ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ; ಮಾರ್ಚ್ 2ಕ್ಕೆ ವಿಚಾರಣೆ ಮುಂದೂಡಿಕೆ | Renukaswamy Case Darshan Pavithra Gowda Appear via Video Conference Fresh Allegations Surface

Entertainment

oi-Manohara M

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಮಂಗಳವಾರ ನಡೆದ ವಿಚಾರಣೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಾಕ್ಷಿಗಳ ವಿಚಾರಣೆ ಮತ್ತು ತನಿಖಾಧಿಕಾರಿಗಳ ನಡವಳಿಕೆಯ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.

ವಿಚಾರಣೆಯ ವೇಳೆ ಪ್ರಮುಖ ಸಾಕ್ಷಿದಾರರಾದ ವೆಂಕಟೇಶ್ ಎಂಬುವವರನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಅವರ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಂಡಿತು. ಇದರ ಬೆನ್ನಲ್ಲೇ ಪ್ರಕರಣದ ಗಂಭೀರತೆ ಪರಿಗಣಿಸಿ ಮುಂದಿನ ಹಂತವಾಗಿ ಇತರೆ ಇಬ್ಬರು ಸಾಕ್ಷಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಲಾಗಿದೆ.

Renukaswamy Case

ಪೊಲೀಸ್ ಠಾಣೆ ಭೇಟಿಗೆ ಅಡ್ಡಿ: ವಕೀಲರ ಆರೋಪ

ಪ್ರಕರಣದ 3ನೇ ಆರೋಪಿ ಪವನ್ ಪರ ವಕೀಲರಾದ ಡಿ.ಎಸ್. ಸುಧನ್ವ ಅವರು ತನಿಖಾಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಪೊಲೀಸರು ಬೇರೆ ಯಾವುದೋ ಸ್ಥಳದಲ್ಲಿ ಮೊಬೈಲ್ ಜಪ್ತಿ ಮಾಡಿ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಇದರ ಸತ್ಯಾಸತ್ಯತೆ ತಿಳಿಯಲು ಠಾಣೆಗೆ ಭೇಟಿ ನೀಡಲು ನಮಗೆ ಅವಕಾಶ ನೀಡಬೇಕು” ಎಂದು ಅವರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ವಕೀಲರು ಈ ವಿಷಯದಲ್ಲಿ ಪೊಲೀಸರ ನಡೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. “ನನ್ನ ಸಹೋದ್ಯೋಗಿಯೊಬ್ಬರು ಸೋಮವಾರ ಕಾಮಾಕ್ಷಿಪಾಳ್ಯ ಠಾಣೆಗೆ ಹೋಗಿದ್ದಾಗ, ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಇದೆ ಎಂದು ಹೇಳಿ ಪೊಲೀಸರು ಅವರನ್ನು ಒಳಗೆ ಬಿಡದೆ ತಡೆದಿದ್ದಾರೆ” ಎಂದು ಸುಧನ್ವ ವಿವರಿಸಿದರು.

ಪೊಲೀಸ್ ಠಾಣೆಯು ಒಂದು ಸಾರ್ವಜನಿಕ ಸ್ಥಳವಾಗಿದ್ದು, ಅಲ್ಲಿಗೆ ಯಾರಾದರೂ ಭೇಟಿ ನೀಡಬಹುದು. ಪೊಲೀಸರು ಠಾಣೆ ಪ್ರವೇಶಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಲಿಖಿತವಾಗಿ ಮಾಹಿತಿ ನೀಡುವಂತೆ ನ್ಯಾಯಾಧೀಶರು ವಕೀಲರಿಗೆ ಸೂಚಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ಸಲ್ಲಿಸಿ, ನಂತರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಈ ಬೆಳವಣಿಗೆಯು ತನಿಖಾಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದೆ. ಒಂದೆಡೆ ಸಾಕ್ಷಿಗಳ ಹೇಳಿಕೆ ದಾಖಲಾಗುತ್ತಿದ್ದರೆ, ಇನ್ನೊಂದೆಡೆ ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸರು ಕಾನೂನು ಲೋಪ ಎಸಗಿದ್ದಾರೆ ಎಂಬ ಆರೋಪಗಳು ಬಲವಾಗುತ್ತಿವೆ. ಇದು ಮಾರ್ಚ್ 2ರ ವಿಚಾರಣೆಯಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಜೈಲಿನಲ್ಲಿ ಟಿವಿ ಸಿಕ್ಕಿದ್ದಕ್ಕೆ ದರ್ಶನ್‌ ಧನ್ಯವಾದ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ತಲೆದಿಂಬು ಮತ್ತು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಈಗ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಬದಲಿಗೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ನಡೆದ ವಿಚಾರಣೆಯ ಆರಂಭದಲ್ಲಿ ದರ್ಶನ್ ಅವರು ನ್ಯಾಯಾಧೀಶರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು. ಜೈಲಿನಲ್ಲಿ ಟಿವಿ ವ್ಯವಸ್ಥೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ದರ್ಶನ್ ಹೇಳಿದರು.

ವಿಚಾರಣೆಯ ವೇಳೆ ದರ್ಶನ್ ಪರ ವಕೀಲರು ಹಾಗೂ ಸ್ವತಃ ದರ್ಶನ್ ಅವರು ಕೆಲವು ಪ್ರಮುಖ ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಟ್ಟರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಬದಲು ಕನಿಷ್ಠ ಒಂದು ದಿನವಾದರೂ ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.

ಜೈಲಿನಲ್ಲಿ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡಿರುವ ದರ್ಶನ್, ಈಗ ಕಾನೂನು ಹೋರಾಟವನ್ನು ಚುರುಕುಗೊಳಿಸಲು ಮತ್ತು ಕುಟುಂಬದವರನ್ನು ಹತ್ತಿರದಿಂದ ಭೇಟಿ ಮಾಡುವ ಬೇಡಿಕೆ ಇಟ್ಟಿದ್ದಾರೆ. ಮಾರ್ಚ್ 2ರ ವಿಚಾರಣೆಯಲ್ಲಿ ನ್ಯಾಯಾಲಯವು ದರ್ಶನ್ ಅವರ ಈ ಮನವಿಗಳಿಗೆ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/renukaswamy-case-darshan-pavithra-gowda-appear-via-video-conference-fresh-allegations-surface-445011.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo