ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ | Karnataka Crowned Overall Champions At Inaugural Khelo India Tribal Games 2026 Winning 23 Gold

India

oi-Pragathi S

ಛತ್ತೀಸ್‌ಗಢ: ದೇಶದ ಬುಡಕಟ್ಟು ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಛತ್ತೀಸ್‌ಗಢದಲ್ಲಿ ಆಯೋಜಿಸಲಾಗಿದ್ದ ಚೊಚ್ಚಲ ‘ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026’ (Khelo India Tribal Games) ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಕರ್ನಾಟಕ ರಾಜ್ಯವು ಅತಿ ಹೆಚ್ಚು ಚಿನ್ನದ ಪದಕಗಳನ್ನು ಬೇಟೆಯಾಡುವ ಮೂಲಕ ‘ಸಮಗ್ರ ಚಾಂಪಿಯನ್’ ಪಟ್ಟವನ್ನು ಮುಡಿಗೇರಿಸಿಕೊಂಡು ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಕೊನೆಯ ದಿನದವರೆಗೂ ತೀವ್ರ ಪೈಪೋಟಿ ನೀಡಿದ ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಛತ್ತೀಸ್‌ಗಢ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ.

ಕರ್ನಾಟಕಕ್ಕೆ ಒಲಿದ ಚಾಂಪಿಯನ್ ಪಟ್ಟ

ಉದ್ಘಾಟನಾ ಆವೃತ್ತಿಯ ಈ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಆರಂಭದಿಂದಲೂ ಪಾರುಪತ್ಯ ಮೆರೆದರು. ಒಟ್ಟು 23 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದರಲ್ಲೂ ಈಜು ಸ್ಪರ್ಧೆಗಳಲ್ಲಿ ಕನ್ನಡಿಗರ ಪ್ರಾಬಲ್ಯ ಎದ್ದು ಕಾಣುತ್ತಿತ್ತು. ಈಜು ವಿಭಾಗದಲ್ಲೇ 15 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳು ರಾಜ್ಯದ ಪಾಲಾಗಿವೆ. ಇದರ ಜೊತೆಗೆ ಅಥ್ಲೆಟಿಕ್ಸ್‌ನಲ್ಲಿ 5 ಮತ್ತು ಕುಸ್ತಿಯಲ್ಲಿ 3 ಚಿನ್ನದ ಪದಕಗಳು ಒಲಿದುಬಂದವು.

Karnataka

21 ಚಿನ್ನ, 15 ಬೆಳ್ಳಿ ಹಾಗೂ 21 ಕಂಚು (ಒಟ್ಟು 57 ಪದಕ) ಪಡೆದ ಒಡಿಶಾ ದ್ವಿತೀಯ ಸ್ಥಾನ ಪಡೆದರೆ, 16 ಚಿನ್ನ, 8 ಬೆಳ್ಳಿ, 11 ಕಂಚಿನೊಂದಿಗೆ ಜಾರ್ಖಂಡ್ ತೃತೀಯ ಸ್ಥಾನ ಗಳಿಸಿತು. ಆತಿಥೇಯ ಛತ್ತೀಸ್‌ಗಢ 3 ಚಿನ್ನ, 10 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಮಿಂಚಿದ ಕನ್ನಡಿಗರು – ಮಣಿಕಂಠ, ಧೋನೀಶ್ ಸಾಧನೆ

ಕರ್ನಾಟಕದ ಮಣಿಕಂಠ ಎಲ್. ಅವರು ಈ ಕ್ರೀಡಾಕೂಟದ ಅತ್ಯಂತ ಯಶಸ್ವಿ ಕ್ರೀಡಾಪಟುವಾಗಿ ಮಿಂಚಿದರು. ಅವರು ಬರೋಬ್ಬರಿ 8 ಚಿನ್ನ ಮತ್ತು 1 ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರೆ, ಅವರ ಸಹಪಾಠಿ ಧೋನೀಶ್ ಎನ್. 5 ಚಿನ್ನ ಮತ್ತು 1 ಬೆಳ್ಳಿ ಜಯಿಸಿದರು.

