ಹಣದಾಸೆ ತೋರಿಸಿ 40 ಮಹಿಳೆಯರ ‘ಅಂಡಾಣು’ ಮಾರಾಟ; ನಾಲ್ವರು ಮಹಿಳೆಯರು ಪೊಲೀಸ್‌ ಬಲೆಗೆ | Badlapur Human Egg Sale Racket Busted in Thane: 40 Women Exploited, 4 Arrested Check Full Details

India

oi-Pragathi S

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ (Badlapur) ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬೃಹತ್ ‘ಅಂಡಾಣು ಮಾರಾಟ’ (Human Egg Sale) ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಹಣದ ಆಸೆ ತೋರಿಸಿ ಮಹಿಳೆಯರ ಅಂಡಾಣುಗಳನ್ನು ಅಕ್ರಮವಾಗಿ ಹೊರತೆಗೆದು ಮಾರಾಟ ಮಾಡುತ್ತಿದ್ದ ಈ ದಂಧೆಗೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರನ್ನೇ ಬಂಡವಾಳವಾಗಿಸಿಕೊಂಡು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಈ ಪ್ರಕರಣವು ಇದೀಗ ಇಡೀ ವೈದ್ಯಕೀಯ ಕ್ಷೇತ್ರವನ್ನು ಹಾಗೂ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಪ್ರಕರಣ ಬಯಲಾದದ್ದು ಹೇಗೆ?

ಅಂಡಾಣು ದಾನ ಮಾಡಿದ ಮಹಿಳೆಯೊಬ್ಬಳಿಗೆ ದಂಧೆಕೋರರು ಭರವಸೆ ನೀಡಿದ್ದ ಹಣವನ್ನು ನೀಡಿರಲಿಲ್ಲ. ಇದರಿಂದ ಬೇಸತ್ತ ಆಕೆ, ಬದ್ಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜ್ಯೋತ್ಸ್ನಾ ಸಾವಂತ್ ಅವರ ಬಳಿ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಮಹಿಳೆಯ ಕಥೆ ಕೇಳಿ ಅಚ್ಚರಿಗೊಂಡ ವೈದ್ಯೆ, ತಕ್ಷಣವೇ ಎಚ್ಚೆತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗುಪ್ತವಾಗಿ ಕಾರ್ಯಾಚರಣೆಗಿಳಿದಾಗ ಈ ಬೃಹತ್ ಜಾಲ ಬಯಲಾಗಿದೆ.

Human Egg Sale

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ದಂಧೆಯ ಪ್ರಮುಖ ರೂವಾರಿ ಸುಲಕ್ಷಣಾ ಗಡೇಕರ್ (44) ಎಂಬಾಕೆಯ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಆಕೆಯ ಮನೆಯಲ್ಲಿ ಅಂಡಾಣು ಉತ್ಪಾದನೆ ಹೆಚ್ಚಿಸುವ ಹಾರ್ಮೋನ್ ಇಂಜೆಕ್ಷನ್‌ಗಳು, ನಕಲಿ ಅಫಿಡವಿಟ್‌ಗಳು, ಆರ್ಥಿಕ ವಹಿವಾಟಿನ ವಿವರಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಲಕ್ಷಣಾ ಜೊತೆಗೆ, ಮಹಿಳೆಯರನ್ನು ಪುಸಲಾಯಿಸಿ ಕರೆತರುತ್ತಿದ್ದ ಏಜೆಂಟರಾದ ಅಶ್ವಿನಿ ಚಾಬುಕ್ಸ್‌ವಾರ್ (29), ಮಂಜುಷಾ ವಾಂಖೆಡೆ (46) ಹಾಗೂ ಅಕ್ರಮವಾಗಿ ಸೋನೋಗ್ರಫಿ ಮಾಡಲು ನೆರವಾಗುತ್ತಿದ್ದ ಸೋನಾಲ್ ಗರೇವಾಲ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ದಂಧೆ ನಡೆಯುತ್ತಿದ್ದುದು ಹೇಗೆ?

