ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral | Uber for Coconuts, Anand Mahindra Applauds Kerala’s ‘Hello Nariyal’ Tech-Driven Harvesting Service

India

oi-Pragathi S

ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇರಳದಲ್ಲಿ ಆರಂಭವಾಗಿರುವ ಅತ್ಯಂತ ವಿಶಿಷ್ಟವಾದ ‘ಆನ್-ಡಿಮ್ಯಾಂಡ್’ ಸೇವೆಯೊಂದು ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದ್ದು, ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಕಸುಬುಗಳ ಅದ್ಭುತ ಸಮ್ಮಿಲನವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾನ್ಯವಾಗಿ ನಾವು ಊರುಗಳಲ್ಲಿ ಅಥವಾ ನಗರಗಳಲ್ಲಿ ತೆಂಗಿನಕಾಯಿ ಕೀಳಲು ಜನರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದರೆ, ಕೇರಳದಲ್ಲಿ ಈಗ ಕ್ಯಾಬ್ ಅಥವಾ ಉಬರ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಮನೆ ಬಾಗಿಲಿಗೆ ಕರೆಸಿಕೊಳ್ಳಬಹುದು. ‘ಹಲೋ ನರಿಯಲ್’ ಎಂಬ ವಿನೂತನ ಸ್ಟಾರ್ಟಪ್ ಕಂಪೆನಿಯೊಂದು ಇಂತಹದೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದೆ.

Uber

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ, ಹಲೋ ನರಿಯಲ್ ಸಂಸ್ಥೆಯ ಸಮವಸ್ತ್ರ ಧರಿಸಿದ ವೃತ್ತಿಪರ ಕೆಲಸಗಾರನೊಬ್ಬ ಸೈಕಲ್ ಮೇಲೆ ಗ್ರಾಹಕರ ಮನೆಗೆ ಬರುವುದನ್ನು ನೋಡಬಹುದು. ಆತನ ಬಳಿ ಅತ್ಯಂತ ಎತ್ತರದ ತೆಂಗಿನ ಮರಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಏರಲು ಬೇಕಾದ ಆಧುನಿಕ ಕ್ಲೈಂಬಿಂಗ್ ಉಪಕರಣಗಳಿವೆ.

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, “ನಾವು ಯಾವಾಗಲೂ ಭಾರತದ ಸೇವಾ ವಲಯದ ಬಗ್ಗೆ ಮಾತನಾಡುವಾಗ ಕೇವಲ ಐಟಿ ರಫ್ತು ಅಥವಾ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆದರೆ, ನಾವೀಗ ನಮ್ಮ ಅತ್ಯಂತ ಸಾಂಪ್ರದಾಯಿಕ ಮತ್ತು ಹೈಪರ್-ಲೋಕಲ್ (hyper-local) ಸೇವೆಗಳನ್ನೂ ಕೂಡ ಡಿಜಿಟಲೀಕರಣ ಮಾಡುತ್ತಿದ್ದೇವೆ,” ಎಂದು ಬರೆದುಕೊಂಡಿದ್ದಾರೆ. ಕೇವಲ ನಗರ ಪ್ರದೇಶಗಳಿಗೆ, ವೈಟ್-ಕಾಲರ್ ಉದ್ಯೋಗಗಳಿಗೆ ಸೀಮಿತವಾಗಿದ್ದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈಗ ಗ್ರಾಮೀಣ ಮತ್ತು ಸಾಂಪ್ರದಾಯಿಕ ಉದ್ಯೋಗಗಳತ್ತ ವಿಸ್ತರಣೆಯಾಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕೇರಳವು ತನ್ನ ಕೃಷಿ, ಅದರಲ್ಲೂ ವಿಶೇಷವಾಗಿ ತೆಂಗು ಬೆಳೆಯುವಿಕೆಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮರ ಹತ್ತುವ ನುರಿತ ಕಾರ್ಮಿಕರ ಕೊರತೆ ಈ ವಲಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇಂತಹ ಸವಾಲುಗಳಿಗೆ ‘ಹಲೋ ನರಿಯಲ್’ ಅತ್ಯುತ್ತಮ ಪರಿಹಾರವಾಗಿ ಮೂಡಿಬಂದಿದೆ. ಆನ್‌ಲೈನ್ ಮೂಲಕ ಇವರನ್ನು ಸಂಪರ್ಕಿಸಿದರೆ, ನಿಗದಿತ ಸಮಯಕ್ಕೆ ಸರಿಯಾಗಿ ತರಬೇತುದಾರರು ಮನೆ ಬಳಿ ಹಾಜರಾಗುತ್ತಾರೆ.

ಈ ವಿಡಿಯೋದಲ್ಲಿ ಮಹೀಂದ್ರಾ ಅವರ ಗಮನ ಸೆಳೆದ ಮತ್ತೊಂದು ಪ್ರಮುಖ ಅಂಶವೆಂದರೆ, ಆ ತೆಂಗಿನ ಮರ ಏರುತ್ತಿರುವ ಯುವಕ ಛತ್ತೀಸ್‌ಗಢ ಮೂಲದವನಾಗಿದ್ದಾನೆ. ಈ ಕುರಿತು ವಿಶ್ಲೇಷಿಸಿರುವ ಅವರು, “ಹಿಂದಿನ ದಶಕಗಳಲ್ಲಿ ಬಿಹಾರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳ ಕಾರ್ಮಿಕರು ಅವಕಾಶಗಳಿಗಾಗಿ ಕೈಗಾರಿಕಾ ಕೇಂದ್ರಗಳಿಗೆ ವಲಸೆ ಹೋಗುತ್ತಿದ್ದರು. ಆದರೆ ಇಂದು ಅದೇ ಆಕಾಂಕ್ಷೆಗಳು ಕೇವಲ ಬೃಹತ್ ಕೈಗಾರಿಕೆಗಳಲ್ಲಿ ಮಾತ್ರವಲ್ಲದೆ, ಹೊಸ-ಯುಗದ, ತಂತ್ರಜ್ಞಾನ-ಚಾಲಿತ ಸೇವೆಗಳಲ್ಲೂ ಅವಕಾಶಗಳನ್ನು ಕಂಡುಕೊಳ್ಳುತ್ತಿವೆ,” ಎಂದು ತಿಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ನಗರಗಳಲ್ಲಿಯೂ ಇರುವ ಇಂಥದ್ದೇ ಸೇವೆಗಳ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಪುಣೆಯಲ್ಲಿಯೂ ಸಹ ಉತ್ತರ ಭಾರತದ ಕಾರ್ಮಿಕರೊಬ್ಬರು ಇದೇ ರೀತಿಯ ವಿಶೇಷ ಉಪಕರಣಗಳನ್ನು ಬಳಸಿ, ಸುರಕ್ಷಿತವಾಗಿ ಮತ್ತು ಅತ್ಯಂತ ವೇಗವಾಗಿ ತೆಂಗಿನಕಾಯಿ ಕೀಳುವ ಸೇವೆಯನ್ನು ಒದಗಿಸುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಉಬರ್, ಓಲಾ, ಅಥವಾ ಸ್ವಿಗ್ಗಿಯಂತಹ ಸೇವೆಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿವೆಯೋ, ಅದೇ ಮಾದರಿಯಲ್ಲಿ ಸ್ಥಳೀಯ ಕಾರ್ಮಿಕ ವಲಯಕ್ಕೂ ತಂತ್ರಜ್ಞಾನ ಪ್ರವೇಶಿಸುತ್ತಿರುವುದು ದೇಶದ ಭವಿಷ್ಯದ ಆರ್ಥಿಕತೆಗೆ ಭರವಸೆಯ ಬೆಳಕಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/uber-for-coconuts-anand-mahindra-applauds-keralas-hello-nariyal-tech-driven-harvesting-service-449153.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo