
Karnataka
oi-Shiddalingesh S
ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಘೋಷಿಸಲಾದ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ವಿರುದ್ಧವಾಗಿ, ನಗರದಲ್ಲಿ ಇ-ಖಾತಾ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ಹೆಚ್ಚುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ, ಪಾಲಿಕೆ ಅಧಿಕಾರಿಗಳ ದಂಧೆ, ಲಂಚ ವ್ಯವಹಾರಗಳು ಮತ್ತು ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ವಿವರಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಇ ಖಾತಾ ಹೆಸರಲ್ಲಿ ಪಾಲಿಕೆಗಳ ಅಧಿಕಾರಿಗಳು ದಂಧೆ ಮಾಡುತ್ತಿದ್ದಾರೆ. “ನಮ್ಮ ಸರ್ಕಾರದಲ್ಲಿ ಲಂಚ ಪಡೆದ ಒಬ್ಬರನ್ನು ತೋರಿಸಿ” ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಬಿಡಿಎಯಿಂದ ಎಚ್‌ಬಿಆರ್ ಲೇಔಟ್ ನಿರ್ಮಾಣವಾಗಿದೆ. ಇಲ್ಲಿ ಒಬ್ಬ ಮಾಲೀಕರು ಹರಾಜಿನಲ್ಲಿ ಕಾರ್ನರ್ ಸೈಟ್ ಪಡೆದಿದ್ದರು. ಅದನ್ನು ಇ-ಖಾತಾ ಮಾಡಿಸಲು ಹೋದಾಗ, ಅಧಿಕಾರಿಗಳು ಇದು ಎ ಖಾತಾ ಆಗಲ್ಲ, ಬಿ ಖಾತಾ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಮಾಲೀಕರು ಹಾಗೂ ಅಧಿಕಾರಿಯ ನಡುವೆ 30,000 ರೂ. ಲಂಚಕ್ಕೆ ಮಾತುಕತೆ ನಡೆದಿತ್ತು. ಮೊದಲಿಗೆ ಅಧಿಕಾರಿಗೆ ಫೋನ್ ಪೇನಲ್ಲಿ 15,000 ರೂ. ಲಂಚ ಸಂದಾಯವಾಗಿದೆ. ಆದರೆ ಅರ್ಜಿಯನ್ನು ಜಿಲ್ಲಾಧಿಕಾರಿ ತಿರಸ್ಕಾರ ಮಾಡಿದ್ದಾರೆ. ಮತ್ತೆ ಎರಡು ಬಾರಿ ಅರ್ಜಿ ಹಾಕಿದಾಗಲೂ ತಿರಸ್ಕಾರವಾಗಿದೆ. ಮಾಲೀಕರು ಉಳಿದ 20,000 ರೂ. ಲಂಚ ಕೊಟ್ಟಿದ್ದರು. ಆ ಹಣವನ್ನು ವಾಪಸ್ ಕೇಳಿದಾಗ ಅಧಿಕಾರಿ ವಾಪಸ್ ಕೊಟ್ಟಿಲ್ಲ. ಮಾಲೀಕರು ಗ್ರಾಹಕರ ನ್ಯಾಯಾಲಯಕ್ಕೆ ಹೋದರೂ ನ್ಯಾಯ ಸಿಗಲಿಲ್ಲ. ಸಹಾಯವಾಣಿಗೆ ದೂರು ನೀಡಿದರೂ ನ್ಯಾಯ ಸಿಗಲಿಲ್ಲ. ಇದೇ ರೀತಿ ದೇವನಹಳ್ಳಿ ಭಾಗದಲ್ಲಿ ಇ -ಖಾತಾ ಮಾಡಿಸಲು 50,000 ರೂ. ಲಂಚ ಪಡೆಯುತ್ತಾರೆ. ನಂಜುಂಡಪ್ಪ ಎಂಬ ನಿವೃತ್ತ ಅಧಿಕಾರಿ ಕಚೇರಿ ಮಾಡಿಕೊಂಡು ಒಂದು ನಿವೇಶನಕ್ಕೆ ಇ -ಖಾತಾ ಮಾಡಿಸಲು 30-40 ಸಾವಿರ ರೂ. ಪಡೆಯುತ್ತಿದ್ದಾರೆ. ಪ್ರತಿ ವಾರ್ಡ್‌ಗಳಲ್ಲಿ ಇಂತಹ ದಂಧೆ ನಡೆಯುತ್ತಿದೆ ಎಂದು ಹೇಳಿದರು.

ಎಚ್‌ಬಿಆರ್ ಲೇಔಟ್‌ನಲ್ಲಿ ಮಾಲೀಕರ ತಂದೆಗೆ ಹರಾಜು ನೋಟಿಸ್ ನೀಡಲಾಗಿದೆ. ಎರಡು ವರ್ಷದಿಂದ ತೆರಿಗೆ ನೀಡಿಲ್ಲದ್ದಕ್ಕೆ ಮನೆ ಹರಾಜು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಮನೆಯ ಖಾತೆಯನ್ನು ತಂದೆ ಮಗನ ಹೆಸರಿಗೆ ನೋಂದಣಿ ಮಾಡಿಸಿದ್ದರು. ಈವರೆಗೆ ಮಗ ಸರಿಯಾಗಿ ತೆರಿಗೆ ಪಾವತಿಸಿದ್ದಾರೆ. ಆದರೆ ಅವರ ತಂದೆಗೆ ನೋಟಿಸ್ ನೀಡಲಾಗಿದೆ. ಇದೇ ರೀತಿ ಎಲ್ಲ ಕಡೆ ಮಾಫಿಯಾ ಇದೆ. ಈ ಕುರಿತು ನನ್ನ ಕಚೇರಿಗೆ ಅನೇಕರು ಬಂದು ದೂರು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಶೇ.65 ರಷ್ಟು ಆದಾಯ ಬೆಂಗಳೂರಿಂದ ಬರುತ್ತಿದೆ. ಮೂಲಸೌಕರ್ಯದ ಕೊರತೆಯಿಂದಾಗಿ ಅನೇಕ ಕಂಪನಿಗಳು ನಗರವನ್ನು ತೊರೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಯೋಜನೆ ಘೋಷಿಸಿದ್ದರು. ಆದರೆ ಬೆಂಗಳೂರಲ್ಲಿ ಈಗ ಕಸದ ರಾಶಿ, ರಸ್ತೆ ಗುಂಡಿ ಮೊದಲಾದ ಸಮಸ್ಯೆಗಳು ಉಂಟಾಗಿವೆ. ಉಪಮುಖ್ಯಮಂತ್ರಿ ಅನೇಕ ಬಾರಿ ನಗರ ಪ್ರದಕ್ಷಿಣೆ ಮಾಡಿ 15 ದಿನ ಕಳೆದರೂ ರಸ್ತೆಗುಂಡಿ ಮುಚ್ಚಲಿಲ್ಲ. ಎರಡು ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಗುಂಡಿ ಮುಚ್ಚಿದ್ದೇವೆ ಎಂದರೂ ಎಲ್ಲೂ ಗುಂಡಿ ಮುಚ್ಚಿಲ್ಲ. ಬಸ್ ಹರಿದು, ಸ್ಕೂಟರ್‌ನಿಂದ ಬಿದ್ದು ಅನೇಕ ಜನರ ಸಾವಾಗಿದೆ ಎಂದರು.
ರಸ್ತೆಗುಂಡಿ ಮುಚ್ಚಲು ಸರ್ಕಾರ ಗಡುವು ನೀಡಿದರೂ ಅದು ಯಶಸ್ವಿಯಾಗಿಲ್ಲ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬೆಂಗಳೂರಿನ ಕಡೆ ತಿರುಗಿ ನೋಡಬೇಡಿ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ರೇವಂತ್ ರೆಡ್ಡಿಯನ್ನು ಬ್ರದರ್ ಎನ್ನುತ್ತಾರೆ. ಆದರೆ ರೇವಂತ್ ರೆಡ್ಡಿ ತಮ್ಮ ನಗರಕ್ಕೆ ಬೆಂಗಳೂರನ್ನು ಹೋಲಿಸಬೇಡಿ ಎಂದು ಟೀಕೆ ಮಾಡಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಒಂದೂ ಪ್ರತಿಕ್ರಿಯೆ ನೀಡಿಲ್ಲ. ಈ ಸರ್ಕಾರ ಧೈರ್ಯವಾಗಿ ಅದಕ್ಕೆ ಪ್ರತಿಕ್ರಿಯೆ ನೀಡಬೇಕಿತ್ತು ಎಂದರು.
ಡಂಪಿಂಗ್ ಯಾರ್ಡ್ ಇಲ್ಲ
ಕಸದ ಸಮಸ್ಯೆ ನಿವಾರಣೆಗೆ ಡಂಪಿಂಗ್ ಯಾರ್ಡ್ ನಿರ್ಮಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಮೂರು ವರ್ಷ ಕಳೆದರೂ ಆ ಕೆಲಸವಾಗಿಲ್ಲ. ಅದರ ಬದಲು ಸಚಿವ ಜಮೀರ್ ಅಹ್ಮದ್ ಕೋಗಿಲು ಕ್ರಾಸ್‌ನಲ್ಲಿ ಮನೆಗಾಗಿ ನಿವೇಶನ ಹಂಚಿದ್ದಾರೆ. ಇಂದು ನಗರದಲ್ಲಿ 10,000 ಟನ್ ಕಸ ಡಂಪಿಂಗ್ ಯಾರ್ಡ್‌ಗೆ ಹೋಗದೆ ಬಾಕಿ ಉಳಿದಿದೆ ಎಂದರು.
ಜಿವಿಎ ಕಂದಾಯ ಇಲಾಖೆಯಲ್ಲಿ 1482 ಅಧಿಕಾರಿಗಳಿರಬೇಕಿತ್ತು. ಆದರೆ 858 ಅಧಿಕಾರಿಗಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 1063 ಬದಲು 429 ಅಧಿಕಾರಿಗಳಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ 1047 ರ ಬದಲು 543 ಅಧಿಕಾರಿಗಳಿದ್ದಾರೆ. ಹಣಕಾಸು ವಿಭಾಗದಲ್ಲಿ 30 ರ ಬದಲು 18 ಅಧಿಕಾರಿಗಳಿದ್ದಾರೆ. ಪ್ರಥಮ ಹಾಗೂ ದ್ವಿತೀಯ ದರ್ಜೆ ನೌಕರರು 2704 ಇರಬೇಕಿದ್ದರೂ, ಈಗ 970 ಇದ್ದಾರೆ. ಅಂದರೆ ಜಿಬಿಎನಲ್ಲಿ ಹೊಸ ನೇಮಕ ನಡೆದಿಲ್ಲ. ಪಾಲಿಕೆಯ ಆದಾಯ ಕೂಡ ಕಡಿಮೆಯಾಗಿದೆ. ಆಸ್ತಿ ತೆರಿಗೆಯಿಂದ 4500 ಕೋಟಿ ರೂ., ನಕ್ಷೆ ಮಂಜೂರಾತಿಯಿಂದ 1200 ಕೋಟಿ ರೂ., ರಸ್ತೆ ಅಗೆತ ಶುಲ್ಕದಿಂದ 150 ಕೋಟಿ ರೂ., ಸೇರಿ ಒಟ್ಟು 5850 ಕೋಟಿ ರೂ. ಆದಾಯ ಬರುತ್ತದೆ. ಈ ಪೈಕಿ ವೇತನಕ್ಕೆ 3492 ಕೋಟಿ ರೂ. ಕೊಡಬೇಕು. ತ್ಯಾಜ್ಯ ವಿಲೇವಾರಿ ಮೊದಲಾದ ಕಾರ್ಯಗಳು ಸೇರಿದರೆ ಒಟ್ಟು 6300 ಕೋಟಿ ರೂ. ಕೊಡಬೇಕಾಗುತ್ತದೆ. ಇನ್ನು ಪ್ರವಾಹ ಮೊದಲಾದ ಸಮಸ್ಯೆಗಳು ಬಂದರೆ ಅದಕ್ಕೆ ಪಾಲಿಕೆ ಬಳಿ ಹಣವೇ ಇಲ್ಲ. ಕಳೆದ ಬೇಸಿಗೆಯಲ್ಲಿ ನಗರದಲ್ಲಿ ಟ್ಯಾಂಕರ್ ಮಾಫಿಯಾ ಕಂಡುಬಂದಿತ್ತು. ಈ ಬಾರಿ ಬೇಸಿಗೆ ಆರಂಭವಾದರೂ ಸಭೆ ನಡೆದಿಲ್ಲ, ತಯಾರಿ ನಡೆದಿಲ್ಲ ಎಂದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bengaluru-e-khata-scam-allegations-r-ashoka-slams-corruption-questions-brand-bengaluru-initiative-448185.html. xn--babytilbehr-pgb.com does not claim ownership of this content. All rights remain with the original publisher.