ಹಣದ ಸಂಕಷ್ಟದಲ್ಲಿರುವ ಮಹಿಳೆಯರನ್ನು ಹುಡುಕುತ್ತಿದ್ದ ಈ ಜಾಲ, ಒಂದು ಬಾರಿಗೆ 25,000 ದಿಂದ 30,000 ರೂ. ನೀಡುವುದಾಗಿ ಆಮಿಷ ಒಡ್ಡುತ್ತಿತ್ತು. ಒಪ್ಪಿದ ಮಹಿಳೆಯರಿಗೆ ಸುಲಕ್ಷಣಾ ಗಡೇಕರ್ ತನ್ನ ಮನೆಯಲ್ಲೇ ಯಾವುದೇ ವೈದ್ಯಕೀಯ ಸಲಹೆಯಿಲ್ಲದೆ ಹಾರ್ಮೋನ್ ಇಂಜೆಕ್ಷನ್ ನೀಡುತ್ತಿದ್ದಳು. ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಸೋನೋಗ್ರಫಿ ನಡೆಸಿ, ಅಂಡಾಣುಗಳು ಸಿದ್ಧವಾದ ಬಳಿಕ ಅವರನ್ನು ಐವಿಎಫ್ (IVF) ಕೇಂದ್ರಗಳಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಅಂಡಾಣುಗಳನ್ನು ಹೊರತೆಗೆದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಗಾಗಿ ಮಹಿಳೆಯರನ್ನು ಬೆಂಗಳೂರು, ತೆಲಂಗಾಣ, ಪುಣೆ, ಮತ್ತು ನಾಸಿಕ್‌ನ ಆಸ್ಪತ್ರೆಗಳಿಗೂ ಕಳುಹಿಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

33 ಬಾರಿ ಅಂಡಾಣು ತೆಗೆದ ಪಾಪಿಗಳು

ಈ ದಂಧೆಯಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಮಹಿಳೆಯರನ್ನು ಶೋಷಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಒಬ್ಬ ಮಹಿಳೆಯಿಂದ ಬರೋಬ್ಬರಿ 33 ಬಾರಿ ಅಂಡಾಣುಗಳನ್ನು ಹೊರತೆಗೆಯಲಾಗಿದೆ. ‘ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ- 2021’ರ (ART Act) ಪ್ರಕಾರ, ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು, ಅದೂ ಕೂಡ ಆರ್ಥಿಕ ಲಾಭಕ್ಕಾಗಿ ಮಾಡುವಂತಿಲ್ಲ. ಆದರೆ, ಇಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

ಹಣದಾಸೆಗಾಗಿ ಪದೇ ಪದೇ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡುವುದರಿಂದ ಮತ್ತು ನಿರಂತರವಾಗಿ ಶಸ್ತ್ರಚಿಕಿತ್ಸೆ ಮೂಲಕ ಅಂಡಾಣುಗಳನ್ನು ಹೊರತೆಗೆಯುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ತೀವ್ರ ಸ್ವರೂಪದ ಅಡ್ಡಪರಿಣಾಮಗಳು ಬೀರುತ್ತವೆ. ಭವಿಷ್ಯದಲ್ಲಿ ಈ ಮಹಿಳೆಯರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿರುತ್ತದೆ, ಹಾಗೂ ಅವರ ಸಂತಾನೋತ್ಪತ್ತಿ ಸಾಮರ್ಥ್ಯ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯೂ ಇರುತ್ತದೆ.

ಮುಂದುವರಿದ ತನಿಖೆ

ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಎಆರ್‌ಟಿ ಕಾಯ್ದೆಯಡಿ (ART Act) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. “ಈ ಜಾಲದ ಹಿಂದೆ ದೊಡ್ಡ ದೊಡ್ಡ ಐವಿಎಫ್ ಕೇಂದ್ರಗಳು, ವೈದ್ಯರು, ಹಾರ್ಮೋನ್ ಇಂಜೆಕ್ಷನ್ ಪೂರೈಕೆದಾರರು ಹಾಗೂ ಆಸ್ಪತ್ರೆ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ. ಇದೊಂದು ರಾಷ್ಟ್ರಮಟ್ಟದ ಜಾಲವಾಗಿರುವ ಸಾಧ್ಯತೆಯಿದ್ದು, ತನಿಖೆಗಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ” ಎಂದು ಡಿಸಿಪಿ ಸಚಿನ್ ಗೋರೆ ತಿಳಿಸಿದ್ದಾರೆ. ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿಟ್ಕರ್ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/badlapur-human-egg-sale-racket-busted-in-thane-40-women-exploited-4-arrested-check-full-details-445195.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo