ಡಿವೋರ್ಸ್‌ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್‌ ಪತ್ನಿ ಕೋರ್ಟ್‌ಗೆ ಮನವಿ | Thalapathy Vijay Divorce Case Wife Sangeetha Seeks Right to Stay in Chennai Husbands House

Entertainment

oi-Manohara M

Thalapathy Vijay Divorce Case: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಸಂಗೀತಾ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಂಗೀತಾ ಅವರು ಹೊಸ ಕಾನೂನು ಅರ್ಜಿ ಸಲ್ಲಿಸಿದ್ದು, ವಿಚ್ಛೇದನ ಪ್ರಕರಣ ಮುಂದುವರಿದಿರುವ ಅವಧಿಯಲ್ಲಿ ಚೆನ್ನೈನ ನೀಲಂಕರೈಯಲ್ಲಿರುವ ಪತಿಯ ನಿವಾಸದಲ್ಲೇ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ಈ ಅರ್ಜಿ, ದಂಪತಿಗಳ ನಡುವೆ ನಡೆಯುತ್ತಿರುವ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದೆ. ಫೆಬ್ರವರಿ 22ರಂದು ಸಲ್ಲಿಸಲಾದ ಪ್ರಮಾಣಪತ್ರದೊಂದಿಗೆ ಈ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಪ್ರಕರಣ ಅಂತಿಮ ತೀರ್ಪು ಬರುವವರೆಗೆ ಅಥವಾ ಸಮಾನ ಸೌಲಭ್ಯಗಳಿರುವ ಮತ್ತೊಂದು ವಸತಿ ಒದಗಿಸುವವರೆಗೆ ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನ ನೀಲಂಕರೈಯಲ್ಲಿರುವ ಪತಿಯ ಮನೆಯಲ್ಲಿ ವಾಸಿಸುವ ಹಕ್ಕನ್ನು ಮಾನ್ಯಗೊಳಿಸಬೇಕು ಎಂದು ಸಂಗೀತಾ ಮನವಿ ಮಾಡಿದ್ದಾರೆ.

Thalapathy Vijay Divorce Case

ಮನೆಯ ಹಕ್ಕಿಗಾಗಿ ಕಾನೂನು ಹೋರಾಟ

ವಿಚ್ಛೇದನ ಅರ್ಜಿ ಬಾಕಿ ಇರುವವರೆಗೂ ಅಥವಾ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ನೀಲಂಕರೈನಲ್ಲಿರುವ ದಂಪತಿಯ ವೈವಾಹಿಕ ಮನೆಯಲ್ಲೇ ತಮಗೆ ವಾಸಿಸಲು ಹಕ್ಕಿದೆ ಎಂದು 48 ವರ್ಷದ ಸಂಗೀತಾ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ವಿಚ್ಛೇದನಕ್ಕಾಗಿ ಕಾನೂನು ಕ್ರಮ ಕೈಗೊಂಡರೆ ನೀಲಂಕರೈಯಲ್ಲಿರುವ ದಾಂಪತ್ಯ ಮನೆಯಲ್ಲಿ ಮುಂದುವರಿದು ವಾಸಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ವಿಜಯ್ ಪರ ವಕೀಲರು ಸೂಚಿಸಿರುವುದಾಗಿ ಸಂಗೀತಾ ಹೇಳಿದ್ದಾರೆ. ಇದರಿಂದ ವಸತಿ ಕಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ಆತಂಕ ಉಂಟಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

26 ವರ್ಷಗಳಿಂದ ಸಂಸಾರ ನಡೆಸಿರುವೆ

ಇದರಿಂದಾಗಿ ತಮಗೆ ವಸತಿ ಇಲ್ಲದಂತಾಗುವ ಆತಂಕ ಎದುರಾಗಿದೆ ಎಂದೂ ಅವರು ಹೇಳಿದ್ದಾರೆ. ಕಳೆದ 26 ವರ್ಷಗಳಿಂದ ವಿಜಯ್ ಅವರೊಂದಿಗೆ ಸುಖೀ ಸಂಸಾರ ನಡೆಸಿದ್ದು, ಗೃಹಿಣಿಯಾಗಿ ಮಕ್ಕಳಾದ ಜೇಸನ್ ಸಂಜಯ್ (25) ಮತ್ತು ದಿವ್ಯಾ ಸಾಶಾ (20) ಅವರ ಜವಾಬ್ದಾರಿಯನ್ನು ಹೊತ್ತಿದ್ದಾಗಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ತಾವು ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ಪೌರತ್ವ ಹೊಂದಿದ್ದು, ಲಂಡನ್‌ನಲ್ಲಿ ಬಯೋಮೆಡಿಕಲ್ ಸೈನ್ಸ್ ಪದವಿ ಪಡೆದಿರುವುದಾಗಿ ತಿಳಿಸಿರುವ ಸಂಗೀತಾ, ಪ್ರಸ್ತುತ ವಿಜಯ್ ಅವರ ಸ್ಥಾನಮಾನಕ್ಕೆ ಅನುಗುಣವಾದ ಬೇರೆ ಯಾವುದೇ ಪರ್ಯಾಯ ಮನೆ ತಮಗೆ ಲಭ್ಯವಿಲ್ಲ ಎಂದೂ ಅರ್ಜಿಯಲ್ಲಿ ವಿವರಿಸಿದ್ದಾರೆ.

ಮುಖ್ಯ ಪ್ರಕರಣದ ತೀರ್ಪು ಬರುವವರೆಗೆ ನೀಲಂಕರೈ ಮನೆಯಲ್ಲೇ ಎಲ್ಲಾ ಸೌಲಭ್ಯಗಳೊಂದಿಗೆ ವಾಸಿಸಲು ಅನುಮತಿ ನೀಡುವ ಮಧ್ಯಂತರ ಆದೇಶ ನೀಡಬೇಕು ಎಂದು ನ್ಯಾಯಾಲಯವನ್ನು ಅವರು ಮನವಿ ಮಾಡಿದ್ದಾರೆ. ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ವಿಚ್ಛೇದನಕ್ಕಾಗಿ ಮುಖ್ಯ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದರ ಜೊತೆಗೆ ಶಾಶ್ವತ ಜೀವನಾಂಶ ಮತ್ತು ವಸತಿ ಹಕ್ಕನ್ನು ಅವರು ಕೋರಿದ್ದಾರೆ. ಮಧ್ಯಂತರ ಆದೇಶಕ್ಕಾಗಿ ಮನವಿ ಮಾಡಲಾಗಿದ್ದು, ನ್ಯಾಯಾಲಯವು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ನಟ ವಿಜಯ್ ಅವರ ರಾಜಕೀಯ ಜೀವನದ ಈ ನಿರ್ಣಾಯಕ ಹಂತದಲ್ಲಿ ಎದುರಾಗಿರುವ ಈ ಕೌಟುಂಬಿಕ ಕಾನೂನು ಸಮರವು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/thalapathy-vijay-divorce-case-wife-sangeetha-seeks-right-to-stay-in-chennai-husbands-house-446287.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo