ಅವಾಚ್ಯ ಪದಗಳಿಂದ ನಿಂದನೆ; ಕನಕಪುರ ಶ್ರೀನಿವಾಸ್ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ನಿರ್ದೇಶಕ ಪ್ರೇಮ್ ದೂರು | Complaint Against Producer Kanakapura Srinivas at Film Chamber, Director Prem Seeks Legal Action

Entertainment

oi-Manohara M

ಸ್ಯಾಂಡಲ್‌ವುಡ್‌ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ತಮ್ಮ ಬಗ್ಗೆ ಅವಾಚ್ಯ ಹಾಗೂ ಅವಮಾನಕರ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಜೋಗಿ ಪ್ರೇಮ್ ಅವರು ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ‘ಕಾಟನ್‌ಪೇಟೆ’ ಸಿನಿಮಾದ ಪತ್ರಿಕಾಗೋಷ್ಠಿ ವೇಳೆ ಕನಕಪುರ ಶ್ರೀನಿವಾಸ್ ಅವರು ಹಲವು ನಟರು ಮತ್ತು ನಿರ್ದೇಶಕರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು, ಅದರಲ್ಲೂ ಜೋಗಿ ಪ್ರೇಮ್ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಅಸಭ್ಯ ಭಾಷೆ ಬಳಸಿದ್ದರು ಎನ್ನಲಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜೋಗಿ ಪ್ರೇಮ್, ತಮ್ಮ ಗೌರವ ಹಾಗೂ ವೃತ್ತಿಪರ ಮೌಲ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫಿಲ್ಮ್‌ ಚೇಂಬರ್ ಅಧ್ಯಕ್ಷರಿಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ, “ಸಾರ್ವಜನಿಕ ವೇದಿಕೆಯಲ್ಲಿ ವೈಯಕ್ತಿಕ ನಿಂದನೆ ಮಾಡುವುದು, ಅವಾಚ್ಯ ಶಬ್ದಗಳನ್ನು ಬಳಸುವುದು ಕನ್ನಡ ಚಿತ್ರರಂಗದ ಘನತೆಗೆ ಧಕ್ಕೆ ತರುತ್ತದೆ. ಈ ರೀತಿಯ ವರ್ತನೆ ಸಹಿಸಲಾಗದು” ಎಂದು ಜೋಗಿ ಪ್ರೇಮ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಈ ಪ್ರಕರಣದಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಚೇಂಬರ್‌ಗೆ ಮನವಿ ಮಾಡಿದ್ದಾರೆ.

Kanakapura Srinivas

ಈ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಮುಂದಿನ ದಿನಗಳಲ್ಲಿ ಇಬ್ಬರನ್ನೂ ಕರೆಯಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಈಗ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದೆ.

ದೂರಿನಲ್ಲೇನಿದೆ?

‘ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್, 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸಧಬಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ, ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತೇನೆ’.

‘ನಿರ್ಮಾಪಕ ಆರ್.ಎಸ್ ಶ್ರೀನಿವಾಸ್ ಅವರು ನನ್ನ ಬಳಿ ಚಿತ್ರ ನಿರ್ದೇಶನ ಮಾಡಿ ಕೊಡಲು 2004ರಲ್ಲಿ ಶ್ರೀಕಾಂತ್ ಎನ್ನುವವರ ಮೂಲಕ ಶ್ರೀನಿವಾಸ್ ಅವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು. ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಇದಾದ ನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ’.

‘ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಇದೆ ರೀತಿ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದರು. ಅಲ್ಲದೆ ಯಾವುದೇ ರೀತಿಯ ಹಣಕಾಸನ್ನು ನನ್ನ ಆಫೀಸ್ ವೆಚ್ಚಕ್ಕಾಗಾಲಿ, ನನ್ನ ಸಹ ನಿರ್ದೇಶಕರ ತಂಡಕ್ಕಾಗಲಿ ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಭರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು, ನಿರ್ದೇಶಿಸಲು ಹಾಗೂ ನಟಿಸಲು ಅವಕಾಶಗಳು ಬಂದಿದ್ದವು. ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದೇನೆ’.

5 ಲಕ್ಷ ವಾಪಸ್‌ ನೀಡಿದ್ದೆ

‘ಇದಾದ ಸುಮಾರು ವರ್ಷಗಳ ನಂತರ ನಿರ್ಮಾಪಕ ಶ್ರೀನಿವಾಸ್ ಅವರು ನನ್ನನ್ನು ಸಂಪರ್ಕಿಸಿ ನನಗೆ ಹಣದ ಅವಶ್ಯಕತೆ ಇದೆ ಎಂದು ನೀಡಿದ ಮುಂಗಡ ಹಣವನ್ನು ವಾಪಸ್ ಕೇಳಿದ್ದರು. ನಾನು ಆ ಸಂದರ್ಭದಲ್ಲಿ ಅವರಿಗೆ ಈ ಮೇಲ್ಕಂಡ ವಿಷಯವನ್ನು ತಿಳಿಸಿ ನೀವು ಕೊಟ್ಟಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಚಿತ್ರಕಥೆಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳಿದೆ. ಆಗ ಶ್ರೀನಿವಾಸ್ ಅವರು ತುಂಬ ಕಷ್ಟದಲ್ಲಿರುವ ಎಂದು ಕೇಳಿದಾಗ ನಿರ್ಮಾಪಕನ ಕಷ್ಟ ಅರಿತು ನನ್ನ ಸ್ವಂತ ಹಣದಿಂದ 5 ಲಕ್ಷ ಹಣವನ್ನು 2.5 ಲಕ್ಷಗಳನ್ನು ಚೆಕ್ ಮೂಲಕ ಹಾಗೂ 2.5 ಲಕ್ಷಗಳನ್ನು ನಗದು ರೂಪದಲ್ಲಿ ನಿರ್ಮಾಪಕರಾದ ಸಾರಾ ಗೋವಿಂದ್ ಅವರ ಮಧ್ಯಸ್ತಿಕೆಯಲ್ಲಿ ನೀಡಿದ್ದೇನೆ. ಆಗ ಅವರು ಹಣವನ್ನು ಸ್ವೀಕರಿಸಿ ಧನ್ಯವಾದ ತಿಳಿಸಿದ್ದರು’.

ನನ್ನ ಕುಟುಂಬ ನೊಂದಿದೆ

‘ಇದಾದ ಮತ್ತೆ ಕೆಲವು ವರ್ಷಗಳ ನಂತರ ಅವರದೇ ನಿರ್ಮಾಣದ ಕಾಟನ್ ಪೇಟೆ ಗೇಟ್ ಎಂಬ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡಿ, ಕೆಳಮಟ್ಟದ ಅವಾಚ್ಯ ಶಬ್ದಗಳಿಂದ ನನಗೆ ಹಾಗೂ ನನ್ನ ತಾಯಿಯ ಬಗ್ಗೆ ನಿಂದಿಸಿದ್ದಾರೆ. ಇದರಿಂದ ನನ್ನ ಪತ್ನಿಯಾದ ನಟಿ ನಿರ್ಮಾಪಕಿ ಶ್ರೀಮತಿ ರಕ್ಷಿತಾ ಪ್ರೇಮ್ ಹಾಗೂ ನನ್ನ ಮಗ ಮಾನಸಿಕವಾಗಿ ಮನನೊಂದಿದ್ದಾರೆ. ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳಳಿಗೂ ಬೇಸರ ಉಂಟಾಗಿದೆ. ಇದರಿಂದ ಈ ಕೂಡಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಪ್ರೇಮ್‌ ಪತ್ರದಲ್ಲಿ ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/complaint-against-producer-kanakapura-srinivas-at-film-chamber-director-prem-seeks-legal-action-442875.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo