ಬಮೂಲ್‌ನಿಂದ ಜಿಪಿಎಸ್‌ ಸೌಲಭ್ಯಯುಳ್ಳ ಇ-ಹಾಲು ಡೆಲಿವರಿ ವಾಹನ ಪರಿಚಯ | Bamul Introduces E-Milk Delivery Vehicles in Bengaluru to Preserve Freshness Says Dk Suresh

Karnataka

oi-Manohara M

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಜೊತೆಗೆ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ಬೆಂಗಳೂರು ಸಹಕಾರ ಹಾಲು ಒಕ್ಕೂಟವು (ಬಮೂಲ್‌) ಮಹತ್ವದ ಕ್ರಮ ಕೈಗೊಂಡಿದೆ. ಬಮೂಲ್‌ ಕೇಂದ್ರ ಕಚೇರಿಯಲ್ಲಿ ಇ-ಹಾಲು ಡೆಲಿವರಿ ವಾಹನಗಳ (EV) ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.

ಅಧಿಕೃತ ಮಾರಾಟಗಾರರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಸರಬರಾಜು ಮಾಡುವ ಉದ್ದೇಶದಿಂದ ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಟ್ರಾಫಿಕ್‌ ಸಮಸ್ಯೆ, ತಾಪಮಾನ ಏರಿಳಿತ, ವಿತರಣಾ ವಿಳಂಬ ಇತ್ಯಾದಿ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನಾಧಾರಿತ ಪರಿಹಾರವಾಗಿ ಇ-ವಾಹನಗಳನ್ನು ರೂಪಿಸಲಾಗಿದೆ.

Bamul

ತಾಜಾತನ ಕಾಪಾಡುವ ತಂತ್ರಜ್ಞಾನ

ಈ ಇ-ಹಾಲು ಡೆಲಿವರಿ ವಾಹನಗಳಲ್ಲಿ ಪಿಯುಎಫ್‌ (Polyurethane Foam) ಇನ್ಸುಲೇಟೆಡ್‌ ಕಂಟೈನರ್‌ ಅಳವಡಿಸಲಾಗಿದ್ದು, ಒಳಗಿನ ತಾಪಮಾನವನ್ನು ನಿಯಂತ್ರಿತ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ. ಜೊತೆಗೆ ರೆಫ್ರಿಜರೇಟೆಡ್‌ ವ್ಯವಸ್ಥೆ ಇರುವುದರಿಂದ ಹಾಲು, ಮೊಸರು, ತುಪ್ಪ, ಪನೀರ್‌ ಸೇರಿದಂತೆ ವಿವಿಧ ಉತ್ಪನ್ನಗಳ ಗುಣಮಟ್ಟ ದೀರ್ಘಕಾಲ ಕಾಪಾಡಲು ಸಾಧ್ಯವಾಗುತ್ತದೆ. ಇದರಿಂದ ಬೇಸಿಗೆ ಕಾಲದಲ್ಲಿಯೂ ಹಾಲಿನ ತಾಜಾತನದಲ್ಲಿ ವ್ಯತ್ಯಾಸ ಉಂಟಾಗದಂತೆ ನೋಡಿಕೊಳ್ಳಬಹುದು.

ಜಿಪಿಎಸ್‌ ಮತ್ತು ಡಿಜಿಟಲ್‌ ಮಾನಿಟರಿಂಗ್‌

ಈ ವಾಹನಗಳಲ್ಲಿ ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದ್ದು, ವಿತರಣಾ ಮಾರ್ಗವನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಬಹುದು. ಯಾವ ಪ್ರದೇಶಕ್ಕೆ ಯಾವ ಸಮಯಕ್ಕೆ ಸರಬರಾಜು ಆಗುತ್ತಿದೆ ಎಂಬುದನ್ನು ಕೇಂದ್ರದಿಂದಲೇ ಗಮನಿಸಲು ಸಾಧ್ಯ. ಇದರಿಂದ ಸಮಯಪಾಲನೆ ಸುಧಾರಿಸಿ, ವಿಳಂಬ ಅಥವಾ ಮಾರ್ಗ ಬದಲಾವಣೆಗಳ ಸಮಸ್ಯೆ ತಕ್ಷಣ ಪತ್ತೆಯಾಗುತ್ತದೆ.

ಪರಿಸರ ಸ್ನೇಹಿ ಮತ್ತು ಆರ್ಥಿಕ ಲಾಭ

ಇ-ವಾಹನಗಳ ಬಳಕೆ ಡೀಸೆಲ್‌ ಅಥವಾ ಪೆಟ್ರೋಲ್‌ ವಾಹನಗಳಿಗಿಂತ ಕಾರ್ಬನ್‌ ಉತ್ಸರ್ಗವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹಸಿರು ಶಕ್ತಿಯ ಬಳಕೆ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ಇಂಧನ ವೆಚ್ಚ ಕಡಿಮೆಯಾಗುವುದರಿಂದ ದೀರ್ಘಾವಧಿಯಲ್ಲಿ ಒಕ್ಕೂಟಕ್ಕೂ ಹಾಗೂ ಮಾರಾಟಗಾರರಿಗೂ ಆರ್ಥಿಕ ಉಳಿತಾಯವಾಗಲಿದೆ. ಇದರಿಂದ ಪ್ರಮುಖವಾಗಿ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಯೋಜನವಾಗಲಿದೆ. ಹಾಲಿನ ಗುಣಮಟ್ಟ ಮತ್ತು ಸುರಕ್ಷತೆ ಹೆಚ್ಚಳವಾಗಲಿದೆ. ನಿಗದಿತ ಸಮಯಕ್ಕೆ ವಿತರಣೆಯಿಂದ ವ್ಯಾಪಾರ ಸುಗಮವಾಗಲಿದ್ದು, ಉತ್ಪನ್ನ ಹಾನಿ ಮತ್ತು ಹಾಳಾಗುವಿಕೆ ಕಡಿಮೆ ಮಾಡಬಹುದಾಗಿದೆ. ದೂರದ ಪ್ರದೇಶಗಳಿಗೂ ಶೀತ ಸರಪಳಿ ವ್ಯವಸ್ಥೆಯೊಂದಿಗೆ ಸರಬರಾಜು ಮಾಡಲು, ಡಿಜಿಟಲ್‌ ಟ್ರ್ಯಾಕಿಂಗ್‌ನಿಂದ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ.

ಈ ಬಗ್ಗೆ ಮಾಹಿತಿ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಮಾತನಾಡಿ, “ಬಮೂಲ್‌ ಕೇಂದ್ರ ಕಚೇರಿಯಲ್ಲಿ ಒಕ್ಕೂಟದ ಅಧಿಕೃತ ಮಾರಾಟಗಾರರಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಅನುಕೂಲವಾಗುವ ಹಿತದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಇ-ಹಾಲು ವಾಹನದ ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದೆ. ಇ-ಹಾಲು ಡೆಲಿವರಿ ವಾಹನಗಳು PUF ಇನ್ಸುಲೇಟೆಡ್ ಕಂಟೈನರ್ ಮತ್ತು ರೆಫ್ರಿಜರೇಟೆಡ್ ಸೌಲಭ್ಯಗಳನ್ನು ಹೊಂದಿದ್ದು, ಹಾಲಿನ ತಾಜಾತನವನ್ನು ಕಾಪಾಡುತ್ತವೆ. ಪರಿಸರ ಸ್ನೇಹಿ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜಿಪಿಎಸ್‌ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿವೆ. ಇದರಿಂದ ನಿಖರವಾದ ಸಮಯಕ್ಕೆ ಹಾಲಿನ ಉತ್ಪನ್ನಗಳನ್ನು ಡೆಲಿವರಿ ಮಾಡಬಹುದು. ಜೊತೆಗೆ ಹಾಲು ಉತ್ಪನ್ನಗಳ ಮಾರಾಟಗಾರರಿಗೆ ಹಾಗೂ ಸರಬರಾಜುದಾರರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

ಇ-ಹಾಲು ಡೆಲಿವರಿ ವಾಹನಗಳ ಪರಿಚಯದಿಂದ ಹಾಲು ವಿತರಣಾ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಇದು ತಾಜಾತನ ಕಾಪಾಡುವ ಜೊತೆಗೆ ಪರಿಸರ ಸ್ನೇಹಿ ಕ್ರಮವಾಗಿದೆ. ಮಾರಾಟಗಾರರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶ ನಮ್ಮದು ಎಂದು ತಿಳಿಸಿದ್ದಾರೆ. ಇ-ಹಾಲು ಡೆಲಿವರಿ ವಾಹನಗಳ ಪರೀಕ್ಷಾರ್ಥ ಹಂತ ಯಶಸ್ವಿಯಾದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ. ಹಾಲು ವಿತರಣಾ ಕ್ಷೇತ್ರದಲ್ಲಿ ತಂತ್ರಜ್ಞಾನಾಧಾರಿತ ಪರಿವರ್ತನೆಗೆ ಇದು ದಿಕ್ಕು ತೋರಿಸುವ ಕ್ರಮ ಎಂದು ಹೇಳಲಾಗುತ್ತಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bamul-introduces-e-milk-delivery-vehicles-in-bengaluru-to-preserve-freshness-says-dk-suresh-444503.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo