
Karnataka
oi-Pragathi S
ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಖಚಿತಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯದ ಎಲ್ಲಾ ಬಸ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಇಲಾಖೆಯು, ಬಸ್ಸುಗಳಲ್ಲಿ ಒಟ್ಟು 11 ಹೊಸ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಈ ಹೊಸ ನಿಯಮಗಳನ್ನು ಪಾಲಿಸಲು 2026ರ ಮಾರ್ಚ್ 31ರವರೆಗೆ ಅಂತಿಮ ಗಡುವು ನೀಡಲಾಗಿದೆ.
ಪ್ರಯಾಣಿಕರ ಸುರಕ್ಷತೆಯೇ ಪ್ರಮುಖ ಆದ್ಯತೆ
ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಹಾಗೂ ಬಸ್‌ಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಮೇಲಾಗುತ್ತಿರುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ, ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು (CMVR) 1989ರ ಅನ್ವಯ ಈ 11 ಸುರಕ್ಷತಾ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ. ಸಾರಿಗೆ ಇಲಾಖೆಯು ಈ ಮೊದಲು ಫೆಬ್ರವರಿ 28ರವರೆಗೆ ಗಡುವು ನೀಡಿತ್ತಾದರೂ, ವಾಹನಗಳ ನವೀಕರಣಕ್ಕೆ ಹೆಚ್ಚಿನ ಸಮಯಾವಕಾಶ ಬೇಕು ಎಂಬ ಬಸ್ ಮಾಲೀಕರ ಮನವಿಯ ಮೇರೆಗೆ ಮಾರ್ಚ್ 31, 2026ರ ವರೆಗೆ ಗಡುವನ್ನು ವಿಸ್ತರಿಸಿದೆ.

11 ಪ್ರಮುಖ ಸುರಕ್ಷತಾ ಕ್ರಮಗಳೇನು?
ಸಾರಿಗೆ ಇಲಾಖೆ ಸೂಚಿಸಿರುವ 11 ಪ್ರಮುಖ ಬದಲಾವಣೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮೂಲಭೂತ ಸುರಕ್ಷತಾ ಉಪಕರಣಗಳ ಅಳವಡಿಕೆ ಸೇರಿದೆ.
1. ವಾಹನಗಳ ನಿಖರ ಸ್ಥಳವನ್ನು ಟ್ರ್ಯಾಕ್ ಮಾಡಲು ಜಿಪಿಎಸ್ (GPS) ಅಥವಾ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (VLTD) ಅಳವಡಿಕೆ.
2. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಳಸಲು ಅನುವಾಗುವಂತೆ ಸೀಟುಗಳ ಬಳಿ ಪ್ಯಾನಿಕ್ ಬಟನ್‌ಗಳು (Panic Buttons).
3. ಅಗ್ನಿ ಅವಘಡಗಳನ್ನು ತಕ್ಷಣವೇ ಹತೋಟಿಗೆ ತರಲು ಸುಸಜ್ಜಿತ ಅಗ್ನಿಶಾಮಕ ಸಾಧನಗಳು (Fire Extinguishers).
4. ಅತಿವೇಗದ ಚಾಲನೆಗೆ ಬ್ರೇಕ್ ಹಾಕಲು ಕಡ್ಡಾಯ ವೇಗ ನಿಯಂತ್ರಕಗಳ (Speed Governors) ಅಳವಡಿಕೆ.
5. ಸುಲಭವಾಗಿ ತೆರೆಯಬಹುದಾದ ತುರ್ತು ನಿರ್ಗಮನ ದ್ವಾರಗಳು (Emergency Exits) ಮತ್ತು ಅವಶ್ಯಕ ಔಷಧಿಗಳನ್ನೊಳಗೊಂಡ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kit).
6. ರಾತ್ರಿ ವೇಳೆ ವಾಹನಗಳು ಸ್ಪಷ್ಟವಾಗಿ ಕಾಣುವಂತೆ ಗುಣಮಟ್ಟದ ರಿಫ್ಲೆಕ್ಟಿವ್ ಟೇಪ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ.
ಕರ್ನಾಟಕ ರಾಜ್ಯದ ಎಲ್ಲಾ ಬಸ್ ಮಾಲೀಕರ ಗಮನಕ್ಕೆ.
ಸಾರಿಗೆ ಇಲಾಖೆಯು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಬಸ್ಸುಗಳಲ್ಲಿ 11 ಹೊಸ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ಅನ್ವಯ, ಮಾರ್ಚ್ 31, 2026ರೊಳಗೆ ಈ ಎಲ್ಲಾ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘಿಸುವ ವಾಹನಗಳ… pic.twitter.com/DwnnEdSkG7
— ಸಾರಿಗೆ ಇಲಾಖೆ ,Transport Department Karnataka (@tdkarnataka) March 19, 2026
ಆರ್.ಟಿ.ಓ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ
ಮಾರ್ಚ್ 31ರ ಗಡುವು ಮುಗಿದ ತಕ್ಷಣವೇ ಏಪ್ರಿಲ್ ಮೊದಲ ವಾರದಿಂದ ರಾಜ್ಯಾದ್ಯಂತ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳ (RTO) ವ್ಯಾಪ್ತಿಯಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು (Special Drive) ಹಮ್ಮಿಕೊಳ್ಳಲಾಗುವುದು ಎಂದು ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ಯಾನಿಕ್ ಬಟನ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಲಿದ್ದಾರೆ.
ಉಲ್ಲಂಘಿಸಿದರೆ ಕಾದಿದೆ ಕಠಿಣ ಶಿಕ್ಷೆ
ಮಾರ್ಚ್ 31, 2026ರೊಳಗೆ ಈ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ವಾಹನ ಮಾಲೀಕರ ವಿರುದ್ಧ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವ ಬಸ್‌ಗಳ ಫಿಟ್‌ನೆಸ್ ಪ್ರಮಾಣಪತ್ರ (FC – Fitness Certificate) ನವೀಕರಣವನ್ನು ತಡೆಹಿಡಿಯಲಾಗುವುದು. ಅಲ್ಲದೆ, ರಸ್ತೆ ಸಂಚಾರದ ಪರ್ಮಿಟ್ ರದ್ದುಗೊಳಿಸುವ ಜೊತೆಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಸಾಧ್ಯತೆಯೂ ಇದೆ. ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಯಾವುದೇ ದಂಡ ಅಥವಾ ಕಾನೂನು ಕ್ರಮಗಳಿಗೆ ಗುರಿಯಾಗುವ ಮುನ್ನ ಬಸ್ ಮಾಲೀಕರು ನಿಗದಿತ ಸಮಯದೊಳಗೆ ತಮ್ಮ ವಾಹನಗಳನ್ನು ನಿಯಮಾನುಸಾರ ನವೀಕರಿಸಿಕೊಳ್ಳುವುದು ಸೂಕ್ತ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-transport-department-mandates-11-new-safety-measures-for-buses-before-march-31-2026-447689.html. xn--babytilbehr-pgb.com does not claim ownership of this content. All rights remain with the original publisher.
