
Karnataka
-Shankrappa Parangi
ಹಾವೇರಿ/ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ಬರೋಬ್ಬರಿ 1000 ದಿನ ಕಳೆದಿದ್ದು, ಈ ಸಂಬಂಧ ಹಾವೇರಿ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಪಂಚ ಗ್ಯಾರೆಂಟಿ ಸೇರಿದಂತೆ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಅನೇಕ ಸಚಿವರು ವಿವರಿಸಿದ್ದಾರೆ. ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಬಡವರ ತಲೆ ಮೇಲೆ ಆರ್ಥಿಕ ಭಾರ ಹೇರಿದ ಶೂನ್ಯ ಸಾಧನೆ ಸಮಾವೇಶ ಇದಾಗಿದೆ ಎಂದು ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಇವತ್ತು ರಾಜ್ಯ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದೆ. ಇದು ಭ್ರಷ್ಟಾಚಾರದ ಸಾಧನೆಯ ಸಮಾವೇಶ ಮತ್ತು ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಈ ಸರ್ಕಾರ ಕೊಡುತ್ತಿದೆ ಎಂದು ಆರೋಪಿಸಿದರು.

ಈ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಜನರು ಬರಲು ಸಾಧ್ಯವಿಲ್ಲ ಎಂದು ಅರಿತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನನಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಾವು ಅಕ್ರಮ ಇದ್ದದ್ದನ್ನು ಸಕ್ರಮ ಮಾಡಿದ್ದೇವೆ. ಮತ್ತು ಅದರ ಮುಖಾಂತರ ಸಾಲ ಸಿಗುವ ವ್ಯವಸ್ಥೆ ಮಾಡಿದ್ದೆವು. ಈಗ ಜನರ ಆಸ್ತಿಯನ್ನು ಅವರೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ ಸರ್ಕಾರ ಬರಿದಾದ ಖಜಾನೆ ತಂಬಲು ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ನೋಂದಣಾ ಶುಲ್ಕವನ್ನು ಬಡವರ ತಲೆ ಮೇಲೆ ಹೇರಿದ್ದಾರೆ.
ಕಂದಾಯ ಇಲಾಖೆ ಬಹುದೊಡ್ಡ ಭ್ರಷ್ಟಾಚಾರ
ಒಬ್ಬ ಬಡವ ಮೂರು ನಾಲ್ಕು ಲಕ್ಷ ಕಟ್ಟುವ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲಾ ಈ ವ್ಯವಸ್ಥೆ ಮಾಡಲು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಭ್ರಷ್ಟಾಚಾರದ ಸಾಧನೆಯ ಸಮಾವೇಶ ಮತ್ತು ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಈ ಸರ್ಕಾರ ಕೊಡುತ್ತಿದೆ ಎಂದು ಅವರು ದೂರಿದರು.
ಇದೇ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಯಾವುದೇ ಮನೆಗಳನ್ನು ಕಟ್ಟುವ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿಲ್ಲ. ಒಂದು ಸಾವಿರ ದಿವಸದ ವ್ಯರ್ಥ ಆಡಳಿತದ ಶೂನ್ಯ ಸಾಧನೆಯ ಈ ಸಮಾವೇಶವನ್ನು ಬಡವರು ಹಿಡಿ ಶಾಪ ಹಾಕುತ್ತಿರುವುದು ಸತ್ಯ. ಇದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.
ಭೀಮಣ್ಣ ಖಂಡ್ರೆ ಶತಮಾನದ ಶ್ರೇಷ್ಠ ನಾಯಕ
ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಅವರು ಶತಮಾನದ ಶ್ರೇಷ್ಠ ನಾಯಕ. ಯುಗ ಪುರುಷರಾದ ಭೀಮಣ್ಣ ಖಂಡ್ರೆ ಅವರು ಪ್ರತಿಯೊಂದು ಉಸಿರಿನಲ್ಲೂ ದಣಿವರಿಯದೇ ಹೋರಾಟ ನಡೆಸಿದ ಅಪೂರ್ವ ವ್ಯಕ್ತಿತ್ವ ಎಂದು ಬಸವರಾಜ ಬೊಮ್ಮಾಯಿ ಅವರು ಬಣ್ಣಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಜಾಕಾರರ ವಿರುದ್ಧದ ಹೋರಾಟವಾಗಲಿ, ಏಕೀಕರಣ ಚಳುವಳಿಯಾಗಲಿ, ಸ್ವಾತಂತ್ರ್ಯ ಹೋರಾಟವಾಗಲಿ, ವೀರಶೈವ ಮಹಾಸಭೆಯನ್ನು ಬೆಳೆಸುವ ಕಾರ್ಯವಾಗಲಿ – ಎಲ್ಲದಲ್ಲೂ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿದರು. ಮಾನಸಿಕವಾಗಿ ಅತ್ಯಂತ ಗಟ್ಟಿಯಾದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದರು.
ಗಡಿಯ ಭಾಗದಿಂದ ಬಂದು ಬೆಂಗಳೂರಿನಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಳ್ಳುವುದು ಸುಲಭವಲ್ಲ. ಆಂಧ್ರ ಮತ್ತು ಮಹಾರಾಷ್ಟ್ರ ಗಡಿಭಾಗದ ಸವಾಲುಗಳ ನಡುವೆಯೇ ಅವರು ಸುದೀರ್ಘ ರಾಜಕೀಯ ಜೀವನ ನಡೆಸಿದರು. 1967ರಲ್ಲಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ರಾಜಕಾರಣವು ಅವರಿಗೆ ತಕ್ಕ ನ್ಯಾಯ ನೀಡದಿದ್ದರೂ, ಸಮಾಜವು ಅವರನ್ನು ಸದಾ ಗೌರವದಿಂದ ಗುರುತಿಸಿದೆ. ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿದ ಮಹನೀಯರು ಎಂದು ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/congress-zero-achievement-basavaraj-bommai-slams-state-govt-s-1000-days-celebration-in-haveri-011-443765.html. xn--babytilbehr-pgb.com does not claim ownership of this content. All rights remain with the original publisher.
