
Karnataka
oi-Shankrappa Parangi
ಬೆಂಗಳೂರು: ರಾಜಧಾನಿ ಬೆಂಗಳೂರು ಇನ್ನೂ ಕೂಲ್ ಆಗಿದೆ. ಏಕೆಂದರೆ ಈ ಭಾಗದಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದೆ. ತಾಪಮಾನದಲ್ಲಿ ಸ್ಥಿರತೆ ಇಲ್ಲ. ಹೀಗಾಗಿ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣ ಮಧ್ಯಾಹ್ನ ಸಹಜ ಬಿಸಿಲು ಕಂಡು ಬರುತ್ತಿದೆ. ಇನ್ನೂಳಿದಂತೆ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿಲು ರಾರಾಜಿಸುತ್ತಿದೆ. ಜನರು ತೀವ್ರ ಬಿಸಿಲಿನ ತಾಪ ಎದುರಿಸುವಂತಾಗಿದೆ.
ಬೆಂಗಳೂರಲ್ಲಿ ಕನಿಷ್ಠ ತಾಪಮಾನ 14ರಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸುಮಾರು 1-2 ಡಿಗ್ರಿ ಸೆಲ್ಸಿಯಸ್ ನಷ್ಟು ವಾಡಿಕೆಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಹೀಗಾಗಿ ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಅಲ್ಲಲ್ಲಿ ತಂಪು ವಾತಾವರಣ ದಾಖಲಾಗಿದೆ.

ಇನ್ನೂ ಹಗಲು ಹೊತ್ತು ಬೆಂಗಳೂರು ನಗರದಲ್ಲಿ 30 ಡಿಗ್ರಿ ಸೆಲ್ಸಿಯಸ್ ಆಸು ಪಾಸು ದಾಖಲಾಗಿದ್ದ ಗರಿಷ್ಠ ತಾಪಮಾನದಲ್ಲಿ ತೀವ್ರ ಇಳಿಕೆ ಆಗಿದೆ. ಸುಮಾರು 3 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಕಂಡು ಬಂದಿದ್ದು, ಬುಧವಾರ 27 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಮಂಗಳವಾರ ದಾಖಲಾದ 32 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಹೋಲಿಕೆ ಮಾಡಿದ 5 ಡಿ.ಸೆ ನಷ್ಟು ತಾಪಮಾನ ಇಳಿಕೆ ಆಗಿದೆ ಎನ್ನಬಹುದು. ಈ ಕಾರಣದಿಂದ ಒಂದು ದಿನ ಬಿಸಿಲು, ಸೆಕೆ ಅನ್ನಿಸಿದರೆ ಮತ್ತೊಂದು ದಿನ ಕೊಂಚ ತಂಪು, ಸಾಮಾನ್ಯ ಹಿತಕರ ವಾತಾವರಣದ ಅನುಭವ ಆಗುತ್ತಿದೆ.
ರಾಜ್ಯದ ಗರಿಷ್ಠ ತಾಪಮಾನ, ಮುನ್ಸೂಚನೆ
ರಾಜ್ಯದ ಕರಾವಳಿ ಭಾಗದಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ. ಕಾರವಾರದಲ್ಲಿ 37 ಡಿಗ್ರಿ ಸೆಲ್ಸಿಯಸ್, ಹೊನ್ನಾವರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಕನ್ನಡ, ಮಂಗಳೂರು ಏರ್ಪೋರ್ಟ್ ಹಾಗೂ ಉತ್ತರ ಕರ್ನಾಟಕದ ಕಲಬುರಗಿ, ಕೊಪ್ಪಳದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ಕರಾವಳಿಯ ಒಣಹವೆಯು ಉತ್ತರ ಕರ್ನಾಟಕಕ್ಕೂ ವಿಸ್ತರಣೆ ಆಗುತ್ತಿದೆ. ಈ ತಿಂಗಳಾಂತ್ಯಕ್ಕೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವೆಡೆಯೂ ಇದೇ ಒಣಹವೆ ಮುಂದುವರಿಯುವ ನಿರೀಕ್ಷೆ ಇದೆ.
ಇನ್ನೂ ಬಳ್ಳಾರಿ ಮತ್ತು ರಾಯಚೂರಲ್ಲಿ ತಲಾ 32 ಡಿಗ್ರಿ ಸೆಲ್ಸಿಯಸ್, ಬೀದರ್, ವಿಜಯಪುರ, ಗದಗ, ಹಾಸನ, ಹಾವೇರಿ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಲಾ 31 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಬಾಗಲಕೋಟೆ, ಕೊಪ್ಪಳ, ಕೋಲರ, ಚಿತ್ರದುರ್ಗದ ಹಿರಿಯೂರು, ತುಮಕೂರಿನ ಚಿಕ್ಕನಹಳ್ಳಿ ಮತ್ತು ಧಾರವಾಡದಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ತಾಪ ದಿನೇ ದಿನ ಹೆಚ್ಚಾಗುತ್ತಿದೆ. ಕರಾವಳಿ ಭಾಗದಲ್ಲಿ ದಾಖಲೆ ಮಟ್ಟದಲ್ಲಿ ಉಷ್ಣಾಂಶ ಏರಿಕೆ ಆಗುತ್ತಿದೆ. ಮುಂದಿನ ಒಂದು ವಾರದ ರಾಜ್ಯದಲ್ಲಿ ಇದೇ ವಾತವರಣ ಮುಂದುವರಿಯು ಸಾಧ್ಯತೆ ಇದೆ ಎಂದು ಗುರುವಾರ ಐಎಂಡಿ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.
ಹವಾಮಾನ ವೈಪರೀತ್ಯಗಳ ಅಪ್ಡೇಟ್
ಪೂರ್ವ ಸಮಭಾಜಕ ಹಿಂದೂ ಮಹಾಸಾಗರ ಮತ್ತು ಪಕ್ಕದ ಆಗ್ನೇಯ ಬಂಗಾಳಕೊಲ್ಲಿಯ ಮೇಲೆ ಮೇಲ್ಭಾಗದ ವಾಯು ಚಂಡಮಾರುತದ ಪರಿಚಲನೆ ಮುಂದುವರೆದಿದೆ. ಅದೀಗ (ಗುರುವಾರ ಫೆ.12) ಸಮುದ್ರ ಮಟ್ಟಕ್ಕಿಂತ ಸರಾಸರಿ 3.1 ಕಿ.ಮೀ ವರೆಗೆ ಎತ್ತರವರೆಗೆ ವಿಸ್ತರಿಸಿದೆ. ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ಎತ್ತರದಲ್ಲೊಂದು ಚಂಡಮಾರುತದ ಪರಿಚಲನೆ ಉಂಟಾಗಿದೆ. ಈ ವೈಪರೀತ್ಯಗಳು ತೀವ್ರಗೊಳ್ಳುವ ಹಾಗೂ ಕರ್ನಾಟಕದ ಹವಾಮಾನದ ಮೇಲೆ ಪರಿಣಾಮ ಉಂಟು ಮಾಡುವ ಲಕ್ಷಣಗಳು ಸದ್ಯಕ್ಕೆ ಇಲ್ಲವೆಂದು ಐಎಂಡಿ ಮಾಹಿತಿ ನೀಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-weather-cool-bengaluru-temp-dips-to-27-dc-amid-fluctuations-karwar-records-high-37-dc-443399.html. xn--babytilbehr-pgb.com does not claim ownership of this content. All rights remain with the original publisher.
