
India
oi-Manohara M
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಹಿಳೆಯರಿಗೆ ದೊಡ್ಡ ಆರ್ಥಿಕ ನೆರವು ಘೋಷಿಸಿದ್ದಾರೆ. ಸುಮಾರು 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹5,000 ನೇರವಾಗಿ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮುಂಗಡವಾಗಿ ₹3,000 ಮಗಳಿರ್ ಉರಿಮೈ ತಿಟ್ಟಂ ಅಡಿಯಲ್ಲಿ ಜೊತೆಗೆ ಬೇಸಿಗೆ ವಿಶೇಷ ಅನುದಾನವಾಗಿ ₹2,000 ಸೇರಿ ಒಟ್ಟು ₹5,000 1.31 ಕೋಟಿ ‘ಕಲೈಞರ್ ಮಹಿಳಾ ಹಕ್ಕು ಯೋಜನೆ’ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಯಾವ ಯೋಜನೆಯಡಿ ಹಣ ಜಮಾ?
ಈ ಹಣ ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಯೋಜನೆಯಡಿ ನೀಡಲಾಗಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಮಾಸಿಕ ಹಣಕಾಸು ನೆರವು ನೀಡುವ ಉದ್ದೇಶ ಹೊಂದಿದೆ. ಅದರಂತೆ ಮೂರು ತಿಂಗಳ ಮುಂಗಡ ಹಣವಾಗಿ ₹3,000, ಬೇಸಿಗೆ ವಿಶೇಷ ಅನುದಾನವಾಗಿ ₹2,000 ಸೇರಿ ಒಟ್ಟು ₹5,000 ಮಹಿಳೆಯರ ಖಾತೆಗೆ ಜಮೆಯಾಗಿದೆ.
ಸರ್ಕಾರದ ಮಾಹಿತಿ ಪ್ರಕಾರ, ಸುಮಾರು 1.31 ಕೋಟಿ ಮಹಿಳೆಯರು ಈ ಯೋಜನೆಯ ಲಾಭಾರ್ಥಿಗಳಾಗಿದ್ದು, ಅವರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ. ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಈ ಮೊತ್ತವನ್ನು ಜಮಾ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ವಿರೋಧ ಪಕ್ಷಗಳು ಇದನ್ನು “ಚುನಾವಣಾ ಮುನ್ನ ಮತದಾರರನ್ನು ಆಕರ್ಷಿಸುವ ಕ್ರಮ” ಎಂದು ಟೀಕಿಸುತ್ತಿವೆ. ಆದರೆ ಆಡಳಿತಾರೂಢ ಪಕ್ಷ ಇದನ್ನು ಮಹಿಳಾ ಸಬಲೀಕರಣದತ್ತ ನಿರಂತರ ಬದ್ಧತೆ ಎಂದು ಸಮರ್ಥಿಸಿಕೊಂಡಿದೆ.
ಕುಟುಂಬದ ಖರ್ಚು ನಿರ್ವಹಣೆಗೆ ನೆರವು, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೇರ ಬೆಂಬಲ ನೀಡುವುದು ಇದರ ಉದ್ದೇಶ. ತಮಿಳುನಾಡಿನಲ್ಲಿ ಚುನಾವಣಾ ಕಾವು ಏರಿಕೆಯಾಗುತ್ತಿರುವ ಹೊತ್ತಿನಲ್ಲಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ ₹5,000 ನೇರ ಜಮಾ ಕ್ರಮ ರಾಜಕೀಯ ಹಾಗೂ ಸಾಮಾಜಿಕವಾಗಿ ಮಹತ್ವದ ಬೆಳವಣಿಗೆಯಾಗಿದೆ. ಸುಮಾರು 1.3 ಕೋಟಿ ಮಹಿಳೆಯರಿಗೆ ಈ ನೆರವು ತಲುಪಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೂ ಕಾರಣವಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/ahead-of-tamil-nadu-elections-cm-mk-stalin-credits-5000-rupees-to-1-31-crore-women-beneficiaries-443553.html. xn--babytilbehr-pgb.com does not claim ownership of this content. All rights remain with the original publisher.
