
India
oi-Hitesh Y
ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಇಂಗ್ಲಂಡಿಗಿಂತ ಕರ್ನಾಟಕವು ಗಾತ್ರದಲ್ಲಿ ಒಂದೂವರೆ ಪಾಲು ದೊಡ್ಡದು. ಅಷ್ಟು ಸಣ್ಣ ದೇಶ ಇಂಗ್ಲಂಡಿನಲ್ಲಿ ಡಿಸೆಂಬರ್ 2025ರ ಹೊತ್ತಿಗೆ 22,819 ಮಂದಿ, ತಮಗೆ ಕೋವಿಡ್ ಲಸಿಕೆಯಿಂದ ಗಂಭೀರ ಹಾನಿ/ಜೀವಹಾನಿ ಆಗಿರುವ ಬಗ್ಗೆ ಪರಿಹಾರ ನೀಡಬೇಕೆಂದು ಕೋರಿ ಅಲ್ಲಿನ ಸರ್ಕಾರದ ಮುಂದೆ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಗ್ಲಂಡಿನ ದಿ ಟೆಲಿಗ್ರಾಫ್ ನಿನ್ನೆ ವರದಿ ಮಾಡಿದೆ.

ಇಂಗ್ಲಂಡ್ ಸರ್ಕಾರ ಅಲ್ಲಿ ಎಷ್ಟು ಇಕ್ಕಟ್ಟಿಗೆ ಸಿಲುಕಿದೆ ಎಂದರೆ, ಹೆಚ್ಚು ಅರ್ಜಿಗಳು ಬರಲಾರವೆಂದು ಅರ್ಜಿಗಳ ಸಂಸ್ಕರಣೆಗೆ ಒಂದು ಕಂಪನಿಗೆ (ಕ್ರಾಫರ್ಡ್ ಅಂಡ್ ಕಂಪನಿ) ನೀದುವುದಾಗಿ ಒಪ್ಪಿಕೊಂಡಿದ್ದ 60ಲಕ್ಷ ಪೌಂಡ್ ಜಾಗದಲ್ಲಿ ಈಗ ಐದು ಕೋಟಿ ಪೌಂಡ್ ಹಣ ಅವರಿಗೆ ತೆರಬೇಕಾಗಿದೆ. ಇದು ಸರ್ಕಾರ ಊಹಿಸಿದ್ದಕ್ಕಿಂತ ಎಂಟು ಪಟ್ಟು ಹೆಚ್ಚು. ಹಾಗಾಗಿ, ಈಗ ಆ ಗುತ್ತಿಗೆಯನ್ನೇ ಇನ್ನೊಂದು ಕಂಪನಿಗೆ (ಮ್ಯಾಕ್ಸಿಮಸ್ ಯುಕೆ ಸರ್ವೀಸಸ್) ನೀಡಲು ತೀರ್ಮಾನಿಸಲಾಗಿದೆಯಂತೆ.
ನಮಗೆ ಭಾರತೀಯರಿಗೆ ಗಮನಾರ್ಹ ಸಂಗತಿ ಏನೆಂದರೆ, ಈ ಪರಿಹಾರ ಕೋರಿ ಬಂದಿರುವ ಅರ್ಜಿಗಳಲ್ಲಿ ಬಹುಪಾಲು ಆಸ್ಟ್ರಜೆನೆಕಾ ಲಸಿಕೆ ಪಡೆದವರದು. ಅರ್ಥಾತ್, ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ (SII) ಸಿದ್ಧಪಡಿಸಿರುವ ಲಸಿಕೆ. ಭಾರತದ ಈ ಲಸಿಕೆ ಕೂಡ ಆಸ್ಟ್ರಜೆನೆಕಾ ಲೈಸನ್ಸಿನಡಿ ಸಿದ್ಧಗೊಂಡಂತಹದು.
UKಯಲ್ಲಿ ಈ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲೋ ಗೊತ್ತಿಲ್ಲ, ಭಾರತದಲ್ಲಿ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ, ಕೋವಿಡ್ ಲಸಿಕೆ ಎಂದೂ ಕಡ್ಡಾಯ ಆಗಿರಲಿಲ್ಲ, ಅದು “ವಲಂಟರಿ” ಆಗಿತ್ತು ಮತ್ತು ಹಾಗಾಗಿ ಅಡ್ಡಪರಿಣಾಮಗಳಿಗೆ ತಾನು ಯಾವುದೇ ರೀತಿಯಲ್ಲಿ ಹೊಣೆ ಅಲ್ಲ ಎಂದು ಹೇಳಿಕೊಂಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ಆಗಿದೆ.
ಇಡೀ ಭಾರತದಲ್ಲಿ ಸರ್ಕಾರಿ ವ್ಯವಸ್ಥೆಗೆ (National AEFI Committee) 2023ರ ತನಕ ವರದಿ ಆಗಿರುವ, ಅದು ಪರಿಶೀಲಿಸಿರುವ ಗಂಭೀರ ಅಡ್ಡಪರಿಣಾಮಗಳ ಸಂಖ್ಯೆ ಕೇವಲ 2708 ಅಂತೆ. ಅದರಲ್ಲಿ ಸಾವಿನ ಪ್ರಮಾಣ ಕೇವಲ 1114 ಅಂತೆ. (ಆಧಾರ: https://pubmed.ncbi.nlm.nih.gov/40034661/). ಅಷ್ಟು ಸಣ್ಣ ದೇಶ ಇಂಗ್ಲಂಡಿನ ಅಡ್ಡಪರಿಣಾಮಗಳ ಗಾತ್ರಕ್ಕೂ, ಅದೇ ಲಸಿಕೆ ಪಡೆದ ಭಾರತದ ಅಡ್ಡಪರಿಣಾಮಗಳ ಪ್ರಮಾಣಕ್ಕೂ ಹೋಲಿಕೆ, ಸಾಧ್ಯತೆಗಳ ಅಧ್ಯಯನ ಆಗಬೇಡವೆ ?
Disclaimer: This content was automatically imported from a third-party source via RSS feed. The original source is: https://kannada.oneindia.com/news/india/covid-vaccine-fallout-governments-face-tough-questions-as-rajaram-tallur-flags-rising-claims-444729.html. xn--babytilbehr-pgb.com does not claim ownership of this content. All rights remain with the original publisher.
