
Karnataka
oi-Hitesh Y
Karnataka Water Crisis: ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ನಮ್ಮ ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಕರ್ನಾಟಕದ 20 ಜಿಲ್ಲೆಗಳ 60 ತಾಲ್ಲೂಕುಗಳಲ್ಲಿನ 324 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇವುಗಳ ಪೈಕಿ 76 ಗ್ರಾಮಗಳಿಗೆ 76 ಟ್ಯಾಂಕರ್ಗಳ ಮುಖಾಂತರ ಹಾಗೂ 248 ಗ್ರಾಮಗಳಿಗೆ 280 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಈಗಾಗಲೇ 60 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಮಾರ್ಚ್ 2026ರಲ್ಲಿ ಟಾಸ್ಕ್ ಫೋರ್ಸಿನಡಿ ಮುಂದುವರೆದ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಹೆಚ್ಚುವರಿಯಾಗಿ 48 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ 14.50 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.

ಮುಂದುವರಿದು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ನಿರಾತಂಕವಾಗಿರಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಗಳ ಸಿಇಒಗಳು ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿದ್ದು ಪರಿಶೀಲನ ಸಭೆಗಳನ್ನು ನಡೆಸುತ್ತಿದ್ದಾರೆ, ಆದ್ಯತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮೀಣ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿನ ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಗುಣಮಟ್ಟದಲ್ಲಿ ಅನುಮಾನ ಕಂಡುಬಂದ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆಗೆ ಒಳಪಡಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಂಡು ಕಲುಷಿತ ನೀರಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಜಲಮೂಲಗಳು ಬತ್ತಿಹೋಗುವುದರಿಂದ ಹಾಗೂ ಕೊಳವೆ ಬಾವಿಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ಕೆಲವೊಂದು ಜನವಸತಿ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.
Water Crisis: ತುರ್ತು ಪರಿಹಾರ ಕ್ರಮಗಳು
ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆಯುವುದು
ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವುದು
ಕೊಳವೆ ಬಾವಿಗಳನ್ನು ಫ್ಲಶಿಂಗ್ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಲಭ್ಯತೆ ಖಾತರಿಪಡಿಸಿಕೊಳ್ಳುವುದು
ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯುವುದು
ಪ್ರತಿ 2ನೇ ಹಾಗೂ 4ನೇ ಸೋಮವಾರದಂದು ಪಿಡಿಒಗಳೊಂದಿಗೆ ಜಿ.ಪಂ ಸಿಇಒಗಳು ಕುಡಿಯುವ ನೀರಿನ ಕುರಿತು ಸಭೆ
24/7 ಕಂಟ್ರೋಲ್ ರೂಮ್ ಮತ್ತು ಕ್ಷಿಪ್ರ ಕಾರ್ಯಪಡೆ ರಚನೆ ಇವು ನಮ್ಮ ಇಲಾಖೆ ಕೈಗೊಂಡಿರುವ ತುರ್ತು ಕ್ರಮಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-water-crisis-324-villages-in-60-taluks-get-tankers-borewell-support-minister-priyank-kh-449393.html. xn--babytilbehr-pgb.com does not claim ownership of this content. All rights remain with the original publisher.
