
Karnataka
oi-Pragathi S
ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಅತ್ಯಂತ ಕಠಿಣ ಹೆಜ್ಜೆಯೊಂದನ್ನು ಇಟ್ಟಿದೆ. ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಕಂಡುಬಂದರೆ, ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ – POCSO) ಕಾಯ್ದೆಯಡಿ ಪೊಲೀಸರಿಗೆ ವರದಿ ಮಾಡಲೇಬೇಕು ಎಂದು ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರೆ ಸಂಬಂಧಪಟ್ಟ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಆರೋಗ್ಯ ಆಯುಕ್ತರು ಏಪ್ರಿಲ್ 1, 2026 ರಂದು ಈ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಮಾರ್ಗಸೂಚಿಯ ಪ್ರಕಾರ, 18 ವರ್ಷದೊಳಗಿನ ಯಾವುದೇ ಬಾಲಕಿ ಗರ್ಭಿಣಿಯಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಅಥವಾ ತಪಾಸಣೆಗೆ ಬಂದರೆ, ಅದು ಪೋಕ್ಸೊ ಕಾಯ್ದೆಯಡಿ ಅತ್ಯಂತ ಗಂಭೀರ ಅಪರಾಧ ಪ್ರಕರಣವಾಗುತ್ತದೆ. ಹೀಗಾಗಿ, ಇಂತಹ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣವೇ, ಚಿಕಿತ್ಸೆ ನೀಡುವ ವೈದ್ಯರು ವಿಳಂಬ ಮಾಡದೆ ಹತ್ತಿರದ ವಿಶೇಷ ಬಾಲಾಪರಾಧ ಪೊಲೀಸ್ ಘಟಕಕ್ಕೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.

ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ
ಹಲವು ಬಾರಿ ಸಮಾಜದ ಭಯ, ಕುಟುಂಬದ ಮರ್ಯಾದೆ ಅಥವಾ ಸ್ಥಳೀಯ ಮುಖಂಡರ ಒತ್ತಡಗಳಿಗೆ ಮಣಿದು ಇಂತಹ ಪ್ರಕರಣಗಳನ್ನು ರಹಸ್ಯವಾಗಿ ನಿರ್ವಹಿಸುವ ಪ್ರಯತ್ನಗಳು ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ನಡೆಯುತ್ತಿರುತ್ತವೆ. ಇದರಿಂದ ಅಪ್ರಾಪ್ತ ವಯಸ್ಸಿನ ಬಾಲಕಿಯರ ಜೀವಕ್ಕೆ ಅಪಾಯ ಒದಗುವುದಲ್ಲದೆ, ನೈಜ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಸುಲಭವಾಗಿ ಪಾರಾಗುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಕಾನೂನಿನ ಅರಿವಿದ್ದರೂ ಮಾಹಿತಿ ಮುಚ್ಚಿಡುವ ಆಸ್ಪತ್ರೆಗಳ ವಿರುದ್ಧ ನೇರ ಕಾನೂನು ಸಮರಕ್ಕೆ ಮುಂದಾಗಿದೆ.
ಭಾರತೀಯ ಕಾನೂನಿನ ಪ್ರಕಾರ, 18 ವರ್ಷದೊಳಗಿನ ಅಪ್ರಾಪ್ತೆಯ ಜೊತೆಗಿನ ಲೈಂಗಿಕ ಕ್ರಿಯೆ ಸಮ್ಮತಿಯಿಂದ ಕೂಡಿದ್ದರೂ ಸಹ ಅದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆಯು ಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ, ಈ ಪ್ರಕರಣಗಳನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡದೆ, ಗಂಭೀರ ಕಾನೂನು ಮತ್ತು ಸಾಮಾಜಿಕ ಪಿಡುಗಾಗಿ ಪರಿಗಣಿಸಿ ವರದಿ ಮಾಡಬೇಕು ಎಂದು ಆಯುಕ್ತರು ಸುತ್ತೋಲೆಯಲ್ಲಿ ಒತ್ತಿ ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-health-dept-mandates-private-hospitals-to-report-minor-pregnancies-under-pocso-act-449331.html. xn--babytilbehr-pgb.com does not claim ownership of this content. All rights remain with the original publisher.