ಮಹಿಳಾ ವಿಭಾಗದಲ್ಲಿ ಕರ್ನಾಟಕದ ಮೇಘಾಂಜಲಿ 4 ಚಿನ್ನ ಹಾಗೂ 2 ಕಂಚಿನ ಪದಕ ಗೆದ್ದು ಗಮನ ಸೆಳೆದರು. ಒಡಿಶಾದ ಈಜುಗಾರ್ತಿ ಅಂಜಲಿ ಮುಂಡಾ ಐದು ಚಿನ್ನದ ಪದಕಗಳನ್ನು ಗೆದ್ದರು. ಆರು ಕ್ರೀಡಾ ವಿಭಾಗಗಳಲ್ಲೂ ಕನಿಷ್ಠ ಒಂದು ಚಿನ್ನದ ಪದಕ ಗೆದ್ದ ಏಕೈಕ ರಾಜ್ಯ ಒಡಿಶಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕ್ರೀಡಾಕೂಟದ ಅಂತಿಮ ದಿನದ ಸ್ಪರ್ಧೆಗಳಲ್ಲಿ ಪುರುಷರ ಫುಟ್‌ಬಾಲ್ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಈ ಪಂದ್ಯದಲ್ಲಿ ಆತಿಥೇಯ ಛತ್ತೀಸ್‌ಗಢ ತಂಡವನ್ನು 1-0 ಅಂತರದಿಂದ ಮಣಿಸಿದ ಪಶ್ಚಿಮ ಬಂಗಾಳ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಬಿಲ್ಲುಗಾರಿಕೆ (Archery) ಸ್ಪರ್ಧೆಯಲ್ಲಿ ಜಾರ್ಖಂಡ್‌ನ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಕೋಮಲಿಕಾ ಬಾರಿ ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರು. ಪುರುಷರ ರಿಕರ್ವ್ ವಿಭಾಗದಲ್ಲಿ ಒಡಿಶಾದ ಅರ್ಜುನ್ ಖಾರಾ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಬುಡಕಟ್ಟು ಕ್ರೀಡಾಕೂಟದ ಹಿನ್ನೆಲೆ

ಭಾರತ ಸರ್ಕಾರದ ಪ್ರತಿಷ್ಠಿತ ‘ಖೇಲೋ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ದೇಶಾದ್ಯಂತ ಇರುವ ಬುಡಕಟ್ಟು ಸಮುದಾಯದ ಯುವ ಪ್ರತಿಭೆಗಳನ್ನು ಗುರುತಿಸಿ, ಉನ್ನತ ಮಟ್ಟದ ಸ್ಪರ್ಧಾತ್ಮಕ ವೇದಿಕೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 3ರವರೆಗೆ ರಾಯ್‌ಪುರ, ಜಗದಾಲ್ಪುರ ಮತ್ತು ಅಂಬಿಕಾಪುರದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 3,800 ಕ್ರೀಡಾಪಟುಗಳು ಭಾಗವಹಿಸಿದ್ದರು. ಒಟ್ಟು 106 ಚಿನ್ನದ ಪದಕಗಳಿಗಾಗಿ ಹಣಾಹಣಿ ನಡೆಯಿತು. ಆರ್ಚರಿ, ಅಥ್ಲೆಟಿಕ್ಸ್, ಫುಟ್‌ಬಾಲ್, ಹಾಕಿ, ಈಜು, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿ ಸೇರಿದಂತೆ 7 ಸ್ಪರ್ಧಾತ್ಮಕ ಕ್ರೀಡೆಗಳು ಹಾಗೂ ಮಲ್ಲಕಂಬ ಮತ್ತು ಕಬಡ್ಡಿಯಂತಹ 2 ಪ್ರದರ್ಶನ ಕ್ರೀಡೆಗಳು ಯಶಸ್ವಿಯಾಗಿ ಜರುಗಿದವು. ಈ ಪ್ರತಿಷ್ಠಿತ ವೇದಿಕೆಯಲ್ಲಿ ಕನ್ನಡಿಗರು ಅಗ್ರಸ್ಥಾನ ಪಡೆದಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/karnataka-crowned-overall-champions-at-inaugural-khelo-india-tribal-games-2026-winning-23-gold-449313.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo