
Sports
oi-Madhusudhan KR
IPL 2026: ಐಪಿಎಲ್ ಹಬ್ಬ ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಎಸ್‌ಆರ್‌ಎಚ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಚೇತೇಶ್ವರ ಪೂಜಾರ ಅವರು ಈ ಬಾರಿಯ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ-ಕ್ರಿಸ್ ಗೇಲ್ ಮೀರಿಸುವ ಅಪಾಯಕಾರಿ ಆರಂಭಿಕ ಆಟಗಾರರಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹಾಲಿ ಚಾಂಪಿಯನ್ ಆರ್‌ಸಿಬಿಯು ಮಾರ್ಚ್ 28ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಈ ಬಾರಿಯೂ ಟ್ರೋಫಿ ಗೆಲ್ಲುವ ತಂಡಗಳ ರೇಸ್‌ನಲ್ಲಿ ಒಂದಾಗಿದೆ. ಆದರೂ, ಬೆಂಗಳೂರು ತಂಡಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಚೇತೇಶ್ವರ ಪೂಜಾರ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಐಪಿಎಲ್ 2026ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಉತ್ತಮವಾಗಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಅಗ್ರ ಕ್ರಮಾಂಕದ ಆಟಗಾರರಿಂದ ಹಿಡಿದು ಕೆಳಕ್ರಮಾಂಕದವರೆಗೂ ತಂಡದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಆಟಗಾರರ ದಂಡೇ ಇದೆ. ಈ ತಂಡವು ತಮ್ಮ ಲಯದಲ್ಲಿದ್ದಾಗ 275ಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಸ್‌ಆರ್‌ಎಚ್ ಬ್ಯಾಟಿಂಗ್ ಬಲದ ಬಗ್ಗೆ ಶ್ಲಾಘನೆ
ಐಪಿಎಲ್ 2026ರ ಅಭಿಯಾನವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 28ರಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ, ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರು ಹೈದರಾಬಾದ್ ತಂಡದ ಬ್ಯಾಟಿಂಗ್ ಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚೇತೇಶ್ವರ ಪೂಜಾರ ಅವರ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಜೋಡಿಯಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ, ಆರ್‌ಸಿಬಿಯ ಹಿಂದಿನ ದಿಗ್ಗಜ ಆರಂಭಿಕ ಜೋಡಿಯಾದ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಸಂಚಲನ ಮೂಡಿಸಿದ ಪೂಜಾರ ಹೇಳಿಕೆ
ಐಪಿಎಲ್ ಇತಿಹಾಸದಲ್ಲೇ ಕೊಹ್ಲಿ ಮತ್ತು ಗೇಲ್ ಜೋಡಿಯು ಅದೆಷ್ಟು ಭಯಾನಕವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅಂತಹ ಜೋಡಿಯನ್ನು ಮೀರಿಸುವಷ್ಟು ಸಾಮರ್ಥ್ಯವನ್ನು ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಹೊಂದಿದ್ದಾರೆ ಎಂದು ಪೂಜಾರ ನೀಡಿರುವ ಈ ಹೇಳಿಕೆಯು ಐಪಿಎಲ್ 2026ರ ಆರಂಭಕ್ಕೆ ಮುನ್ನ ದೊಡ್ಡ ಸಂಚಲನ ಮೂಡಿಸಿದೆ.
ಅಪಾಯಕಾರಿ ಆಟಗಾರರನ್ನ ಹೆಸರಿಸಿದ ಪೂಜಾರ
“ಕಳೆದ ಒಂದೆರಡು ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಪ್ರದರ್ಶನವನ್ನು ನೋಡಿದಾಗ, ಐಪಿಎಲ್ ಇತಿಹಾಸದಲ್ಲಿ ಇವರು ಅತ್ಯಂತ ಅಪಾಯಕಾರಿ ಮತ್ತು ಸ್ಪೋಟಕ ಆರಂಭಿಕ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಮೊದಲ ಎಸೆತದಿಂದಲೇ ಹೇಗೆ ಬೌಲರ್‌ಗಳನ್ನು ದಂಡಿಸಬೇಕೆಂಬುದನ್ನು ಚೆನ್ನಾಗಿ ಬಲ್ಲವರು. ಇವರಿಂದಲೇ ಎಸ್‌ಆರ್‌ಎಚ್ ತಂಡವು ಕಳೆದ ಎರಡು ಸೀಸನ್‌ಗಳಲ್ಲಿ ಸತತವಾಗಿ 250 ರನ್‌ಗಳ ಗಡಿ ದಾಟಲು ಸಾಧ್ಯವಾಗಿದೆ,” ಎಂದು ಹೇಳಿದರು.
“ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ತಂಡವೂ ಇಷ್ಟು ಸ್ಥಿರವಾಗಿ ಬೃಹತ್ ಮೊತ್ತವನ್ನು ಕಲೆಹಾಕಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಇಬ್ಬರು ಆರಂಭಿಕ ಆಟಗಾರರು. ಬ್ಯಾಟ್ ಮೂಲಕ ಮೈದಾನದ ಎಲ್ಲಾ ಕಡೆಗಳಿಗೂ ಚೆಂಡನ್ನು ಕಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿ ಪಂದ್ಯದಲ್ಲೂ ಇದನ್ನು ಮಾಡುವುದು ಅವರ ವಿಶೇಷತೆಯಾಗಿದೆ. ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಆಕ್ರಮಣಕಾರಿ ಆರಂಭಿಕ ಜೋಡಿಗಳ ಬಗ್ಗೆ ಮಾತನಾಡುವಾಗ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಜೋಡಿ ನೆನಪಿಗೆ ಬರುತ್ತದೆ. ಆದರೆ, ಹೆಡ್ ಮತ್ತು ಅಭಿಷೇಕ್ ಜೋಡಿಯು ಅದಕ್ಕಿಂತಲೂ ಹೆಚ್ಚು ವಿನಾಶಕಾರಿಯಾಗಿದೆ,” ಎಂದು ಹೇಳಿದರು.
‘ತವರಿನಿಂದಾಚೆ ಕಳಪೆ ಪ್ರದರ್ಶನ’
“ಹೈದರಾಬಾದ್‌ನ ತವರು ಮೈದಾನದಲ್ಲಿ ಆಡುವಾಗ ಸನ್‌ರೈಸರ್ಸ್ ತಂಡವು ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತದೆ ಮತ್ತು ರನ್‌ಗಳ ಸುರಿಮಳೆಯನ್ನೇ ಸುರಿಸುತ್ತದೆ. ಆದರೆ, ತವರು ಮೈದಾನದ ಹೊರಗೆ ಆಡುವಾಗ ಅವರ ದಾಖಲೆ ತುಂಬಾ ಕಳಪೆಯಾಗಿದೆ. ಅವರು ತಮ್ಮ ಮೈದಾನದ ಹೊರಗೆ ಆಡುವಾಗ ಆ ಆಕ್ರಮಣಕಾರಿ ಬ್ಯಾಟಿಂಗ್ ಮನೋಭಾವವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ,” ಎಂದು ಪೂಜಾರ ಹೇಳಿದರು.
“ಎಲ್ಲಾ ತಂಡಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಬ್ಯಾಟಿಂಗ್ ಶಕ್ತಿಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದು ಚೆನ್ನಾಗಿ ತಿಳಿದಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರೇ ಆ ತಂಡದ ಪ್ರಮುಖ ಬ್ಯಾಟರ್‌ಗಳು. ಈ ಮೂವರು ಔಟ್ ಆದರೆ, ಎಸ್‌ಆರ್‌ಹೆಚ್ ತಂಡವು ರನ್ ಗಳಿಸಲು ಪರದಾಡುತ್ತದೆ. ಎದುರಾಳಿ ತಂಡಗಳು ಇದೇ ಅವಕಾಶವನ್ನು ಬಳಸಿಕೊಂಡು, ಅವರು ದೊಡ್ಡ ಮೊತ್ತವನ್ನು ಕಲೆಹಾಕದಂತೆ ತಡೆಯುತ್ತವೆ. ಇದು ಎಸ್‌ಆರ್‌ಹೆಚ್ ತಂಡವು ಸುಧಾರಿಸಿಕೊಳ್ಳಬೇಕಾದ ಪ್ರಮುಖ ವಿಷಯವಾಗಿದೆ,” ಎಂದು ಮಹತ್ವದ ಸಲಹೆ ನೀಡಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/cheteshwar-pujara-says-travis-head-abhishek-more-dangerous-than-kohli-gayle-ahead-of-ipl-2026-opener-447297.html. xn--babytilbehr-pgb.com does not claim ownership of this content. All rights remain with the original publisher.
