ಭಾರತದ ಸನಿಹವೇ ಮುಳುಗಿತು ಇರಾನ್ ಯುದ್ಧನೌಕೆ: ವಿಶಾಖಪಟ್ಟಣದಿಂದ ಹಿಂದಿರುಗುತ್ತಿದ್ದ ಹಡಗಿಗೆ ಅಮೆರಿಕ ಬಾಂಬ್ | US Sinks Iranian Warship IRIS Dena Near Sri Lanka; Congress Slams Govt Over Intelligence Failure

International

oi-Shankrappa Parangi

ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನೆಗಳು ದಾಳಿ ಮುಂದುವರಿಸಿವೆ. ಇದರ ನಡುವೆ ಇಂದು (ಮಾ.4) ಶ್ರೀಲಂಕಾದ ಕರಾವಳಿ ಭಾಗದಲ್ಲಿ ಅಂದರೆ ಭಾರತದ ಸಮೀಪವೇ ಇರಾನ್ ಯುದ್ಧ ನೌಕೆಯನ್ನು ಅಮೆರಿಕ ಜಲಾಂತರ್ಗಾಮಿ ನೌಕೆಯು ದಾಳಿ ನಡೆಸಿ ಮುಳುಗಿಸಿದೆ. ಇದರಲ್ಲಿದ್ದ ಹಲವು ಮಂದಿ ಪೈಕಿ 102 ಮಂದಿ ನಾಪತ್ತೆ ಆಗಿದ್ದು, 32 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಭಾರತದ ವಾರ್ಷಿಕ ನೌಕಾಪಡೆಯ (ಮಿಲಾನ್ 2026) ಕಾರ್ಯಕ್ರಮಕ್ಕೆ ಬಂದು ಹಿಂತಿರುವಾಗ ಯುಎಸ್ ದಾಳಿ ನಡೆಸಿದ್ದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲವೇ? ಎಂದು ದಾಳಿ ಜೊತೆಗೆ ದೇಶದ ಭದ್ರತೆ ಕುರಿತು ಆತಂಕ ಹೊರಹಾಕಿದೆ.

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನಿನ ಯುದ್ಧನೌಕೆಯಾದ ‘ಐಆರ್‌ಐಎಸ್ ದೇನಾ’ಯನ್ನು ಮುಳುಗಿಸಿದೆ ಎಂದು ಖುದ್ದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಬುಧವಾರ ತಿಳಿಸಿದರು. ಇರಾನ್‌ನ ಯುದ್ಧನೌಕೆಯಲ್ಲಿ ಒಟ್ಟು 180 ಜನರಿದ್ದರು. ಅದರಲ್ಲಿ 32 ಜನರನ್ನು ಮಾತ್ರವೇ ರಕ್ಷಿಸಲಾಗಿದೆ. ಉಳಿದವರ ಬಗ್ಗೆ ಸಾಗರದಲ್ಲಿ ಶೋಧ ನಡೆಯುತ್ತಿದೆ ಎಂದು ವರದಿ ಆಗಿದೆ. ಉಳಿದವರ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಲಿದೆ.

US Sinks Iranian Warship

ಭಾರತದ ನೌಕಾಪಡೆಯ ಕಾರ್ಯಕ್ರಮಕ್ಕೆ ಆಹ್ವಾನ

ಭಾರತೀಯ ನೌಕಾಪಡೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂ (IFR) ಮತ್ತು ಬಹುಪಕ್ಷೀಯ ವ್ಯಾಯಾಮ, MILAN-2026’ವಾರ್ಷಿಕ ಕಾರ್ಯಕ್ರಮದಲ್ಲಿ ಇರಾನ್ ನೌಕೆ ಪಾಲ್ಗೊಂಡಿತ್ತು. ಈ ಐಎಫ್‌ಆರ್ ಹಾಗೂ ಮಿಲಾನ್ ನಲ್ಲಿ ಭಾಗವಹಿಸಲು ನಿಗದಿಯಾಗಿದ್ದ ಯುಎಸ್ ನೌಕಾಪಡೆಯ ವಿಧ್ವಂಸಕ ಯುಎಸ್‌ಎಸ್‌ ಪಿಂಕ್ನಿ, ತುರ್ತು ಅಗತ್ಯತೆಗಳ ಕಾರಣದಿಂದಾಗಿ ಭಾಗವಹಿಸಿರಲಿಲ್ಲ. ಅದರೆ ಯುಎಸ್‌ಪಿ-8 ಯುದ್ಧ ವಿಮಾನವು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಇದೆಲ್ಲ ಕಾರ್ಯಕ್ರಮ ಮುಗಿಸಿ ಇರಾನ್ ನೌಕೆ ಮರಳುವಾಗ ಯುಎಸ್ ಜಲಾಂತರ್ಗಾಮಿ ನೌಕೆ ದಾಳಿ ಮಾಡಿದೆ.

ಮಾತ್ರವಲ್ಲದೇ ಇರಾನ್ ಯುದ್ಧ ನೌಕೆಯು ಫೆಬ್ರವರಿಯಲ್ಲಿ ಭಾರತದ ಬಂದರು ನಗರ ವಿಶಾಖಪಟ್ಟಣದ ಕಾರ್ಯಕ್ರಮದಲ್ಲಿ ಹಾಜರಾಗಿತ್ತು. ವಿವಿಧ ದೇಶಗಳ ಹಡಗುಗಳ ಜೊತೆಗೆ ಡಾಕ್ ಪ್ರದರ್ಶನ ನೀಡಿತ್ತು. ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಅದನ್ನು ಸ್ವಾಗತಿಸಿತ್ತು.

ಭಾರತೀಯ ಸಮಯದ ಪ್ರಕಾರ ಇಂದು ಬೆಳಗ್ಗೆ 5.30 ರ ಸುಮಾರಿಗೆ ಶ್ರೀಲಂಕಾದ ಕರಾವಳಿ ನಗರವಾದ ಗ್ಯಾಲೆಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಇರಾನಿನ ಐಆರ್‌ಐಎಸ್‌ ದೇನಾ ಮೇಲೆ ದಾಳಿ ಆಗಿದೆ. ಈ ಘಟನೆ ಶ್ರೀಲಂಕಾದ ನಿಯೋಜಿತ ಕಾರ್ಯಾಚರಣೆಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ಭಾರತೀಯ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಇದನ್ನು ಕಾಂಗ್ರೆಸ್ ಒಪ್ಪದೇ ದೇಶದ ಭದ್ರತೆ, ಯುದ್ಧದ ಹೊತ್ತಿನಲ್ಲಿ ಭಾರತದ ಕಾರ್ಯಕ್ರಮಕ್ಕೆ ಬಂದು ಹೋಗುವಾಗ ನಡೆದ ಇರಾನ್ ಯುದ್ಧನೌಕೆ ಮೇಲಿನ ದಾಳಿಯನ್ನು ಖಂಡಿಸಿದೆ.

ಇದೇ ವಿಚಾರವಾಗಿ ಶ್ರೀಲಂಕಾದ ಇಬ್ಬರು ಹಿರಿಯ ಸರ್ಕಾರ ಪ್ರತಿಕ್ರಿಯಿಸಿದ್ದು, ದಾಳಿಗೆ ಒಳಗಾದ ಯುದ್ಧ ನೌಕೆಯಿಂದ ರಕ್ಷಿಸುವ ಮುನ್ನ 32 ನಾವಿಕರು ನೀರಿನಲ್ಲಿ ದೀರ್ಘಕಾಲ ಸಮಯ ಕಳೆದಿದ್ದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಗಾಯಾಳುಗಳನ್ನು ಉತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಚಿಕಿತ್ಸೆಗೆ ಸರ್ಕಾರ ಸೂಚನೆ ನೀಡಿದೆ.

ಯುಎಸ್ ನೌಕಾಪಡೆಯ ಓಹಿಯೋ ವರ್ಗದ ಜಲಾಂತರ್ಗಾಮಿ ನೌಕೆಗಳು ಡಿಯಾಗೋ ಗಾರ್ಸಿಯಾದಲ್ಲಿನ ಅಮೇರಿಕನ್ ಮಿಲಿಟರಿ ನೆಲೆಯಿಂದ (ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಕಾರ್ಯಾಚರಣೆಗಳಿಗೆ ಬಳಸಲಾಗುವ ದ್ವೀಪ ಪ್ರದೇಶ ಸೌಲಭ್ಯ) ಹಿಂದೂ ಮಹಾಸಾಗರದಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತವೆ ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಹೇಳುತ್ತಿರುವುದೇನು?

ಕಾಂಗ್ರೆಸ್‌ನ ವಕ್ತಾರೆ ಪವನ್ ಖೇರಾ ಅವರು ಈ ದಾಳಿಯನ್ನು ಪ್ರಶ್ನಿಸಿ ಎಕ್ಸ್‌ ಪೋಸ್ಟ್ ಮಾಡಿ ಗಮನಸೆಳೆದಿದ್ದಾರೆ. ಭಾರತದ ನೌಕಾಪಡೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಇರಾನ್ ಯುದ್ಧನೌಕೆಯು ‘ಮಿಲಾನ್’ ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಅಂತ್ಯ ಕಂಡಿದೆ. ಭಾರತಕ್ಕೆ ತನ್ನ ನೆರೆಹೊರೆಯಲ್ಲಿ ಪ್ರದೇಶದಲ್ಲಿ ಯಾವುದೇ ಪ್ರಭಾವ ಹೊಂದಿಲ್ಲವೇ. ಆ ಜಾಗವನ್ನು ವಾಷಿಂಗ್ಟನ್ ಮತ್ತು ಟೆಲ್ ಅವೀವ್‌ಗೆ ಸದ್ದಿಲ್ಲದೆ ಬಿಟ್ಟು ಕೊಟ್ಟುಬಿಟ್ಟಿತೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.

ನೈಋತ್ಯ ಇರಾನ್‌ನಲ್ಲಿರುವ ಮೌಂಟ್ ದೇನಾ ಹೆಸರಿನ ದೇಶಿಯ ಯುದ್ಧನೌಕೆಯು ಪ್ರಾದೇಶಿಕ ನೀರಿನಲ್ಲಿ ಗಸ್ತು ಮತ್ತು ಯುದ್ಧ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಸರಿಸುಮಾರು 1,300 ರಿಂದ 1,500 ಟನ್‌ಗಳಷ್ಟು ತೂಕವಿತ್ತು. ಹಡಗು ವಿರೋಧಿ ಕ್ಷಿಪಣಿಗಳು, 76 ನೌಕಾ ಬಂದೂಕುಗಳು ಮತ್ತು ಟಾರ್ಪಿಡೊ ಲಾಂಚರ್‌ಗಳು ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಈ ಯುದ್ಧನೌಕೆಗಿತ್ತು. ಹಡಗಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ಯಾಡ್ ಮತ್ತು ಬಹು ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ರಾಡಾರ್ ವ್ಯವಸ್ಥೆಗಳನ್ನು ಒಳಗೊಂಡಿತ್ತು ಚೆನ್ನೈ ಮೂಲದ ಮಿಲಿಟರಿ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ. ಇನ್ನೂ ದಾಳಿ ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯ ವೀಡಿಯೊ ದೃಶ್ಯಾವಳಿಗಳ ಪ್ರಸಾರವನ್ನು ಶ್ರೀಲಂಕಾದ ಅಧಿಕಾರಿಗಳು ತಡೆ ಹಿಡಿದ್ದಾರೆ. ಅದಕ್ಕೆ ತನ್ನದೇ ಆದ ಮಿಲಿಟರಿ ಕಾರಣವಿದೆ ಎನ್ನಲಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/international/us-sinks-iranian-warship-iris-dena-near-sri-lanka-congress-slams-govt-over-intelligence-failure-445969.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo