
International
oi-Shankrappa Parangi
US & Israel vs Iran: ಇರಾನ್ ರಾಜಧಾನಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ, ಇರಾನ್ ಅಪಾಯಕಾರಿ ದೇಶವಾಗಿದ್ದು, ಅದರ ವಿರುದ್ಧ ದೊಡ್ಡ ನಿರ್ಧಾರ ಕೈಗೊಳ್ಳಬೇಕೆಂದು ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯುದ್ಧ ಸಾರುವ ಮುನ್ಸೂಚನೆ ಎಂಬಂತೆ ಹೇಳಿದ್ದಾರೆ. ಇದರ ಬೆನ್ನಲ್ಲೆ ವಿರೋಧಿ ರಾಷ್ಟ್ರಗಳು ಒಟ್ಟಾಗಿದ್ದನ್ನು ಗಮನಿಸಿದ ಇರಾನ್ ಇಂದು (ಫೆ.28) ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿರುವ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ.
ಅಣು ಒಪ್ಪಂದ ಒಪ್ಪದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುಎಸ್ ಎಚ್ಚರಿಕೆ ನೀಡಿದ ಬಳಿಕ ತಿಂಗಳುಗಳಿಂದ ಯುದ್ಧ ನೌಕೆ, ಸೇನಾ ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತಿತ್ತು. ಈ ಮಧ್ಯೆ ಇಂದು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತು. ಮತ್ತೊಂದು ಕಡೆ ಇರಾನ್ ಹಾಗೂ ಯುಎಸ್ ಮಧ್ಯ ಅಣು ಒಪ್ಪಂದವು ಮಹತ್ವದ ಮಾತುಕತೆ ಹಂತದಲ್ಲಿದೆ. ಈ ನಡುವೆ ಇಸ್ರೇಲ್ ದಾಳಿ ಎದುರಿಸಿದ ಇರಾನ್ ರಕ್ಷಣಾತ್ಮಕ ದೃಷ್ಟಿಯಿಂದ ಸುಮ್ಮನಿರದೇ ಎದುರಾಳಿ ಎರಡು ದೇಶಗಳಾದ ಇಸ್ರೇಲ್ ಮತ್ತು ಅಮೆರಿಕ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ.

ದಾಳಿ ಮುಖೇನ ಪ್ರತಿಕ್ರಿಯಿಸಿದ ಇರಾನ್
ಯುಎಸ್ ತಿಂಗಳಿನಿಂದ ಯುದ್ಧದ ಬೆದರಿಕೆ ಹಾಕುತ್ತಿತ್ತು. ಇದೀಗ ಇರಾನ್ ದಾಳಿ ಮೂಲಕ ಪ್ರತಿಕ್ರಿಯಿಸಿದೆ. ಇರಾನ್ ಮೊದಲು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿತು. ನಂತರ ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಯೂ ದಾಳಿ ನಡೆಸಿದೆ. ಈ ವೇಳೆ ಮಿಲಿಟರಿ ನೆಲೆಗಳ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಸ್ಪೋಟಗಳು ಸಂಭವಿಸಿವೆ. ಸ್ಥಳೀಯ ನಿವಾಸಿಗಳು ಸ್ಪೋಟದ ಶಬ್ಧಕ್ಕೆ ನಡುಗಿದ್ದಾರೆ.
ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಸಿಕೊಂಡು ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಜಂಟಿ ಅಭಿಯಾನದ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಿದ್ದಂತೆ ಶನಿವಾರ ಕತಾರ್‌ನಲ್ಲಿ ಸ್ಫೋಟಗಳು ಕೇಳಿ ಬಂದವು. ಅಲ್ಲಿ ಉಂಟಾಗಿರುವ ಹಾನಿ ಮತ್ತು ಸಾವು ನೋವುಗಳ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ದಾಳಿ ಖಚಿತವಾಗುತ್ತಿದ್ದಂತೆ ಕತಾರ್‌ನಲ್ಲಿ ಮೊಬೈಲ್ ಫೋನ್‌ಗಳಲ್ಲಿ ಎಚ್ಚರಿಕೆಗಳು, ಎಚ್ಚರಿಕೆ ಸಂದೇಶಗಳ ಮೇಲಿಂದ ಮೇಲೆ ಮೊಳಗಿವೆ. ಕುವೈತ್‌ನಲ್ಲಿ ಎಚ್ಚರಿಕೆ ಸೈರನ್‌ಗಳನ್ನು ಮೊಳಗಿಸಲಾಯಿತು. ಅಲ್ಲಲ್ಲಿ ಸ್ಪೋಟಗಳು ಕೇಳಿ ಬರುತ್ತಿದ್ದಂತೆ ನಿವಾಸಿಗಳು ಎಚ್ಚರ ವಹಿಸಿದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಂದು ಜಿನಿವಾದಲ್ಲಿ ಮಹತ್ವದ ಮಾತುಕತೆ
ಇತ್ತೀಚೆಗೆ ಇರಾನ್ ಹಾಗೂ ಯುಎಸ್ ಮಧ್ಯ ಮಹತ್ವದ ಅಣು ಒಪ್ಪಂದ ಆಗದಿದ್ದರೆ ಮಹಾಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಊಹಿಸಲಾಗಿತ್ತು. ಅಷ್ಟರಲ್ಲಾಗಲೇ ಮೂರು ಸುತ್ತಿನ ಮಾತುಕತೆಗಳನ್ನು ಎರಡು ದೇಶಗಳ ಮುಖ್ಯಸ್ಥರು ನಡೆಸಿದ್ದರು. ಇಂದು ಶನಿವಾರ ಫೆ. 28ರಂದು ಜಿನಿವಾದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿತ್ತು. ಈ ಮಧ್ಯೆ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತು. ಪ್ರತಿಯಾಗಿ ಇರಾನ್ ಪ್ರತಿದಾಳಿ ರೀತಿಯಲ್ಲಿಯೇ ಪ್ರತಿಕ್ರಿಯಿಸಿಯಿಸಿದೆ.
ಈ ಬಗ್ಗೆ ಶನಿವಾರ ಟೆಕ್ಸಾಸ್‌ನಲ್ಲಿ ಮಾತನಾಡಿರುವ ಟ್ರಂಪ್, ಇರಾನ್ ಅಪಾಯಕಾರಿ ದೇಶವೆಂದು ವಾಗ್ಬಾಣ ಬಿಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ದೊಡ್ಡ ನಿರ್ಧಾರಕ್ಕೆ ಬರಬೇಕಿದೆ. ಸದ್ಯ ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದ ಬದಲಿಗೆ ಶಾಂತಿ ಮಾರ್ಗದಲ್ಲಿ ಒಪ್ಪಂದಕ್ಕೆ ಬರುವುದು ನಮ್ಮ ಆದ್ಯತೆಯಾಗಿದೆ ಎಂದು ಶಾಂತಿಯ ಮಾತುಗಳನ್ನಾಡಿದ ಅವರು, 47 ವರ್ಷಗಳಿಂದ ಆ ದೇಶ ಜನರನ್ನು ಹಿಂಸಿಸುತ್ತಿದೆ. ಹಡಗುಗಳನ್ನು ಹೊಡೆದುರುಳಿಸುತ್ತಿದೆ. ಜನರನ್ನು ಕೊಲ್ಲುತ್ತಿದ್ದಾರೆ ಎಂದು ಟೀಕಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/middle-east-crisis-iran-attacks-us-and-israel-bases-in-qatar-kuwait-and-bahrain-know-more-445445.html. xn--babytilbehr-pgb.com does not claim ownership of this content. All rights remain with the original publisher.
