
Karnataka
oi-Manohara M
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೊಗಳಿದ್ದ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ಇಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಅಧಿಕಾರಿಗಳು ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಬರೋಬ್ಬರಿ 13,712 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು (Charge Sheet) ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 52 ವ್ಯಕ್ತಿಗಳ ಹೆಸರನ್ನು ಎಸ್ಐಟಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಇವರಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪೆನ್ಡ್ರೈವ್ ಹಂಚಿಕೆಯಲ್ಲಿ ಭಾಗಿಯಾದವರ ವಿವರಗಳಿವೆ. ಉಲ್ಲೇಖಿಸಲಾದ 52 ಜನರಲ್ಲಿ 39 ಮಂದಿಯ ವಿರುದ್ಧ ಅಶ್ಲೀಲ ವೀಡಿಯೊಗಳನ್ನು ಹರಡಿದ ಮತ್ತು ಕಾನೂನು ಉಲ್ಲಂಘಿಸಿದ ಗಂಭೀರ ಆರೋಪಗಳು ಸಾಬೀತಾಗಿವೆ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ.

ಸುಮಾರು 13 ಸಾವಿರಕ್ಕೂ ಅಧಿಕ ಪುಟಗಳ ಈ ವರದಿಯಲ್ಲಿ ಡಿಜಿಟಲ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಸೈಬರ್ ಕ್ರೈಮ್ ತನಿಖೆಯ ವಿವರಗಳನ್ನು ನೀಡಲಾಗಿದೆ. ಈ ಚಾರ್ಜ್ಶೀಟ್ ಸಲ್ಲಿಕೆಯ ಬೆನ್ನಲ್ಲೇ, ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಬಂಧನದ ಭೀತಿ ಎದುರಾಗಿದೆ. ಈ ಪ್ರಕರಣವು ಪ್ರಜ್ವಲ್ ರೇವಣ್ಣ ಅವರ ವಿದೇಶ ಪ್ರಯಾಣ ಮತ್ತು ನಂತರದ ಬಂಧನದವರೆಗೂ ಸಾಲು ಸಾಲು ಟ್ವಿಸ್ಟ್ಗಳನ್ನು ಕಂಡಿತ್ತು. ಈಗ ಎಸ್ಐಟಿ ಸಲ್ಲಿಸಿರುವ ಈ ದೋಷಾರೋಪ ಪಟ್ಟಿಯು ಪ್ರಕರಣಕ್ಕೆ ಕಾನೂನಾತ್ಮಕವಾಗಿ ದೊಡ್ಡ ತಿರುವು ನೀಡಿದೆ.
ಹಾಸನದಲ್ಲೇ 70 ಪೆನ್ಡ್ರೈವ್ ಖರೀದಿ
ಹಾಸನದ ಪೆನ್ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. 2024ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಇಡೀ ರಾಜ್ಯ ರಾಜಕಾರಣವನ್ನೇ ಅಲುಗಾಡಿಸಿದ್ದ ಈ ಅಶ್ಲೀಲ ವೀಡಿಯೊಗಳ ಹಂಚಿಕೆಯ ಹಿಂದೆ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂಬುದು ಈಗ ಸಾಬೀತಾಗಿದೆ. ಅಶ್ಲೀಲ ವೀಡಿಯೊಗಳನ್ನು ಹಂಚಲೆಂದೇ ಆರೋಪಿಗಳು ಹಾಸನದಲ್ಲೇ 70 ಪೆನ್ಡ್ರೈವ್ಗಳನ್ನು ಖರೀದಿಸಿದ್ದರು ಎಂಬ ಆಘಾತಕಾರಿ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ. ಚುನಾವಣಾ ಲಾಭಕ್ಕಾಗಿ ಇವುಗಳನ್ನು ರಾಜ್ಯಾದ್ಯಂತ ಹಂಚಿಕೆ ಮಾಡಿದ್ದರು ಎನ್ನಲಾಗಿದೆ.
ಈ ಬೃಹತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಒಟ್ಟು 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ. ತಾಂತ್ರಿಕ ಪುರಾವೆಗಳು ಮತ್ತು ಫೋರೆನ್ಸಿಕ್ ಸೈನ್ಸ್ ಲ್ಯಾಬ್ (FSL) ವರದಿಗಳ ಆಧಾರದ ಮೇಲೆ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 39 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ನವೀನ್, ಕಾರ್ತಿಕ್ (ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ), ಚೇತನ್, ಲಿಖಿತ್ ಗೌಡ ಸೇರಿ ಪ್ರಮುಖರಿದ್ದಾರೆ.
ಬಿಜೆಪಿ-ಕಾರ್ಯಕರ್ತರ ಹೆಸರೂ ಉಲ್ಲೇಖ
ಈ ಪಟ್ಟಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೂ ಸೇರಿವೆ. ವಿಶೇಷವಾಗಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಅತ್ಯಾಪ್ತರ ವಿರುದ್ಧದ ಆರೋಪಗಳನ್ನು ಎಸ್ಐಟಿ ಪುರಾವೆ ಸಹಿತ ಸಾಬೀತುಪಡಿಸಿದೆ ಎಂದು ತಿಳಿದುಬಂದಿದೆ. 2024ರ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿತ್ತು. ಈಗ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ ಈ ಪ್ರಕರಣದ ಆರೋಪಿಗಳಿಗೆ ಕಾನೂನಾತ್ಮಕವಾಗಿ ಉರುಳಾಗುವ ಸಾಧ್ಯತೆ ದಟ್ಟವಾಗಿದೆ.
ಮಹಿಳೆಯರ ಅನುಮತಿಯಿಲ್ಲದೆ ಮೊಬೈಲ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಲಾಗಿತ್ತು ಎಂಬ ಅಂಶವನ್ನು ತನಿಖಾ ತಂಡ ಸಾಕ್ಷ್ಯ ಸಮೇತ ಸಾಬೀತುಪಡಿಸಿದೆ. ಆರೋಪಿ ಪ್ರಜ್ವಲ್ ರೇವಣ್ಣ ಚಿತ್ರೀಕರಿಸಿದ ಈ ವಿಡಿಯೋಗಳನ್ನು ನಂತರ ಪೆನ್ಡ್ರೈವ್ಗಳ ಮೂಲಕ ಹಂಚಿಕೆ ಮಾಡಲಾಗಿತ್ತು. ಇದು ಕೇವಲ ವೈಯಕ್ತಿಕ ಸಂಗ್ರಹವಾಗಿರದೆ, ವ್ಯವಸ್ಥಿತವಾಗಿ ಇತರರಿಗೂ ತಲುಪುವಂತೆ ಮಾಡಲಾಗಿತ್ತು ಎಂದು ಎಸ್ಐಟಿ ತಿಳಿಸಿದೆ. ಪ್ರಕರಣದ ಇತರ ಆರೋಪಿಗಳು ಕೂಡ ತಮ್ಮ ಮೊಬೈಲ್ಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಒಬ್ಬರಿಂದೊಬ್ಬರಿಗೆ ರವಾನಿಸಿದ್ದಾರೆ ಎಂಬುದು ಡಿಜಿಟಲ್ ಫೋರೆನ್ಸಿಕ್ ತನಿಖೆಯಲ್ಲಿ ಪತ್ತೆಯಾಗಿದೆ. ಈ ತಾಂತ್ರಿಕ ಸಾಕ್ಷ್ಯಗಳೇ ಈಗ ಆರೋಪಿಗಳಿಗೆ ದೊಡ್ಡ ಉರುಳಾಗಿ ಪರಿಣಮಿಸಿವೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/prajwal-revanna-case-sit-files-13712-page-chargesheet-in-pen-drive-scandal-naming-52-people-447509.html. xn--babytilbehr-pgb.com does not claim ownership of this content. All rights remain with the original publisher.
