ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್‌ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ | PNG Centre Issues New Order to Expand Piped Natural Gas Connections cheaper Across India households

India

oi-Manohara M

ನವದೆಹಲಿ: ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆ ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಸಾಮಾನ್ಯ ಜನರ ಅಡುಗೆ ಮನೆಗೆ ಸುಲಭವಾಗಿ ಅನಿಲ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ದೇಶಾದ್ಯಂತ ನೈಸರ್ಗಿಕ ಅನಿಲ (Natural Gas) ಪೈಪ್‌ಲೈನ್ ಜಾಲವನ್ನು ಬಲಪಡಿಸಲು ಮತ್ತು ಸುಲಭ ವ್ಯವಹಾರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ‘ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ-2026’ ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಇದರಿಂದ ಇನ್ನು ಮುಂದೆ ಮನೆ ಮನೆಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ವೇಗವಾಗಲಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಈ ಹೊಸ ಆದೇಶವು ದೇಶಾದ್ಯಂತ ಗ್ಯಾಸ್ ಪೈಪ್‌ಲೈನ್‌ಗಳ ಜಾಲವನ್ನು ವಿಸ್ತರಿಸಲು ಎದುರಾಗುತ್ತಿದ್ದ ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಈ ಹೊಸ ನಿಯಮದಡಿ, ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದ ಅನುಮೋದನೆಗಳನ್ನು ಪಡೆಯಲು ಸಮಯ ಮಿತಿಯನ್ನು ನಿಗದಿಪಡಿಸಲಾಗಿದೆ.

PNG

ವಿಳಂಬ ನೀತಿಗೆ ಬ್ರೇಕ್‌

ವಿಶೇಷವಾಗಿ ‘ಡೀಮ್ಡ್ ಕ್ಲಿಯರೆನ್ಸ್’ ಸೌಲಭ್ಯವನ್ನು ಇದರಲ್ಲಿ ಅಳವಡಿಸಲಾಗಿದ್ದು, ಒಂದು ವೇಳೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಅನುಮತಿ ನೀಡದಿದ್ದರೆ, ಅದನ್ನು ‘ಅಂಗೀಕೃತ’ ಎಂದು ಪರಿಗಣಿಸಿ ಕಾಮಗಾರಿ ಮುಂದುವರಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಸುವಾಗ ಎದುರಾಗುತ್ತಿದ್ದ ವಿಳಂಬ ನೀತಿಗೆ ಈಗ ಬ್ರೇಕ್ ಬೀಳಲಿದೆ.

ವ್ಯವಹಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಶುಲ್ಕ ಮತ್ತು ಕಾರ್ಯವಿಧಾನಗಳನ್ನು ಏಕರೂಪಗೊಳಿಸಿದೆ. ಪೈಪ್‌ಲೈನ್ ಅಳವಡಿಸುವಾಗ ರಸ್ತೆಗಳನ್ನು ಅಗೆಯಲು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಾದ ಮೊತ್ತ ಮತ್ತು ಮರುಸ್ಥಾಪನೆಯ ನಿಯಮಗಳನ್ನು ಪಾರದರ್ಶಕಗೊಳಿಸಲಾಗಿದೆ. “ಅಗೆಯಿರಿ ಮತ್ತು ಸರಿಪಡಿಸಿ” ಎಂಬ ಸ್ಪಷ್ಟ ನೀತಿಯನ್ನು ತರಲಾಗಿದ್ದು, ಇದರಿಂದ ಪೈಪ್‌ಲೈನ್ ಕಂಪನಿಗಳು ಮತ್ತು ಸ್ಥಳೀಯ ಸಂಸ್ಥೆಗಳ ನಡುವಿನ ವಿವಾದಗಳು ಕಡಿಮೆಯಾಗಲಿವೆ. ಇದು ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

ಗ್ರಾಹಕ ಸ್ನೇಹಿ ಕ್ರಮಗಳಿಗೂ ಈ ಆದೇಶದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪೈಪ್‌ಲೈನ್ ಸೌಲಭ್ಯವಿರುವ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬದಲಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಲಾಗಿದೆ. ಇದು ಗ್ರಾಹಕರಿಗೆ ಸಿಲಿಂಡರ್ ಕಾಯ್ದಿರಿಸುವ ಮತ್ತು ಹೊತ್ತೊಯ್ಯುವ ಕಿರಿಕಿರಿಯಿಂದ ಮುಕ್ತಿ ನೀಡಲಿದೆ. ಅಲ್ಲದೆ, ಪೈಪ್‌ಲೈನ್ ಮೂಲಕ ಸರಬರಾಜಾಗುವ ಅನಿಲವು ಹೆಚ್ಚು ಸುರಕ್ಷಿತ ಮತ್ತು ಆರ್ಥಿಕವಾಗಿ ಅಗ್ಗವಾಗಿದ್ದು, ಸುಸ್ಥಿರ ಇಂಧನ ಬಳಕೆಗೆ ಇದು ದಾರಿಯಾಗಲಿದೆ.

ಮನೆ ಮನೆಗೂ ಗ್ಯಾಸ್ ಸಂಪರ್ಕ

ನಗರ ಅನಿಲ ವಿತರಣಾ (ಸಿಜಿಡಿ) ಜಾಲದ ವೇಗದ ವಿಸ್ತರಣೆಯು ಸಾರಿಗೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಮಟ್ಟದ ಬಲ ನೀಡಲಿದೆ. ಪೈಪ್‌ಲೈನ್‌ಗಳು ನಗರಗಳ ಜೊತೆಗೆ ಅರೆ-ನಗರ ಪ್ರದೇಶಗಳಿಗೂ ತಲುಪುವುದರಿಂದ ಸಿಎನ್‌ಜಿ (ಸಿಎನ್‌ಜಿ) ವಾಹನಗಳಿಗೆ ಇಂಧನ ಪೂರೈಕೆ ಸುಲಭವಾಗಲಿದೆ. ಈ ಮೂಲಕ ಭಾರತವನ್ನು ‘ಅನಿಲ ಆಧಾರಿತ ಆರ್ಥಿಕತೆ’ಯನ್ನಾಗಿ ರೂಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಕನಸು ನನಸಾಗುವತ್ತ ಸಾಗುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಜನಸಾಮಾನ್ಯರಿಗೆ ಏನು ಲಾಭ?

ಗ್ಯಾಸ್ ಕನೆಕ್ಷನ್ ಪಡೆಯಲು ಇನ್ನು ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಸಿಲಿಂಡರ್‌ಗೆ ಹೋಲಿಸಿದರೆ ಪಿಎನ್‌ಜಿ ಹೆಚ್ಚು ಸುರಕ್ಷಿತ ಮತ್ತು ಕೈಗೆಟಕುವ ದರದಲ್ಲಿರಲಿದೆ. ನೈಸರ್ಗಿಕ ಅನಿಲ ಬಳಕೆಯಿಂದ ಮಾಲಿನ್ಯ ಕಡಿಮೆಯಾಗಲಿದ್ದು, ಸ್ವಚ್ಛ ಭಾರತದ ಗುರಿಗೆ ಸಾಥ್ ನೀಡಲಿದೆ. ಸಿಎನ್‌ಜಿ ಚಾಲಿತ ವಾಹನಗಳಿಗೆ ಮತ್ತು ಕೈಗಾರಿಕೆಗಳಿಗೆ ನಿರಂತರ ಇಂಧನ ಪೂರೈಕೆ ಸಾಧ್ಯವಾಗಲಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/png-centre-issues-new-order-to-expand-piped-natural-gas-connections-cheaper-across-india-households-448235.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo