ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಈ ಭಾಗದ ಜನರ ದಶಕಗಳ ಕನಸು ನನಸು, ಬಾಕಿ ಉಳಿದ ಕೆಲಸ! | Uttara Kannada Gets Multi-Specialty Hospital Decades-Long Dream Fulfilled Facilities Still Pending

Karnataka

oi-Hitesh Y

ಉತ್ತರ ಕನ್ನಡ: ಉತ್ತರ ಕನ್ನಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಈ ಭಾಗದ ಜನರು ಹಲವು ವರ್ಷಗಳಿಂದ ಈ ಭಾಗದಲ್ಲೊಂದು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಕನಸು ಕಾಣುತ್ತಿದ್ದರು. ಈ ಬಗ್ಗೆ ಸರ್ಕಾರವು ಇದೀಗ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಪಘಾತಗಳು ಸಂಭವಿಸಿದಾಗ ಈ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಲ್ಲಿದೆ ಹುಬ್ಬಳ್ಳಿಯ ವರೆಗೂ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈಗ ಕೊನೆಗೂ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದು ಇನ್ನಷ್ಟು ಮಿನಿ ಸರ್ಜರಿಗಳನ್ನು ಉಳಿಸಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಮತ್ತು ಯಲ್ಲಾಪುರ ತಾಲ್ಲೂಕಿನ ಖಾನಾಪುರ ತಾಳಗುಪ್ಪ ರಾಜ್ಯ ಹೆದ್ದಾರಿ 93 ರಲ್ಲಿನ ಸೇತುವೆ ನಿರ್ಮಾಣ, ಯಲ್ಲಾಪುರ ಪಟ್ಟಣದ ನಿರೀಕ್ಷಣಾ ಮಂದಿರದ ಹೊಸ ಕಟ್ಟಡದ ನಿರ್ಮಾಣ ಹಾಗೂ ಮುಂಡಗೋಡ ತಾಲ್ಲೂಕಿನ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿದ್ದಾರೆ.

Uttara Kannada Gets Multi-Specialty Hospital Decades-Long Dream Fulfilled Facilities Still Pending

ಸರ್ಕಾರಿ‌ ಆಸ್ಪತ್ರೆ ಇಲ್ಲದೆ ತುರ್ತು ಚಿಕಿತ್ಸೆಗಾಗಿ ಉತ್ತರ ಕನ್ನಡದಿಂದ ಹುಬ್ಬಳ್ಳಿಯ ಕಿಮ್ಸ್‌ಗೆ ರೋಗಿಗಳನ್ನು ಗಂಟೆಗಟ್ಟಲೆ ಅಂಬ್ಯುಲೆನ್ಸ್‌ನಲ್ಲಿ ಅಥವಾ ಕಾರಿನಲ್ಲಿ ಕರೆದುಕೊಂಡು ಹೋಗಿ(ಅದೂ ರಸ್ತೆಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ),‌ ಅಲ್ಲಿಗೆ ತಲುಪುವಷ್ಟರಲ್ಲಿ ಅವರ ಜೀವ ಹೋಗಿ, ಶವ ಮರಳಿ ತರುವ ಪರಿಸ್ಥಿತಿ ಇತ್ತು. ಈ ಭಾಗದ ಜನರ ಕಣ್ಣೀರ ಕಥೆಗಳಿಗೆ ಕೊನೆಗೂ ಮುಕ್ತಿ ಸಿಗುತ್ತಿದೆ. ಈ ಭಾಗದಲ್ಲಿ ಕೊನೆಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ಆಸ್ಪತ್ರೆ ನಿರ್ಮಾಣವಾಯಿತು ಎಂದು ಸಂಪೂರ್ಣ ಸಮಾಧಾನಪಡುವ ಪರಿಸ್ಥಿತಿಯೂ ಇಲ್ಲ. ಇನ್ನೂ ಕೆಲವೊಂದು ನ್ಯೂನ್ಯತೆಗಳು ಉಳಿದಿವೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟವೇ ನಡೆದಿತ್ತು

ಇನ್ನು ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಈ ಭಾಗದ ಜನರು ಹೋರಾಟವನ್ನೇ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಕಣಿವೆಯ ಹಳ್ಳಿಗಳು, ಪರ್ವತದ ಅಂಚಿನಲ್ಲಿ ನೆಲಿಸಿರುವ ಸಮಯದಾಯಗಳು ಹಾಗೂ ಸುತ್ತಮುತ್ತಲಿನ ಗ್ರಾಮೀಣ ನಿವಾಸಿಗಳ ಅನುಕೂಲಕ್ಕಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ದಶಕಗಳಿಂದಲೂ ಹೋರಾಟ ಮಾಡುತ್ತಿದ್ದಾರೆ.

ಉತ್ತರ ಕನ್ನಡದಲ್ಲಿ ಸ್ಥಳೀಯರಿಗೆ ತುರ್ತು ಚಿಕಿತ್ಸೆಯ ಖಾತರಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವುದು ಹಲವು ವರ್ಷಗಳ ಕನಸು. 2022ರಲ್ಲಿ ಭಟ್ಕಳದ ಶಿರೂರು ಟೋಲ್ ಪ್ಲಾಜಾ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಸೇರಿ ನಾಲ್ವರು ಮೃತಪಟ್ಟಿದ್ದರು.‌ ಈಚೆಗೆ ಹಿಂದೆ ಕೊಡ್ಕಣಿ ನಿವಾಸಿಯೊಬ್ಬರು ಮುಂಜಾನೆ ಹೃದಯಾಘಾತಕ್ಕೊಳಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರು ಇಲ್ಲದಿರುವುದರಿಂದ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದರು. ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅಂಕೋಲಾದ ಕೂಲಿ ಕಾರ್ಮಿಕ ಚಂದ್ರಹಾಸ ಆಗೇರ ಎನ್ನುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಶಿಫಾರಸು ಮಾಡಲಾಗಿತ್ತು. ಅವರು ಸಹ ಆ್ಯಂಬುಲೆನ್ಸ್‌ನಲ್ಲಿಯೇ ಪ್ರಾಣಬಿಟ್ಟದ್ದರು ಇದು ಕೆಲವೇ ಕೆಲವು ಉದಾಹರಣೆಗಳು. ಈ ರೀತಿ ಹಲವರು ಪ್ರಾಣ ಕಳೆದುಕೊಂಡಿರುವುದು ಇದೆ. ಇದಕ್ಕೆಲ್ಲವೂ ಮುಕ್ತಿ ಸಿಗುವ ಸಮಯ ಬಂದಿದೆ. ಆದರೆ ಅದರಲ್ಲೂ ನ್ಯೂನ್ಯತೆಗಳು ಉಳಿದಿವೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನೂ ಉಳಿದಿವೆ ಸಮಸ್ಯೆ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಸುಪರ್ದಿಯ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಕಟ್ಟಡ ಉದ್ಘಾಟನೆ ಆಗಿದೆ. ಈ ಆಸ್ಪತ್ರೆಯಲ್ಲೇ ಮಲ್ಟಿ ಸ್ಪೆಷಾಲಿಟಿ ಸೌಕರ್ಯವಿದೆ ಎಂದು ಶಾಸಕ ಸತೀಶ ಸೈಲ್ ಅವರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇದುವರೆಗೂ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಿಲ್ಲ. ಕ್ಯಾನ್ಸರ್ ಚಿಕಿತ್ಸಾ ವಿಭಾಗ ನಿರ್ಮಾಣ ಹಂತದಲ್ಲಿದ್ದು, ರೇಡಿಯಾಜಲಿಸ್ಟ್ ನೇಮಕವಾಗಿಲ್ಲ. ಹೃದ್ರೋಗ ತಜ್ಞರು ಹಾಗೂ ನರರೋಗ ತಜ್ಞರನ್ನು ನೇಮಿಸಿಲ್ಲ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗೆ ನೆರೆ ಜಿಲ್ಲೆಯಗಳ ಖಾಸಗಿ , ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಜನರು ದೂರಿದ್ದಾರೆ.

ಇನ್ನು ಇಂದಿನ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ಸಂದರ್ಭದಲ್ಲಿ ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶರಣಪ್ರಕಾಶ್ ಪಾಟೀಲ್, ಮಂಕಾಳ ವೈದ್ಯ, ಶಾಸಕರುಗಳಾದ ಶಿವರಾಂ ಹೆಬ್ಬಾರ್, ಸತೀಶ್ ಸೈಲ್, ಭೀಮಣ್ಣ ನಾಯ್ಕ, ಮಾಜಿ ಸಚಿವರೂ ಶಾಸಕರಾದ ಆರ್.ವಿ.ದೇಶಪಾಂಡೆ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/uttara-kannada-gets-multi-specialty-hospital-decades-long-dream-fulfilled-facilities-still-pending-444691.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo