
India
oi-Hitesh Y
War Impact: ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಮತ್ತು ಸಮಾನ ವಿತರಣೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು 1955 ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆಯು ಭಾರೀ ಹೆಚ್ಚಳವಾಗಿದೆ. ಇದರ ಬಿಸಿಯು ಇದೀಗ ಭಾರತದ ಮೇಲೂ ಆಗಲು ಪ್ರಾರಂಭವಾಗಿದೆ. ಭಾರತದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಮಾರಾಟದ ಮೇಲೆ ಪರಿಣಾಮ ಎದುರಾಗಿದ್ದು, ಇದರೊಂದಿಗೆ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೆಚ್ಚಳವಾಗುವ ಆತಂಕ ಶುರುವಾಗಿದೆ. ಇದೀಗ ಇಂಧನ ಪೂರೈಕೆಯ ಮೇಲೆ ಒತ್ತಡ ಹೇರುತ್ತಿರುವುದರಿಂದ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಮಂಗಳವಾರ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಜಾರಿಗೆ ತಂದಿದೆ. ಈ ಮೂಲಕ ಮನೆ ಬಳಕೆಯ ಅಡುಗೆ ಅನಿಲ (LPG) ಸರಬರಾಜು ಅಡ್ಡಿಯಾಗದಂತೆ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ತೈಲ ಶುದ್ಧೀಕರಣ ಘಟಕಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಆದೇಶ ಮಾಡಿದೆ.
ಸರ್ಕಾರದ ಆದೇಶದ ಪ್ರಕಾರ ಕೆಲವು ಕ್ಷೇತ್ರಗಳಿಗೆ ನೈಸರ್ಗಿಕ ಅನಿಲ (Natural Gas) ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ. ಮನೆಗಳಿಗೆ ಪೈಪ್ ಮೂಲಕ ಸರಬರಾಜು ಮಾಡುವ ಅನಿಲ (PNG), ವಾಹನಗಳಿಗೆ ಬಳಸುವ ಸಿಎನ್‌ಜಿ (CNG), ಎಲ್‌ಪಿಜಿ ಉತ್ಪಾದನೆ, ಪೈಪ್‌ಲೈನ್ ಕಾರ್ಯಾಚರಣೆಗಳಿಗೆ ಬೇಕಾದ ಇಂಧನ ಮುಂತಾದ ಕ್ಷೇತ್ರಗಳಿಗೆ ಕಳೆದ 6 ತಿಂಗಳ ಸರಾಸರಿ ಬಳಕೆಯ 100% ಮಟ್ಟದ ಸರಬರಾಜು ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರಮುಖ ನಿರ್ದೇಶನ ನೀಡಿದೆ.
ಮುಂದುವರಿದು ರಸಗೊಬ್ಬರ ಕಾರ್ಖಾನೆಗಳಿಗೆ ಕಳೆದ 6 ತಿಂಗಳ ಸರಾಸರಿ ಬಳಕೆಯ ಶೇ.70 ಮಟ್ಟದ ಅನಿಲ ಪೂರೈಕೆ ಮಾಡುವಂತೆ ತಿಳಿಸಲಾಗಿದೆ. ಚಹಾ ಉದ್ಯಮಗಳು, ತಯಾರಿಕಾ ಘಟಕಗಳು ಹಾಗೂ ಇತರೆ ಕೈಗಾರಿಕೆಗಳಿಗೆ ರಾಷ್ಟ್ರೀಯ ಅನಿಲ ಜಾಲದ ಮೂಲಕ ಸುಮಾರು ಶೇ.80 ಮಟ್ಟದ ಅನಿಲ ಪೂರೈಕೆ ನೀಡಲಾಗುತ್ತದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಕಂಪನಿಗಳಿಗೂ ತಮ್ಮ ಜಾಲದ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಶೇ. 80 ಸರಬರಾಜು ಇರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಮಹತ್ವದ ಆದೇಶ
ಇನ್ನು ದೇಶದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕೆಲವೊಂದು ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರವು ಇದೇ ಸಂದರ್ಭದಲ್ಲಿ ನೀಡಿದೆ. ಎಲ್‌ಎನ್‌ಜಿ (LNG) ಸರಬರಾಜಿನಲ್ಲಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ತೈಲ ಶುದ್ಧೀಕರಣ ಕಂಪನಿಗಳಿಗೆ ನೀಡುವ ಅನಿಲ ಹಂಚಿಕೆಯನ್ನು ಕಳೆದ 6 ತಿಂಗಳ ಸರಾಸರಿಯ ಸುಮಾರು ಶೇ.65 ಕಡಿಮೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಅನಿಲ ಉತ್ಪಾದಕರು, ಆಮದುದಾರರು, ಸಾಗಣೆದಾರರು ಹಾಗೂ ಮಾರಾಟಗಾರರು ತಮ್ಮ ಉತ್ಪಾದನೆ, ಆಮದು, ಸಂಗ್ರಹ, ಸರಬರಾಜು ಮತ್ತು ಬಳಕೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ಆದೇಶಿಸಲಾಗಿದೆ.
ಇದೇ ವೇಳೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತೈಲ ಶುದ್ಧೀಕರಣ ಘಟಕಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಹೇಳಲಾಗಿದೆ. ಮುಂದುವರಿದು ಅದನ್ನು ಮನೆ ಬಳಕೆಗೆ ಆದ್ಯತೆಯಿಂದ ನೀಡಲು ಸೂಚಿಸಲಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರುವುದರಿಂದ ದೇಶದ ಜನರಿಗೆ ಎಲ್‌ಪಿಜಿ ಕೊರತೆ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದು ಮಹತ್ವದ ಕ್ರಮವಾಗಿ ಗ್ರಾಹಕರು ಅತಿಯಾಗಿ ಸಿಲಿಂಡರ್ ಬುಕ್ಕಿಂಗ್ ಮಾಡುವುದು ಮತ್ತು ಮಧ್ಯವರ್ತಿ /ಕಾಳಸಂತೆ ತಡೆಯಲು ಸಿಲಿಂಡರ್ ಬುಕ್ಕಿಂಗ್ ನಡುವಿನ ಅವಧಿಯನ್ನು 25 ದಿನಗಳಿಗೆ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/middle-east-war-impact-centre-issues-key-order-to-ensure-supply-of-petrol-diesel-and-essential-com-446569.html. xn--babytilbehr-pgb.com does not claim ownership of this content. All rights remain with the original publisher.
