ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ | Missing Kerala Girl Shrinanda Found Dead 2000 Feet Below Manikyadhara In Chikkamagaluru Hills Now

Karnataka

oi-Pragathi S

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರಿನಂದಾ (15) ಶವವಾಗಿ ಪತ್ತೆಯಾಗಿದ್ದಾಳೆ. ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧಾರಾದಿಂದ ಸುಮಾರು 2 ಸಾವಿರ ಅಡಿಗಳಷ್ಟು ಆಳದ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಕರಣದ ಹಿನ್ನೆಲೆ

ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಶ್ರಿನಂದಾ, ತನ್ನ ಕುಟುಂಬದ ಸುಮಾರು 40ಕ್ಕೂ ಹೆಚ್ಚು ಸದಸ್ಯರೊಂದಿಗೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಆಗಮಿಸಿದ್ದಳು. ಮಂಗಳವಾರ ಸಂಜೆ 5.30ರ ಸುಮಾರಿಗೆ ಚಂದ್ರದ್ರೋಣ ಪರ್ವತದ ಮಾಣಿಕ್ಯಾಧಾರಾ ಜಲಪಾತದ ಬಳಿ ಕುಟುಂಬದೊಂದಿಗೆ ಇದ್ದಾಗ ಬಾಲಕಿ ದಿಢೀರ್ ನಾಪತ್ತೆಯಾಗಿದ್ದಳು. ಮಗಳಿಗಾಗಿ ಗಾಬರಿಯಿಂದ ರಾತ್ರಿ 8 ಗಂಟೆಯವರೆಗೂ ಹುಡುಕಾಡಿದ ಕುಟುಂಬಸ್ಥರು, ಬಳಿಕ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

Kerala Girl Shrinanda

ಬಾಲಕಿ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಅಧುನಿಕ ತಂತ್ರಜ್ಞಾನವನ್ನು ಬಳಸಿ ಬಾಲಕಿಯನ್ನು ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಪೋಲಿಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ರಾತ್ರಿಯಿಡೀ ಥರ್ಮಲ್‌ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿ ದಟ್ಟ ಕಾಡಿನಲ್ಲಿ ಹುಡುಕಾಟ ನಡೆಸಲಾಯಿತ್ತು.

ಆದರೆ, ದುರಾದೃಷ್ಟವಶಾತ್ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಾಣಿಕ್ಯಾಧಾರಾದ ಬಳಿ ಕಾಲು ಜಾರಿ ಸುಮಾರು 2 ಸಾವಿರ ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮೃತದೇಹವನ್ನು ಮೇಲಕ್ಕೆ ತರುವ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ. ಪ್ರವಾಸಕ್ಕೆಂದು ಬಂದು ಮಗಳನ್ನು ಕಳೆದುಕೊಂಡ ಕೇರಳದ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/missing-kerala-girl-shrinanda-found-dead-2000-feet-below-manikyadhara-in-chikkamagaluru-hills-now-449993.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo