
Sports
oi-Madhusudhan KR
RCB Vs RR IPL 2026: ಗುವಾಹಟಿಯಲ್ಲಿ ಶುಕ್ರವಾರ ನಡೆದ ಐಪಿಎಲ್ 2026ರ 16ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಆರ್ ಭರ್ಜರಿ ಗೆಲುವು ದಾಖಲಿಸಿತು.
ಆರ್‌ಸಿಬಿ ನೀಡಿದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ತಂಡಕ್ಕೆ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್ ನೆರವಾಯಿತು. ಧ್ರುವ್ ಜುರೆಲ್ ಕೇವಲ 43 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 81 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವೈಭವ್
ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೇವಲ 26 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 78 ರನ್ ಚಚ್ಚಿ ಉತ್ತಮ ಆರಂಭ ನೀಡಿದರು. ಹೀಗೆ ಧ್ರುವ್ ಜುರೆಲ್ ಮತ್ತು ವೈಭವ್ ಜೋಡಿ ಕೇವಲ 37 ಎಸೆತಗಳಲ್ಲಿ 108 ರನ್‌ಗಳ ಅಬ್ಬರದ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ಆರ್‌ಸಿಬಿ ಕೈಯಿಂದ ಕಿತ್ತುಕೊಂಡರು.
ಜವಾಬ್ದಾರಿಯುತ ಆಟ ಆಡಿದ ಆರ್‌ಸಿಬಿ ನಾಯಕ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್‌ಗಳನ್ನು ಕಲೆಹಾಕಿತು. ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂದು ತಂಡವು ಸಂಕಷ್ಟಕ್ಕೆ ಸಿಲುಕಿತು. ಆದರೂ ಕುಗ್ಗದ ನಾಯಕ ರಜತ್ ಪಾಟಿದಾರ್ ಅವರ ಜವಾಬ್ದಾರಿಯುತ ಆಟದಿಂದ 201/8 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ನಾಯಕ ರಾಜತ್ ಪಾಟಿದಾರ್ ಜವಾಬ್ದಾರಿಯುತ ಆಟವಾಡಿದ 40 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 63 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನೂ ವಿರಾಟ್ ಕೊಹ್ಲಿ ಅವರು ರವಿ ಬಿಷ್ಣೋಯ್ ಅವರ ಗೂಗ್ಲಿಗೆ ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಬಂದ ವೆಂಕಟೇಶ್ ಅಯ್ಯರ್, ಕೊನೆಯ ಓವರ್‌ನಲ್ಲಿ 4, 6, 6 ಸೇರಿದಂತೆ ಕೇವಲ 9 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆದರೂ, ಅಂತಿಮವಾಗಿ, ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್ ಅವರ ಚಾಣಾಕ್ಷತನ ಮತ್ತು ಬ್ಯಾಟಿಂಗ್‌ನಲ್ಲಿ ಜುರೆಲ್-ಸೂರ್ಯವಂಶಿ ಅವರ ಅಬ್ಬರದಿಂದ ರಾಜಸ್ಥಾನ್ ರಾಯಲ್ಸ್ ಸುಲಭ ಜಯ ಸಾಧಿಸಿತು.
ವೈಭವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧ್ರುವ್ ಜುರೆಲ್
ಪಂದ್ಯದ ನಂತರ ಮಾತನಾಡಿದ ಧ್ರುವ್ ಜುರೆಲ್, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ವೈಭವ್ ಬ್ಯಾಟಿಂಗ್ ಮಾಡುತ್ತಿದ್ದರೆ ಕ್ರಿಕೆಟ್ ತುಂಬಾ ಸುಲಭ ಎಂಬಂತೆ ಭಾಸವಾಗುತ್ತದೆ. ನಾನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಅವರು ಪ್ರತಿ ಎಸೆತವನ್ನೂ ಸಿಕ್ಸರ್, ಬೌಂಡರಿಗೆ ಅಟ್ಟುತ್ತಿದ್ದರು. ಅವರ ಆಟ ನೋಡುತ್ತಿದ್ದರೆ ಪಿಚ್‌ನಲ್ಲಿ ಏನೂ ಆಗ್ತಿಲ್ಲ, ಬ್ಯಾಟಿಂಗ್ ಮಾಡುವುದು ಇಷ್ಟೊಂದು ಸುಲಭವೇನೋ ಎಂದು ಅನಿಸುತ್ತದೆ. ಆದರೆ ವಾಸ್ತವದಲ್ಲಿ ಕ್ರಿಕೆಟ್ ಅಷ್ಟು ಸುಲಭವಲ್ಲ, ಅದು ಅವರ ಪ್ರತಿಭೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೈಭವ್ ಆಟದ ಬಗ್ಗೆ ಭುವಿ ಮೆಚ್ಚುಗೆ
ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿ ಭುವನೇಶ್ವರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. “15 ವರ್ಷದ ಬಾಲಕ ಇಷ್ಟು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವುದು ನಂಬಲು ಅಸಾಧ್ಯ. ಅವರು ಕೇವಲ ‘ಸ್ಲಾಗ್’ ಮಾಡುತ್ತಿಲ್ಲ, ಬದಲಾಗಿ ಸರಿಯಾದ ಕ್ರಿಕೆಟಿಂಗ್ ಶಾಟ್‌ಗಳನ್ನು ಆಡುತ್ತಿದ್ದಾರೆ,” ಎಂದು ಭುವಿ ಹೊಗಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಅಲ್ಲದೆ, “ಟಿ20 ಕ್ರಿಕೆಟ್‌ನಲ್ಲಿ ಎದುರಾಳಿ ಯಾರು ಎಂಬುದು ಮುಖ್ಯವಲ್ಲ, ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಅವರು 15 ವರ್ಷದವರಾಗಿರಲಿ ಅಥವಾ 25 ವರ್ಷದವರಾಗಿರಲಿ, ಚೆನ್ನಾಗಿ ಬ್ಯಾಟಿಂಗ್ ಮಾಡಿದರೆ ಗೌರವಿಸಲೇಬೇಕು,” ಎಂದು ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rajasthan-royals-beat-rcb-by-6-wickets-as-vaibhav-suryavanshi-dhruv-jurel-shine-in-ipl-2026-450077.html. xn--babytilbehr-pgb.com does not claim ownership of this content. All rights remain with the original publisher.
