ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? | Karnataka Budget 2026: Ban on Social Media for Kids Under 16; Experts Question Feasibility- Impact

Karnataka

oi-Shankrappa Parangi

ಬೆಂಗಳೂರು: ಇಂದಿನ ಮಕ್ಕಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆ ಹೆಚ್ಚಾಗಿದೆ. ಮೊಬೈಲ್ ಗೀಳಿನಿಂದ ಮಕ್ಕಳ ಮಾನಸಿಕ ಸ್ಥಿತಿ, ಅರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಗಟ್ಟಲು ಕರ್ನಾಟಕ ಸರ್ಕಾರ ಇಂದಿನ 20226-27ನೇ ಸಾಲಿನ ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿದೆ. ನಿಜವಾಗಿಯೂ ಮಕ್ಕಳಿಂದ ಮೊಬೈಲ್ ಬಳಕೆ ನಿಲ್ಲಿಸಲು ಸಾಧ್ಯವೇ?. ಸರ್ಕಾರದ ಈ ನಿರ್ಧಾರ ಕಾರ್ಯಸಾಧುವೆ? ಈ ವಿಚಾರ ಕುರಿತು ತಜ್ಞರು ‘ಒನ್ ಇಂಡಿಯಾ ಕನ್ನಡ’ದೊಂದಿಗೆ ಮಾತನಾಡಿದ್ದು, ಅದರ ವಿವರ ಮುಂದಿದೆ.

ಭವಿಷ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಮಕ್ಕಳ ಮೊಬೈಲ್ ವ್ಯಸನ ತಡೆಯಲು ಈ ನಿಷೇಧ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಮಕ್ಕಳ ಹುಕ್ಕುಗಳ ಕಾರ್ಯಕರ್ತರಾದ ನಾಗಸಿಂಹ ಜಿ. ರಾವ್ ಹಾಗೂ ಮನಃಶಾಸ್ತ್ರಜ್ಞೆ ಮತ್ತ ಮಕ್ಕಳ ಆಪ್ತ ಸಮಾಲೋಚಕಿ ರೂಪಾ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

Ban on Social Media for Kids

ನಾಗಸಿಂಹ ಜಿ. ರಾವ್ ಅವರು, ‘ಸರ್ಕಾರ ಮಕ್ಕಳ ಮೊಬೈಲ್ ಬಳಕೆ ನಿಷೇಧಕ್ಕೂ ಮೊದಲು ಮಕ್ಕಳ ಅಭಿಪ್ರಾಯ ಪಡೆಯುವ ಜೊತೆಗೆ ಪೋಷಕರೊಂದಿಗೂ ಸಮಾಲೋಚಿಸಬೇಕಿತ್ತು. ಮಾಡಬೇಕಿತ್ತು. ಈಗಾಗಲೇ ಮಕ್ಕಳು ಮೊಬೈಲ್‌ ವ್ಯಸನಕ್ಕೆ (ಅಡಿಕ್ಟ್) ಒಳಗಾಗಿದ್ದಾರೆ. ದಿಢೀರನೇ ಮೊಬೈಲ್ ಮುಟ್ಟುವಂತಿಲ್ಲ, ಸಾಮಾಜಿಕ ಜಾಲತಾಣ ಬಳಸುವಂತಿಲ್ಲ ಎಂದರೆ ಅದು ಮಕ್ಕಳ ಮಾನಸಿಕ ಸ್ಥಿತಿ ಮೇಲೂ ಪ್ರಭಾವ ಬೀರುತ್ತದೆ. ಮಕ್ಕಳು ದಿಢೀರ್ ಒಪ್ಪದೆಯೂ ಇರಬಹುದು. ಮಕ್ಕಳು ಹಠ ಹಿಡಿಯುತ್ತಾರೆ, ಅಳುತ್ತಾರೆ.

ಪೋಷಕರ ಕಣ್ತಪ್ಪಿಸಿ ಕದ್ದು ಮೊಬೈಲ್ ಉಪಯೋಗಿಸಿದರೆ ಏನು ನಾವೇನು ಮಾಡಲಾಗುವುದಿಲ್ಲ. ಹೀಗಾಗಿ ಮೊಬೈಲ್ ವ್ಯಸನಕ್ಕೆ ಬಿದ್ದ ಮಕ್ಕಳಿಗೆ ಅರಿವು ಮೂಡಿಸುವುದು ಮುಖ್ಯವಾಗಿರುತ್ತದೆ. ಈ ಬಗ್ಗೆ ತಿಳಿ ಹೇಳಬೇಕು. ಮನವರಿಕೆ ಮಾಡಿಕೊಡಬೇಕು. ನಂತರ ಹಂತ ಹಂತವಾಗಿ ವ್ಯಸನದಿಂದ ಹೊರ ತರಲು ಮುಂದಾಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ, ಪೋಷಕರಿಗೆ ಅರಿವು ಮೂಡಿಸಬೇಕು. ಇದೆಲ್ಲ ಮಾಡದೇ ಏಕಾಎಕಿ ನಿಷೇಧ ನಿರ್ಧಾರದಿಂದ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ರೀಲ್ಸ್ ಮಾಡುವ ಮೂಲಕ ತಮ್ಮನ್ನು ಜನ ಗುರುತಿಸುತ್ತಾರೆ. ತನ್ನಲ್ಲೂ ಪ್ರತಿಭೆ ಇದೆ ಎಂದುಕೊಳ್ಳುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಖಷಿ ಪಡುತ್ತಾರೆ. ಹಲವು ಮಕ್ಕಳು ಶಿಕ್ಷಣ ವಿಷಯವಾಗಿಯೇ ರೀಲ್ಸ್ ಮಾಡುತ್ತಾರೆ. ಅಂದರೆ ಮೊಬೈಲ್ ಬಳಕೆಯಿಂದ ಒಳಿತು, ಕೆಡಕು ಎರಡು ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಅಷ್ಟಕ್ಕೂ ಸರ್ಕಾರ ಮಕ್ಕಳ ಮೊಬೈಲ್, ಸಾಮಾಜಿಕ ಬಳಕೆಯ ಮೇಲೆ ನಿಷೇಧ ಹೇರಿದ್ದು, ಅದನ್ನು ಸೂಕ್ತವಾಗಿ ಹೇಗೆ ಜಾರಿಗೆ ತರುತ್ತದೆ. ಸಾಮಾಜಿಕ ಜಾಲತಾಣ ವೇದಿಕೆಗಳ ಮುಖ್ಯಸ್ಥರಿಗೆ ಸರ್ಕಾರ ಪತ್ರ ಬರೆದಿದಿಯಾ? ಶಾಲೆಗಳಲ್ಲಿ ಏನೆಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ? ಕ್ರಿಯಾ ಯೋಜನೆ ಮಾಡಿಕೊಂಡಿದ್ದಾರೆಯೇ? ಎಂಬುದು ತಿಳಿಯಬೇಕಿದೆ. ನಿಷೇಧದಿಂದ ಮಕ್ಕಳ ಭಾಗವಹಿಸುವ ಹಕ್ಕಿಗೆ ತೊಂದರೆ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಕಾದಂಬರಿ ಪುಸ್ತಕ ಓದದಂತೆ ಹೇಳುತ್ತಿದ್ದರು. ನಂತರ ಟಿವಿ ಬಂದ ಮೇಲೆ ಅಭ್ಯಾಸ ಬಿಟ್ಟು ಟಿವಿ ನೋಡಿದರೆ ಮಕ್ಕಳು ಭವಿಷ್ಯ ಹಳಾಗುತ್ತದೆ ಎಂದು ಹೇಳಲಾಯಿತು. ಇದೀಗ ಮೊಬೈಲ್ ಬಳಕೆಗೆ ಬಂದು ನಿಂತಿದ್ದು, ಇದೊಂದು ಸಾಮಾಜಿಕ ಸರಣಿ ಕ್ರಮವಾಗಿದೆ ಎಂದರು.

ಪೋಷಕರೇ ಮಕ್ಕಳನ್ನು ಮೊಬೈಲ್ ವ್ಯಸನದಿಂದ ಹೊರತರಬೇಕು

ಮನಃಶಾಸ್ತ್ರಜ್ಞೆ ಮತ್ತು ಮಕ್ಕಳ ಆಪ್ತ ಸಮಾಲೋಚಕಿ ಡಾ.ರೂಪಾ ರಾವ್ ಅವರು, ‘ಮಕ್ಕಳ ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ನಿಷೇಧವು ಒಳ್ಳೆಯ ತೀರ್ಮಾನ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಅಪ್ಪ-ಅಮ್ಮ ಮೊದಲ ಗುರು. ಮಕ್ಕಳ ಮೊಬೈಲ್ ಬಳಕೆಗೆ ಪೋಷಕರೇ ಮೊದಲ ಗುರು ಎಂದರೆ ತಪ್ಪಾಗಲಾರದು. ಅವರು ಬಳಕೆ ಮಾಡಿದ್ದು ನೋಡಿ ಮಕ್ಕಳು ಮೊಬೈಲ್ ಬಳಸಿ ಬಳಸಿ ಇದೀಗ ವ್ಯಸನಿಗಳಾಗಿದ್ದಾರೆ. ಏಕಾಎಕಿ ಅದರಿಂದ ಹೊರತರಲು ಆಗದು. ಹಂತ ಹಂತವಾಗಿ ಹೊರ ತರಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕಿದೆ ಎಂದರು.

ಶಾಲೆಗೆ ಮಕ್ಕಳು ಮೊಬೈಲ್ ಒಯ್ಯುವ ಹಾಗಿಲ್ಲ. ಹೀಗಾಗಿ ಶಾಲೆಗಳಲ್ಲಿ ಮೊಬೈಲ್ ತರದಂತೆ ತಡೆಬಹುದು. ಆದರೆ ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ತಡೆಯುವುದು ಅಪ್ಪ ಅಮ್ಮಂದಿರ ಕರ್ತವ್ಯ. ತಂದೆ ತಾಯಂದಿರು ಕಾಮಿಡಿ, ಜೋಕ್ಸ್ ಇನ್ನಿತರ ಕಂಟೆಂಟ್ ನೋಡುತ್ತಾ ಮನರಂಜನೆ ಪಡೆದರೆ, ಅದರಿಂದ ಮಕ್ಕಳು ಆಸಕ್ತರಾಗುತ್ತಾರೆ. ಸ್ಪೂರ್ತಿ ಪಡೆದು ಮೊಬೈಲ್ ಬಳಕೆಗೆ ಅಂಟಿಕೊಳ್ಳುತ್ತಾರೆ. ಪೋಷಕರನ್ನು ಹೆದರಿಸಿ ಮೊಬೈಲ್ ಪಡೆಯುವ ಮಕ್ಕಳಿದ್ದರೆ, ಕೆಲವರು ಕಣ್ತಪ್ಪಿಸಿ ಬಳಸುತ್ತಾರೆ. ಇದಕ್ಕೆ ಗ್ರಾಮೀಣ ಭಾಗದ ಮಕ್ಕಳು ಹೊರತಲ್ಲ. ಮೊಬೈಲ್ ಕೊಡದಿದ್ದಕ್ಕೆ ಚಾಕು ಚುಚ್ಚಿದ, ಮನೆ ಬಿಟ್ಟು ಓಡಿಹೋದ ಉದಹಾರಣೆಗಳು ನಮ್ಮ ಮುಂದಿವೆ.

ಮಕ್ಕಳು ಹಠ ಮಾಡಿದರೆ, ಊಟ ಮಾಡದೇ ಸತಾಯಿಸಿದರೆ, ಹೇಳಿದಂತೆ ಕೇಳದಿದ್ದಾಗ ಪೋಷಕರೇ ಅವರ ಕೈಗೆ ಫೋನ್ ಕೊಟ್ಟು ಸುಮ್ಮನಾಗಿಸಿಬಿಡುತ್ತಾರೆ. ಮಕ್ಕಳು ಮೊಬೈಲ್ ವ್ಯಸನಿಗಳಾಗಲು ಕಾರಣವಾದ ಪೋಷಕರೇ ಕ್ರಮೇಣ ಆ ವ್ಯಸನದಿಂದ ಮಕ್ಕಳನ್ನು ಹೊರತಬೇಕಿದೆ ಎಂದು ತಿಳಿ ಹೇಳಿದರು.

ಮಕ್ಕಳು ದಾರಿ ತಪ್ಪುವುದು ತಪ್ಪುತ್ತದೆ

ಶಾಲೆಯಲ್ಲಿ ಮೊಬೈಲ್ ನಿಷೇಧ ಅತ್ಯುತ್ತಮ ನಿರ್ಧಾರ, ಏಕೆಂದರೆ ಮಕ್ಕಳ ಓದಿಗೆ ಸಹಕಾರಿಯಾಗುವ ಜೊತೆಗೆ ಸಹಪಾಠಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ವಿಡಿಯೋ ಸೆರೆ ಹಿಡಿಯುವುದು, ಫೋಟೋ ತೆಗೆದು ಅಪ್ಲೋಡ್ ಮಾಡುವುದು, ಅದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುವುದು ತಪ್ಪಲಿದೆ. ಓದುವ ವಯಸ್ಸಿನಲ್ಲಿ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬಹುದಾಗಿದೆ.

ಒಂದು ಕಡೆಯಿಂದ ಸರ್ಕಾರದ ನಿಷೇಧ ನಿರ್ಧಾರ ಸರಿ. ಆದರೆ ಅದನ್ನು ಹೇಗೆ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತದೆ ಎಂಬುದು ಮುಖ್ಯ. 16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣಗಳ ಪ್ರವೇಶ ನಿಷೇಧಿಸಿದರೆ ಅವರು ಸುಳ್ಳು ಮಾಹಿತಿ ನೀಡಿ ಬಳಸಲೂಬಹುದು. ಒಂದು ವೇಳೆ ಹಾಗೆ ಮಾಡಿದರೆ ಅದಕ್ಕೆ ಶಿಕ್ಷೆ ಇದಿಯಾ, ಶಾಲೆಯಲ್ಲಿ ಮಕ್ಕಳ ಬ್ಯಾಗ್‌ನಲ್ಲಿ ಮೊಬೈಲ್ ಪತ್ತೆ ಆದರೆ ಅಪರಾಧವೇ? ಇಂಥವುಗಳಿಗೆ ಶಿಕ್ಷೆ ಇದ್ದಾಗ ಬಳಕೆ ಕಡಿಮೆ ಆಗಬಹುದು. ಆದರೆ ಮನೆಯಲ್ಲಿ ಬಳಕೆ ತಡೆಯುವುದು ಹೇಗೆ?.

ಮೊಬೈಲ್‌ನಲ್ಲೇ ಮಕ್ಕಳ ಅಭ್ಯಾಸ

ಅನೇಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಮನೆಗೆಲಸವನ್ನು, ವೇಳಾಪಟ್ಟಿ ಇತರ ಮಾಹಿತಿಯ ನೋಟಿಫಿಕೇಷನ್ ಪೋಷಕರ‌ ಮೊಬೈಲ್‌ಗೆ ಬರುತ್ತವೆ. ಆಗ ತಂದೆ ತಾಯಿಗೆ ಗೊತ್ತಾಗದಿದ್ದರೆ ಅದನ್ನು ನೋಡುವುದು ಮಕ್ಕಳೇ. ಹತ್ತನೇ ತರಗತಿ ಮಕ್ಕಳಿಗೆ ಪ್ರಾಜೆಕ್ಟ್‌ಗಳಿಗೆ ಇಂಟರ್‌ನೆಟ್, ಮೊಬೈಲ್ ಬಳಕೆ ಅಗತ್ಯವಿರುತ್ತದೆ. ಹೀಗಿದ್ದಾಗ ಅವರನ್ನು ವ್ಯಸನದಿಂದ ದೂರು ಮಾಡಲು ಸರ್ಕಾರದ ಎಲ್ಲ ಆಯಾಮಗಳಲ್ಲೂ ಯೋಚಿಸಿ ಸೂಕ್ತ ಕ್ರಮ ಜಾರಿಗೆ ತರಬೇಕು. ಶಾಲೆಗಳಲ್ಲಿ ಮಕ್ಕಳಿಗೆ, ಪೋಷಕರಿಗೆ ಅಭಿಯಾನ ಮೂಲಕ ಮೊಬೈಲ್ ಬಳಕೆ ಬಿಡಿಸುವ ಬಗ್ಗೆ ಅರಿವು ಮೂಡಿಸಬೇಕು. ಮನೆಯಿಂದ ಹೊರಗಿರುವ ಮಕ್ಕಳು ಪೋಷಕರನ್ನು ಸಂಪರ್ಕಿಸಲು ಕೀಪ್ಯಾಡ್ ಫೋನ್‌ ನೀಡುವ ಅವಕಾಶ ಇದೆಯೇ ತಿಳಿಸಬೇಕು ಎಂದು ಹೇಳಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-2026-ban-on-social-media-for-kids-under-16-experts-question-feasibility-impact-446187.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo