹನವು ಆಶಾದಾಯಕವಾಗಿದೆ ಎಂದು ಹೇಳಿದ್ದಾರೆ. ದಶಕಗಳ ಕಾಲದ ಈ ವೈಷಮ್ಯಕ್ಕೆ ಕೊನೆ ಹಾಡಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ತಾವು ಸಿದ್ಧರಿದ್ದೇವೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಟ್ರಂಪ್ ಮಾತನಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪಾತ್ರದ ಬಗ್ಗೆಯೂ ಕುತೂಹಲ ಮೂಡಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/narendra-modi-and-donald-trump-discuss-in-phone-call-about-west-asia-tensions-peace-efforts-448233.html. xn--babytilbehr-pgb.com does not claim ownership of this content. All rights remain with the original publisher.
