
Karnataka
oi-Manohara M
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಸರ್ಕಾರಿ ಬಸ್ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವ ವ್ಯವಸ್ಥೆಗೆ ತೆರೆ ಬೀಳಲಿದ್ದು, ಅದರ ಬದಲು ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದುವರೆಗೆ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಲು ಆಧಾರ್ ಕಾರ್ಡ್ ತೋರಿಸುತ್ತಿದ್ದರು. ಆದರೆ ಇನ್ನು ಮುಂದೆ ಆಧಾರ್ ಬದಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನ್ನು ತೋರಿಸಿ ಉಚಿತ ಪ್ರಯಾಣ ಮಾಡಬಹುದು. ನಾಲ್ಕು ಸಾರಿಗೆ ನಿಗಮಗಳ ಮೂಲಕವೇ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗುತ್ತದೆ. ಮಹಿಳೆಯರು ಈ ಸ್ಮಾರ್ಟ್ ಕಾರ್ಡ್ ತೋರಿಸಿದರೆ ಉಚಿತ ಪ್ರಯಾಣ ಸೌಲಭ್ಯ ದೊರೆಯುತ್ತದೆ.

ಸ್ಮಾರ್ಟ್ಕಾರ್ಡ್ ಉದ್ದೇಶವೇನು?
ಈಗ ಚಾಲ್ತಿಯಲ್ಲಿರುವ ಉಚಿತ ಮತ್ತು ಶುಲ್ಕ ಪಾವತಿಸುವ ಪ್ರಯಾಣಿಕರ ನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಜಾರಿಗಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಟೆಂಡರ್ ಕರೆಯಲಾಗುತ್ತದೆ. ಕಾರ್ಡ್ ವಿತರಣೆ, ತಂತ್ರಜ್ಞಾನ ವ್ಯವಸ್ಥೆ, ಡೇಟಾ ನಿರ್ವಹಣೆ ಸೇರಿದಂತೆ ಪೂರ್ಣ ಪ್ರಕ್ರಿಯೆಯನ್ನು ತಾಂತ್ರಿಕವಾಗಿ ಬಲಪಡಿಸುವ ಉದ್ದೇಶ ಸರ್ಕಾರಕ್ಕಿದೆ.
ಆಧಾರ್ ಕಾರ್ಡ್ ತೋರಿಸುವ ವಿಧಾನದಲ್ಲಿ ಕೆಲವೊಮ್ಮೆ ವಿಳಂಬ, ಪರಿಶೀಲನೆ ಸಮಸ್ಯೆಗಳು ಹಾಗೂ ನಿರ್ವಹಣಾ ಸವಾಲುಗಳು ಎದುರಾಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬಂದರೆ ಪ್ರಯಾಣಿಕರ ಪರಿಶೀಲನೆ ವೇಗವಾಗಲಿದೆ. ಡೇಟಾ ನಿರ್ವಹಣೆ ಕೂಡ ಸುಧಾರಿಸಲಿದೆ ದುರುಪಯೋಗದ ಸಾಧ್ಯತೆ ಕಡಿಮೆಯಾಗಲಿದೆ. ಸಾರಿಗೆ ನಿಗಮಗಳಿಗೆ ಇದರಿಂದ ಭಾರೀ ಅನುಕೂಲವಾಗಲಿದೆ.
‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯ ಮುಂದುವರಿಯುತ್ತಲೇ ಇರುತ್ತದೆ. ಆದರೆ ಆಧಾರ್ ಆಧಾರಿತ ವ್ಯವಸ್ಥೆಗೆ ಬ್ರೇಕ್ ಹಾಕಿ, ಶಕ್ತಿ ಸ್ಮಾರ್ಟ್ ಕಾರ್ಡ್ ಆಧಾರಿತ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇದು ಯೋಜನೆಯನ್ನು ಹೆಚ್ಚು ವ್ಯವಸ್ಥಿತ ಮತ್ತು ತಂತ್ರಜ್ಞಾನ ಆಧಾರಿತಗೊಳಿಸುವತ್ತ ಸರ್ಕಾರದ ಮತ್ತೊಂದು ಹೆಜ್ಜೆಯಾಗಿದೆ.
ಪ್ರಮುಖ ಗ್ಯಾರಂಟಿ ಯೋಜನೆ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಈ ಯೋಜನೆ 2023ರ ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅವುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ‘ಶಕ್ತಿ’ ಯೋಜನೆ ಪ್ರಮುಖವಾಗಿದೆ.
ಆರಂಭಿಕ ಹಂತದಲ್ಲಿ ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದರು. ಬಳಿಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಸ್ಮಾರ್ಟ್ ಕಾರ್ಡ್ ವಿತರಣೆಯ ಪ್ರಸ್ತಾಪ ಮಾಡಲಾಗಿದೆ. ಪ್ರತಿ ದಿನ ಲಕ್ಷಾಂತರ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಉದ್ಯೋಗಕ್ಕಾಗಿ ದೂರ ಪ್ರಯಾಣಿಸುವ ಮಹಿಳೆಯರಿಗೆ ದೊಡ್ಡ ನೆರವು ಲಭ್ಯವಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಸಂಚಾರ ಪ್ರಮಾಣ ಕೂಡ ಹೆಚ್ಚಾಗಿದೆ.
‘ಶಕ್ತಿ’ ಯೋಜನೆ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ. ಉಚಿತ ಬಸ್ ಪ್ರಯಾಣದ ಮೂಲಕ ಮಹಿಳೆಯರ ದಿನನಿತ್ಯದ ಜೀವನದಲ್ಲಿ ಸ್ಪಷ್ಟ ಬದಲಾವಣೆ ತರಲು ಈ ಯೋಜನೆ ನೆರವಾಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/shakti-smart-card-scheme-update-aadhaar-replaced-for-free-bus-travel-for-women-in-karnataka-443543.html. xn--babytilbehr-pgb.com does not claim ownership of this content. All rights remain with the original publisher.
