
Karnataka
oi-Manohara M
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಮಕ್ಕಳ ಉಚಿತ ಹೃದಯ ಚಿಕಿತ್ಸೆ ವಿಶೇಷ ಶಿಬಿರದಲ್ಲಿ ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 27 ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊಸ ಬದುಕು ಸಿಕ್ಕಿದೆ. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (SMSIMSR) ಆಯೋಜಿಸಿದ್ದ ಈ ಶಿಬಿರದಲ್ಲಿ ಸಂಕೀರ್ಣ ಹೃದಯ ಸಮಸ್ಯೆ ಹೊಂದಿದ್ದ ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ತಜ್ಞ ವೈದ್ಯರು ಯಶಸ್ವಿಯಾಗಿ ನೆರವೇರಿಸಿದರು.
27 ಮಂದಿಗೆ ಶಸ್ತ್ರಚಿಕಿತ್ಸೆ
ಈ ಪೈಕಿ ಕೆಲವು ಮಕ್ಕಳ ರೋಗದ ಸ್ಥಿತಿ ಗಂಭೀರವಾಗಿತ್ತು. ಇದೇ ಕಾರಣಕ್ಕೆ ಕೆಲ ಪ್ರತಿಷ್ಠಿತ ಆಸ್ಪತ್ರೆಗಳು ಇವರಿಗೆ ಶಸ್ತ್ರಚಿಕಿತ್ಸೆ-ಚಿಕಿತ್ಸೆ ನಿರಾಕರಿಸಿದ್ದವು ಎಂದು ರೋಗಿಗಳು ಹೇಳಿದರು. ಸಂಕೀರ್ಣ ಪ್ರಕರಣಗಳನ್ನು ಮಾನವೀಯ ಕಾಳಜಿಯಿಂದ ಕೈಗೆತ್ತಿಕೊಂಡ ತಜ್ಞ ವೈದ್ಯರು ಚಿಕಿತ್ಸೆ ನೀಡಿದರು. ಅಗತ್ಯವಿದ್ದ 27 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರಲ್ಲಿ ಹಲವು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ಸೇರಿದ್ದವು. ಉಳಿದ ಪ್ರಕರಣಗಳಿಗೆ ಇತರ ಅಗತ್ಯ ವಿಧಾನಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಆರು ಮಂದಿ ಶಸ್ತ್ರಚಿಕಿತ್ಸಕರು, ಮಕ್ಕಳ ಹೃದ್ರೋಗ ತಜ್ಞರು, ಅನಸ್ತೇಶಿಯಾ ತಜ್ಞರು ಹಾಗೂ ತೀವ್ರ ನಿಗಾ ಘಟಕದ ಸಿಬ್ಬಂದಿ ಈ ಶಿಬಿರದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಿದರು. ಈ ಶಿಬಿರವು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಸ್ಥಾಪಿತವಾದ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಅಡಿಯಲ್ಲಿ ನಡೆಯಿತು. ಯುನೈಟೆಡ್ ಕಿಂಗ್‌ಡಮ್ ಮೂಲದ ‘ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್’ ಈ ಕಾರ್ಯಕ್ಕೆ ಸಹಯೋಗ ನೀಡಿತ್ತು. ಈ ಫೌಂಡೇಶನ್‌ನ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಮಕ್ಕಳ ಹೃದ್ರೋಗ ತಜ್ಞೆ ಡಾ.ಅನ್ನಿ ಅರವಿಂದ್ ಮಾತನಾಡಿ, ಇವು ಅತ್ಯಂತ ಸಂಕೀರ್ಣ ಪ್ರಕರಣಗಳಾಗಿವೆ. ಅನೇಕ ಮಕ್ಕಳಿಗೆ ಇತರ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ವಿಳಂಬವಾಗಿತ್ತು. ಇಲ್ಲಿ ಶಸ್ತ್ರಚಿಕಿತ್ಸೆಯ ನಂತರ ಎಲ್ಲ ಪ್ರಕರಣಗಳಲ್ಲಿ ಯಶಸ್ಸು ಕಂಡುಬಂದಿದ್ದು, ಮಕ್ಕಳು ಚೇತರಿಕೆ ಹಂತದಲ್ಲಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು-ಕಾಶ್ಮೀರ ರಾಜ್ಯಗಳಿಂದ ರೋಗಿಗಳು ಶಿಬಿರಕ್ಕೆ ಆಗಮಿಸಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಚಿಕಿತ್ಸೆಯನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತಿರುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಕಾರಿಯಾಗಿದೆ.
ಉಚಿತ ಚಿಕಿತ್ಸೆಯಿಂದ ನೆಮ್ಮದಿ ಸಿಕ್ಕಿತು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ರಫೀಕ್ ಅಹ್ಮದ್ ಮಾತನಾಡಿ, “ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಎರಡು ಮೂರು ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು. ಬಡವರಾದ ನಮಗೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಉಚಿತ ಚಿಕಿತ್ಸೆ, ವಾಸ್ತವ್ಯ ಹಾಗೂ ಆಹಾರ ಸೌಲಭ್ಯ ದೊರೆತಿದೆ. ಇದರಿಂದ ನಮಗೆ ನಿಜಕ್ಕೂ ನೆಮ್ಮದಿ ಸಿಕ್ಕಿದೆ. ನಮ್ಮ ಮಗು ಅಬ್ದುಲ್‌ನನ್ನು ಇಲ್ಲಿ ಉತ್ತಮವಾಗಿ ನೋಡಿಕೊಂಡರು” ಎಂದು ಧನ್ಯವಾದ ತಿಳಿಸಿದರು.
ಲಖನೌ ಮೂಲದ ರೂಬಿ ಮಾತನಾಡಿ, “ನಮ್ಮ ಮಗಳು ಸ್ವಾತಿಯ ಚಿಕಿತ್ಸೆಗೆ ಎಲ್ಲ ಕಡೆ ಅಲೆದಿದ್ದೆವು. ಆದರೆ ಅಲ್ಲಿ ನೀಡಿದ ಚಿಕಿತ್ಸೆ ಫಲಕಾರಿ ಆಗಿರಲಿಲ್ಲ. ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮಗಳಿಗೆ ಹೊಸ ಬದುಕು ದೊರೆತಂತಾಗಿದೆ” ಎಂದು ಅನುಭವ ಹಂಚಿಕೊಂಡರು. ಗಂಭೀರ ಸ್ಥಿತಿಯಲ್ಲಿದ್ದ ಹಾಗೂ ಇತರಡೆ ನಿರಾಕರಿಸಲ್ಪಟ್ಟ ಪ್ರಕರಣಗಳಿಗೆ ಚಿಕಿತ್ಸೆ ನೀಡಿರುವ ಈ ಶಿಬಿರವು ಮಕ್ಕಳ ಹೃದಯ ಆರೈಕೆಯಲ್ಲಿ ಮಹತ್ವ ಪಡೆದಿದ್ದು, ವರ್ಷಕ್ಕೆ ಆರು ಬಾರಿ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/muddenahalli-sathya-sai-grama-27-children-get-new-life-after-free-heart-surgery-camp-successful-448573.html. xn--babytilbehr-pgb.com does not claim ownership of this content. All rights remain with the original publisher.
