
Karnataka
oi-Shankrappa Parangi
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸಿನ ವಿಚಾರದಲ್ಲಿ ರಾಜ್ಯದ ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಬಜೆಟ್ ನಲ್ಲಿ ಆರ್ಥಿಕ ಶಿಸ್ತಿನ ಒಳಗಡೆಯೇ ಸಾಲ ಪಡೆದಿದ್ದೇನೆ ಅಂತ ಹೇಳಿದ್ದಾರೆ. ಆದರೆ, ವಿತ್ತೀಯ ಕೊರತೆ ಶೇ.3ರಷ್ಟು ದಾಟುತ್ತಿದೆ. ಇದನ್ನು ಮರೆಮಾಚಲು ಹೊಂದಾಣಿಕೆ ಮಾಡುತ್ತಾರೆ. ಈ ಬಜೆಟ್ ಕರ್ನಾಟಕದ ಮಟ್ಟಿಗೆ ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೊರೆಸಿರುವಂತ ದಿಕ್ಕು ದೆಸೆ ಇಲ್ಲದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಷ್ಟು ಸಾಲ ಮಾಡಿ, ಇಷ್ಟು ತೆರಿಗೆ ಹೆಚ್ಚಳ ಮಾಡಿ, ಮತ್ತೂ ಕೊರೆತೆ ಬಜೆಟ್ ಮಾಡುತ್ತೀರೆಂದರೆ ಯಾವ ಪುರುಷಾರ್ಥಕ್ಕಾಗಿ ? ಮುಖ್ಯಮಂತ್ರಿಗಳು ಕೆಲವು ಸಾಲಗಳನ್ನು ಬಜೆಟ್ ವ್ಯಾಪ್ತಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.

ವಿತ್ತೀಯ ಕೊರತೆ ಜಿಎಸ್ ಡಿಪಿಯ ಶೇಕಡಾ 25ರ ಒಳಗೆ ಇರಬೇಕಿದ್ದು, ಹೀಗಾಗಿ ಅದನ್ನು 24.94ರಷ್ಟು ಎಂದು ತೋರಿಸಿದ್ದಾರೆ. ಅಂದರೆ ಶೇ.0.6 ಮಾತ್ರ ಅವಕಾಶ ಇದೆ ಅಂತಲೂ ತೋರಿಸಲಾಗಿದೆ. ವಾಸ್ತವವಾಗಿ ಕಳೆದ ವರ್ಷವೇ ಶೇ. 25ರ ಮಿತಿ ದಾಟಿದೆ. ಈ ವರ್ಷವೂ ದಾಟಿದೆ. ರಿಸರ್ವ್ ಬ್ಯಾಂಕಿನ ಹಲವಾರು ಸಾಲಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಸುಮಾರು 10 ಸಾವಿರ ಕೋಟಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಹೊಂದಾಣಿಕೆ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ.
ಮತ್ತು ಆರ್ಥಿಕ ಸ್ಥಿತಿ ಬಹಳ ಕೆಟ್ಟದಾಗಿದೆ. 4.49 ಲಕ್ಷ ಕೋಟಿ ಒಟ್ಟು ಬಜೆಟ್ ಇದೆ. ಅದರಲ್ಲಿ 3ಲಕ್ಷ 40 ಸಾವಿರ ಕೋಟಿ ಬದ್ದತಾ ವೆಚ್ಚ ಇದೆ. ಅಂದರೆ, ಸಂಬಳ, ಪಿಂಚಣಿ, ಬಡ್ಡಿಗೆ, ಸಬ್ಸಿಡಿಗೆ, ಆಡಳಿತಾತ್ಮಕ ವೆಚ್ಚ ಇವೆಲ್ಲ ಸೇರಿದರೆ 3 ಲಕ್ಷ 50 ಸಾವಿರ ಕೋಟಿ ಬದ್ದತಾ ವೆಚ್ಚಕ್ಕೆ ಖರ್ಚಾಗುತ್ತದೆ. ಉಳಿದಿರುವುದರಲ್ಲಿ 64 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಹೋಗುತ್ತದೆ. ಸುಮಾರು 4 ಲಕ್ಷ ಕೋಟಿಯಷ್ಟು ಹಣ ಬದ್ದತಾ ವೆಚ್ಚಕ್ಕೆ ಹೋದರೆ ಅಭಿವೃದ್ಧಿಗೆ ಹಣ ಎಲ್ಲಿ ಉಳಿಯುತ್ತದೆ. ಬಜೆಟ್ ನಲ್ಲಿ 74 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿದ್ದಾರೆ. ಆದರೆ ಕಳೆದ ವರ್ಷ ಅವರು 47 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿದ್ದರು.
ಈ ವರ್ಷ 74 ಸಾವಿರ ಕೋಟಿ ಮಾಡುತ್ತೇನೆ ಅಂತ ಸುಳ್ಳು ಹೇಳಿದ್ದಾರೆ. ಅದನ್ನು ಮಾಡಲು ಸಾಧ್ಯವಿಲ್ಲ. ಮತ್ತು ಕಳೆದ ವರ್ಷ ಅವರು ಮೊಟಾರ ವಾಹನ ತೆರಿಗೆ ಹೆಚ್ಚಿಗೆ ಮಾಡಿದ್ದರು. ಸರ್ಕಾರ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿತ್ತು. ಪೆಟ್ರೊಲ್ ಮೇಲೆ ಸೆಸ್ ಏರಿಕೆ, ಸಾರಾಯಿ ಮೇಲೆ ತೆರಿಗೆ ಹೆಚ್ಚಾಗಿತ್ತು. ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಮಾಡದಿದ್ದರೂ ವರ್ಷವಿಡೀ ತೆರಿಗೆ ಹೆಚ್ಚಿಸುತ್ತ ಬಂದರು ಎಂದು ದೂರಿದರು.
ಅಭಿವೃದ್ಧಿಗೆ ಹಣ ಕೊರತೆ
ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಈ ಬಜೆಟ್ ಗೂ ಅದರಲ್ಲಿರುವ ಅಂಕಿ ಅಂಶಗಳಿಗೂ ಯಾವುದೇ ರೀತಿಯ ಕಿಮ್ಮತ್ತಿಲ್ಲ. ಯಾಕೇಂದರೆ ವರ್ಷವಿಡಿ ತೆರಿಗೆ ಹೆಚ್ಚಳ ಮಾಡಿದರೆ ಬಜೆಟ್ ನ ಪಾವಿತ್ರ್ಯತೆ ಏನು ಉಳಿಯಿತು. ಆದ್ದರಿಂದ ಈ ಅಂಕಿ ಅಂಶಗಳಿಗೆ ಯಾವುದೇ ಮಹತ್ವ ಇಲ್ಲ. ಅಭಿವೃದ್ಧಿಗೆ ಹಣದ ಕೊರತೆ ಆಗುತ್ತದೆ ಎಂದು ಹೇಳಿದರು.
ಇದು ಒಳ್ಳೆಯ ಬಜೆಟ್ ಎಂದು ಸಾಬೀತಾಗಬೇಕಾದರೆ ಒಂದು ವರ್ಷ ಕಾಯಬೇಕು. ಇದನ್ನು ಓದಿ ಒಳ್ಳೆಯ ಬಜೆಟ್ ಅಂತ ಹೇಳಲು ಆಗುವುದಿಲ್ಲ. ಇದರ ಒಟ್ಟು ಖರ್ಚು ಎಷ್ಟಾಗುತ್ತದೆ. ಸದುಪಯೋಗ ಎಷ್ಟಾಗುತ್ತದೆ. ಎಷ್ಟು ಮೂಲ ಸೌಕರ್ಯ ಅಭಿವೃದ್ಧಿ ಆಗುತ್ತದೆ. ಎಷ್ಟು ಸಾಮಾಜಿಕ ವಲಯದಲ್ಲಿ ಜನರಿಗೆ ಅನುಕೂಲ ಆಗುತ್ತದೆ. ಎನ್ನುವುದನ್ನು ನೋಡಿದಾಗ ಈ ಬಜೆಟ್ ನ ಬಗ್ಗೆ ಹೇಳಬಹುದು. ಕಳೆದ ಎರಡು ವರ್ಷಗಳ ಬಜೆಟ್ ನ್ನು ನೋಡಿದಾಗ ಅವರು ಮಾತನಾಡಿರುವುದಕ್ಕೂ ಕಾರ್ಯಕ್ರಮ ಅನುಷ್ಠಾನ ಮಾಡಿರುವುದಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ.
ಹೀಗಾಗಿ ಈ ಬಜೆಟ್ ನಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಮೀಸಲಿಟ್ಟಿರುವ ಹಣ ಯಾವುದನ್ನೂ ಪೂರ್ಣ ಪ್ರಮಾಣದಲ್ಲಿ ಕೊಡುವುದಿಲ್ಲ. ಇದು ಬರಿ ಬಜೆಟ್ ಪುಸ್ತಕದಲ್ಲಿ ಮಾತ್ರ ಇರಲಿದೆ. ಇನ್ನೂ ಇಷ್ಟೊಂದು ಸಾಲ ಮಾಡಿ, ಇಷ್ಟು ತೆರಿಗೆ ಹೆಚ್ಚಳ ಮಾಡಿ, ಮತ್ತೂ ಕೊರೆತೆ ಬಜೆಟ್ ಮಾಡುತ್ತೀರೆಂದರೆ ಯಾವ ಪುರುಷಾರ್ಥಕ್ಕಾಗಿ ಮತ್ರೂ 22,957 ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದೀರಿ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ಕೇಂದ್ರದಿಂದ 63 ಸಾವಿರ ಕೋಟಿ
ಕೇಂದ್ರ ಸರ್ಕಾರ ಈ ವರ್ಷ 63 ಸಾವಿರ ಕೋಟಿ ರೂ. ಕೊಡುತ್ತಿದೆ. ಕಳೆದ ಬಾರಿ 43 ಸಾವಿರ ಕೋಟಿ ಅನುದಾನ ನೀಡಿತ್ತು. ರೈಲ್ವೆ, ಹೆದ್ದಾರಿ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಹಣ ಕೊಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ ಯೋಜನೆಯಲ್ಲಿ, ದೊಡ್ಡ ಪ್ರಮಾಣದಲ್ಲಿ ಹಣ ರಾಜ್ಯಕ್ಕೆ ಬರುತ್ತಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ.
ಉದಾಹರಣೆಗೆ 60 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತದಡಿ ಒಂದು ಹೊಸ ಯೋಜನೆ ಆಗಿದೆ ಕೂಡಲೆ ಅವರಿಗೆ ಚಿಕಿತ್ಸೆ ಕೊಡಬೇಕು. ಹೆಚ್ಚುವರಿ ಕೊಡಬೇಕು ಅಂತ ಅದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲಿದೆ. ರಾಜ್ಯದ ಪಾಲು ಕೊಡಲು ಅಗದೇ ವಯಸ್ಸಾದ ರಾಜ್ಯದ ಜನರ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆಯಿಂದ ಇವರು ನುಣುಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಚಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಈ ಬಜೆಟ್ ಕರ್ನಾಟಕದ ಮಟ್ಟಿಗೆ ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೊರೆಸಿರುವಂತ ಅಭಿವೃದ್ಧಿಯ ದಿಕ್ಕು ದೆಸೆ ಇಲ್ಲದ ಬಜೆಟ್ ಇದಾಗಿದೆ. ಸಂಬಳ, ಪಿಂಚಣಿ ಮತ್ತು ಸಾಲ ತೀರಿಸಲು ಜನರ ದುಡಿಮೆಯ ದುಡ್ಡನ್ನು ಖರ್ಚು ಮಾಡುವ ಸ್ಥಿತಿ ಬರಬಹುದೆಂದು ಅವರು ಲೇವಡಿ ಮಾಡಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/budget-2026-excm-basavaraj-bommai-slams-karnataka-budget-2026-calls-it-development-zero-debt-ridden-446219.html. xn--babytilbehr-pgb.com does not claim ownership of this content. All rights remain with the original publisher.
