
Entertainment
oi-Manohara M
ಸ್ಯಾಂಡಲ್ವುಡ್ನ ನಿರ್ದೇಶಕ ಜೋಗಿ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ (KD-The Devil) ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಶ್ಲೀಲ ಸಾಹಿತ್ಯ ಮತ್ತು ಡಬಲ್ ಮೀನಿಂಗ್ ಪದಬಳಕೆಯ ವಿರುದ್ಧ ಜನ ಕಿಡಿಕಾರುತ್ತಿದ್ದು, ನಿರ್ದೇಶಕ ಪ್ರೇಮ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ಸುಂದರಿ ನೋರಾ ಫತೇಹಿ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದ್ದರೂ, ಸಾಹಿತ್ಯದ ಗುಣಮಟ್ಟದ ವಿಚಾರದಲ್ಲಿ ಚಿತ್ರತಂಡ ವಿರೋಧ ಎದುರಿಸುತ್ತಿದೆ.
ನಿರ್ದೇಶಕ ಪ್ರೇಮ್ ಅವರು ಈ ಹಿಂದೆ ತಮ್ಮ ಸಿನಿಮಾಗಳಲ್ಲಿ ಭಾವನಾತ್ಮಕ ಮತ್ತು ಸುಂದರ ಹಾಡುಗಳನ್ನು ನೀಡಿದ್ದರು, ಆದರೆ ‘ಕೆಡಿ’ ವಿಷಯದಲ್ಲಿ ಅವರು ದಾರಿ ತಪ್ಪಿದ್ದಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಈ ಹಾಡಿನ ಸಾಲುಗಳನ್ನು ಖಂಡಿಸಿ ಮಾಡಲಾಗಿರುವ ಕಾಮೆಂಟ್ವೊಂದರ ಸ್ಕ್ರೀನ್ಶಾಟ್ ಅನ್ನು ಸಂತೋಷ್ ಕುಮಾರ್ ಎಲ್.ಎಂ. ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬೇಡುವೆನು ವರವನ್ನು
ಕೊಡೆ ತಾಯೆ ಜನ್ಮವನು
ಕಡೆತನಕ ಮರೆಯಲ್ಲ
ಜೋಗಿ
🍂🍂🍂
ಎಂಥ ಹಾಡಲ್ಲವೇ?! “ಅಮ್ಮ ಏನು ಅಂತ ಅರ್ಥ ಆಗಬೇಕು ಅಂದ್ರೆ ಪ್ರೇಮ್ ಅವರ ಈ ಹಾಡಿನ ಸಾಲುಗಳನ್ನು ಕೇಳಿ” ಅಂತ ಅನೇಕರು ಹೇಳುತ್ತಾರೆ. ಈ ಸಾಲುಗಳನ್ನು ಕೇಳುತ್ತಿದ್ದರೆ ಹಾಡು ಮುಗಿಯುವವರೆಗೂ ಬದಲಾಯಿಸಬೇಕು ಅನ್ನಿಸುವುದಿಲ್ಲ. ಹಾಡು ಮುಗಿದ ಮೇಲೂ ಒಂದಷ್ಟು ಹೊತ್ತು ತಲೆಯೊಳಗೆ ಗುಂಯ್ಗುಡುತ್ತಾ ಕಾಡುತ್ತವೆ.
ಇಂಥ ಸಾಲುಗಳನ್ನು ಬರೆದ ಪ್ರೇಮ್
“ಸರ್ಸೇ ನಿನ್ನ ಸೆರಗಾ ಸರ್ಸೆ”
ಅನ್ನೋ ಹಾಡನ್ನೂ ಬರೀತಾರಾ?! ಸರಕು ಖಾಲಿಯಾಯ್ತಾ?
ಆ ಹಾಡಿನ ಉಳಿದ ಸಾಲುಗಳನ್ನು ಇಲ್ಲಿ ಬರೆಯಲೂ ಸಹ ಬೇಸರವಾಗುತ್ತಿದೆ.
ಪೋರ್ನ್ ಸಿನಿಮಾಗಳನ್ನು ನೋಡಬೇಕೆಂದರೆ ಕದ್ದು ಸಿಡಿಗಳನ್ನು ತಂದು ನೋಡುತ್ತಿದ್ದ ಕಾಲದಲ್ಲಿ ಅಶ್ಲೀಲ ಅಂದರೆ ಏನು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು. ಆಗ ಒಂದು ಕಿಸ್ ದೃಶ್ಯವನ್ನು ನೋಡುವುದೂ ಸಹ ಅಪರಾಧ ಅನ್ನುವಂತಿತ್ತು.
ಆಗ “ಏರಿ ಮೇಲೆ ಏರಿ” ಥರದ್ದೋ, ಅಥವಾ “ಗಂಗೂ… ಬೈಕು ಕಲಿಸಿಕೊಡು ನಂಗೂ” ಥರದ ಹಾಡುಗಳು ಹಾಗೇ ಕೇಳಲು ಮಾಮೂಲಿಯ ಹಾಡುಗಳಂತೆಯೇ ಇದ್ದವು. ಯಾರೋ “ಅದರಲ್ಲೇನೋ ಬೇರೆಯದೇ ಅರ್ಥ ಐತೆ” ಅಂದಾಗ ಅದನ್ನು decode ಮಾಡುವವನೇ ಪಂಡಿತ ಅನ್ನಿಸಿಕೊಳ್ಳುತ್ತಿದ್ದ. ಆ ಹಾಡನ್ನು ಕೇಳಿಸಿಕೊಂಡೇ ಕಲ್ಪನೆ ಮಾಡಿಕೊಳ್ಳುತ್ತಿದ್ದವರದೆಷ್ಟೋ ಜನ.
ಆ ಸಮಯದಲ್ಲೇ ಪೋಲಿ ಜೋಕ್ಸ್ ಇದ್ದ ನಾಟಕಗಳು ಜನಪ್ರಿಯವಾಗಲು ಶುರುವಾಗಿದ್ದು. ಏಕೆಂದರೆ ಬೇರಾವುದೇ source ಇರದೆ ಅದರಲ್ಲೇ ಖುಶಿಪಡುತ್ತಿದ್ದ ಪಡ್ಡೆಗಳದೆಷ್ಟು ಜನ!
ಬರಬರುತ್ತ ಪೋಲಿ ಹಾಡುಗಳನ್ನೇ ಸಾಹಿತ್ಯವಾಗಿ ಬರೆದು ಹಾಡುಗಳನ್ನು ಮಾಡಲು ಶುರುವಾಯಿತು. ಈಗ ಅದು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇಲ್ಲಿ ಡಬ್ಬಲ್ ಮೀನಿಂಗ್ ಅನ್ನುವುದೇ ಇಲ್ಲ. ನೇರಾನೇರ “ಅದೇ ಮೀನಿಂಗ್”!! ಅದಕ್ಕೆ ಮತ್ತೊಂದು ಮೀನಿಂಗ್ ಇದ್ದರೂ ಅದು ಬರೆದವನಿಗೆ ಕೇಳುಗರು ಬೈಯುವಾಗ, “ಇದು ಆ ಅರ್ಥದಲ್ಲಿ ಬರೆದದ್ದು” ಅನ್ನುವಂತಿರುತ್ತದೆ ಅಷ್ಟೇ. ಅದರಲ್ಲಿ ಯಾವ ಪದ ಚಮತ್ಕಾರವೂ ಇರುವುದಿಲ್ಲ. ನೇರಾನೇರ ಪೋರ್ನ್ ಸಾಹಿತ್ಯವೇ.
The vibe continues from KD – The Devil. 🎶🔥
Watch Now on @aanandaaudio YT channel #KDTheDevilhttps://t.co/UWM0X8Iz0a – KANNADAhttps://t.co/Ck6GOK4JAp – HINDIhttps://t.co/Oos7gPuJZG – TELUGUhttps://t.co/W8Sr2Dd8Q9 – TAMILhttps://t.co/NkTGIQf4lJ – MALAYALAM
#KDTheDevil… pic.twitter.com/DrszmqHLXY— KVN Productions (@KvnProductions) March 15, 2026
KD ಸಿನಿಮಾದ ಹಾಡು ಯಾವುದು ಅಂತ ಹೇಳಲೂ ಸಹ ಇಲ್ಲಿ ಮುಜುಗರವಾಗುತ್ತದೆ. “ಸೆರಗ ಸರ್ಸೇ” ಅನ್ನೋ ಹಾಡು ಇನ್ನು ಮುಂದೆ ಟಿವಿಯಲ್ಲಿ ಬಂದು, ಸಣ್ಣ ಮಕ್ಕಳು ಅದನ್ನು ನೋಡಿ “ಇದರ ಅರ್ಥವೇನು” ಅಂತ ಕೇಳಿದರೆ ಏನು ಹೇಳುವುದು?! ಕೆಲ ವರ್ಷಗಳ ಹಿಂದೆ ಈ ಥರದ ಕೊಂಚ ಪೋಲಿತನ ಇರುವ ಹಾಡುಗಳನ್ನು ಪ್ರಮೋಷನ್ನಿಗೆ ಅಂತ ಲೆಕ್ಕಾಚಾರ ಹಾಕಿಕೊಂಡೇ ಇಟ್ಟುಕೊಂಡಿರುತ್ತಿದ್ದರು. ಆದರೆ ಈ ಹಾಡನ್ನು ನೋಡುವಾಗ ಈ ಹಾಡಿನಿಂದ ಪ್ರಮೋಷನ್ ಆಗುವುದಕ್ಕಿಂತ, ನೋಡುಗರು “ಅಸಹ್ಯ” ಅಂತ ಬೈಯುವುದೇ ಗ್ಯಾರಂಟಿ ಅನ್ನಿಸುತ್ತದೆ.
ಮುಂಚಿನ ಪರಿಸ್ಥಿತಿ ಈಗಿಲ್ಲ. ಮೊಬೈಲ್ ಎಲ್ಲರ ಕೈಗಳಲ್ಲಿದೆ. ಗೂಗಲ್ನಲ್ಲಿ ಟೈಪಿಸಿದರೆ ಕೋಟ್ಯಂತರ “ಆ” ವೀಡಿಯೋಗಳೇ ನೋಡಲು ಸಿಗುತ್ತವೆ. ಅದಕ್ಕೆ ಯಾಕೆ ಸಿನಿಮಾಗೆ ದುಡ್ಡು ಕೊಟ್ಟು ಹೋಗಿ ಈ ಥರದ ಸಾಹಿತ್ಯ ಕೇಳುವ ದರ್ದು?!

“ಬೇಡುವೆನು ವರವನ್ನು” ಅಂತ ಬರೆದ ಪ್ರೇಮ್ ನಿಜವಾಗಿಯೂ ಈ ಹಾಡು ಬರೆದರಾ ಅಂತ ಗಾಬರಿಯಾಗುತ್ತದೆ. ಈ ಹಿಂದೆ “ಮೇಲುಕೋಟೆ ಹುಡುಗಿಯೊಬ್ಬಳು” ಅಂತ ಹಾಡು ಬರೆದಾಗಲೇ ಆ ಹಾಡಿನ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಸ್ವಲ್ಪವೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದಕ್ಕಿಂತ ಕೊಳಕಾದ ಸಾಹಿತ್ಯದ ಈ ಹಾಡನ್ನು ಬರೆದಿರುವುದು ಗೀತರಚನೆಗೆ ಮಾಡಿರುವ ಅವಮಾನ. ಅವರಿಗೆ ಜನರ ಬಗ್ಗೆ ಭಯವಿದ್ದಂತೆ ಕಾಣುತ್ತಿಲ್ಲ.
ಇಂಥ ಹಾಡುಗಳನ್ನು ಬರೆಯಲು ಪ್ರೇಮ್ ಅವರೇ ಬರಬೇಕಿಲ್ಲ. ಯಾವುದಾದರೂ ಪೋರ್ನ್ ಸ್ಟೋರಿಯೊಂದನ್ನು ಯಾವುದಾದರೂ AIಗೆ ಕೊಟ್ಟರೆ ಇದಕ್ಕಿಂತಲೂ ಅದ್ಭುತವಾದ (ಅಸಹ್ಯವಾದ) ಸಾಹಿತ್ಯವನ್ನು ನೀಡಬಲ್ಲದು. ಅದಕ್ಯಾಕೆ “lyrics- Prem’s” ಅಂತ ಬರೆದುಕೊಳ್ಳುವ ಅವಶ್ಯಕತೆ ಇದೆ?! ಪ್ರೇಮ್ ಅವರ ಸುತ್ತಲ ಹುಡುಗರಾದರೂ ಅವರಿಗೆ ಇಂಥವು ಬೇಡ ಅನ್ನಬಾರದೇ?! ಧ್ರುವ ಸರ್ಜಾ ಬೇಡ ಅನ್ನಬಾರದೇ? ನಿರ್ಮಾಪಕರು ಬೇಡ ಅನ್ನಬಾರದಿತ್ತೇ?ಕೊರಿಯಾಗ್ರಫರ್-ಹಾಡುವವರು-ಸಂಗೀತ ನಿರ್ದೇಶಕ ಇತ್ಯಾದಿ ವ್ಯಕ್ತಿಗಳಾದರೂ ಇದು ಕೇವಲ ಅಶ್ಲೀಲ ಅಂತ ಎಚ್ಚರಿಸಬಾರದಿತ್ತೇ?!
ಈ ಹಾಡಿನ ಬಗ್ಗೆ ಸ್ವತಃ ಪ್ರೇಮ್ ಅವರ ಮನೆಯವರು ಏನನ್ನಬಹುದು ಅನ್ನುವ ಕುತೂಹಲವಿದೆ. ಇವೆಲ್ಲವನ್ನು ಕೇವಲ ಐಟಮ್ ಸಾಂಗು ಅಂತ ನೋಡಬೇಕು, ಸಿನಿಮಾವನ್ನು ಸಿನಿಮಾ ಥರ ನೋಡಬೇಕು ಅಂದುಕೊಂಡರೆ I am sorry….ಅದರಲ್ಲೂ “ಜನಕ್ಕೆ ಇಂಥವೇ ಬೇಕು” ಅಂತೇನಾದರೂ ಅವರು ಹೇಳಿಕೆ ಕೊಟ್ಟರೆ, ಜನರ ಬಗ್ಗೆ ಎಷ್ಟು ಇವರಿಗೆಷ್ಟು ಅಸಡ್ಡೆ ಇದೆ ಎಂಬುದಂತೂ ಸತ್ಯ.
ಇದೀಗ ಈ ಸಿನಿಮಾ ಪ್ಯಾನ್ ಇಂಡಿಯಾ ಬೇರೆ!! ಬರೀ ನಮ್ಮವರಷ್ಟೇ ಉಗಿಯುವುದಲ್ಲದೇ, ಹೊರಗಿನವರೂ ಸೇರಿಕೊಳ್ಳುತ್ತಾರೆ….. (ಇಲ್ಲಿ ಹಾಕಿರುವ tweet ಗಮನಿಸಿ) ಅವರ್ಯಾಕೆ ಬೈಯುತ್ತಿದ್ದಾರೆ ಅಂತ ತಿರುಗಿ ಹೇಳುವ ಹಾಗೂ ಇಲ್ಲ, ನಮ್ಮವರನ್ನು ವಹಿಸಿಕೊಳ್ಳುವ ಹಾಗೂ ಇಲ್ಲ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/seraga-sarse-lyrics-kd-the-devil-song-row-director-prem-faces-massive-backlash-netizens-slam-447339.html. xn--babytilbehr-pgb.com does not claim ownership of this content. All rights remain with the original publisher.
