ಮೂರು ವರ್ಷ ಮುಗಿದಿದೆ, ಸಚಿವ ಸಂಪುಟ ಬದಲಿಸಿ: ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಟಿ.ಬಿ.ಜಯಚಂದ್ರ ಸಜ್ಜು | TB Jayachandra Pushes For Cabinet Reshuffle Congress MLAs Camp In Delhi To Meet High Command

Karnataka

oi-Manohara M

ನವದೆಹಲಿ: ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸಂಪುಟ ಪುನರ್‌ರಚನೆಯ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ದೆಹಲಿಯಲ್ಲಿರುವ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು, ಸಂಪುಟ ಪುನರ್‌ರಚನೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿರಿಯ ಶಾಸಕರ ಪರವಾಗಿ ದನಿ ಎತ್ತುವುದಾಗಿ ತಿಳಿಸಿದ್ದಾರೆ.

ಸಂಪುಟ ಪುನರ್‌ರಚನೆಯ ಬೇಡಿಕೆಯ ಕುರಿತು ಮಾತನಾಡಿದ ಜಯಚಂದ್ರ, “ನಾನು ರಾಜ್ಯದ ಪ್ರತಿನಿಧಿಯಾಗಿ ದೆಹಲಿಯಲ್ಲಿದ್ದೇನೆ. ಅನೇಕ ಶಾಸಕರು ದೆಹಲಿಗೆ ಆಗಮಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೈಕಮಾಂಡ್ ಅನ್ನು ಭೇಟಿ ಮಾಡಿ ಸಂಪುಟ ಪುನರ್‌ರಚನೆಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದೇವೆ. ಇದು ಅನೇಕ ಹಿರಿಯ ಶಾಸಕರ ಬಹುದಿನಗಳ ಬೇಡಿಕೆಯಾಗಿದೆ. ಸರ್ಕಾರಕ್ಕೆ ಐದು ವರ್ಷಗಳ ಅಧಿಕಾರವಧಿಯ ಪೈಕಿ ಈಗಾಗಲೇ ಮೂರು ವರ್ಷಗಳು ಕಳೆದಿವೆ. ಇನ್ನು ಕೇವಲ ಎರಡು ವರ್ಷಗಳಷ್ಟೇ ಬಾಕಿ ಇರುವುದರಿಂದ, ಈಗ ಬದಲಾವಣೆ ಮಾಡುವುದು ಅನಿವಾರ್ಯ ಎಂದಿದ್ದಾರೆ.

TB Jayachandra

ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ

ಇದೇ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ (ಮುಖ್ಯಮಂತ್ರಿ ಬದಲಾವಣೆ) ಕುರಿತು ಕೇಳಲಾದ ಪ್ರಶ್ನೆಗೆ ಜಯಚಂದ್ರ ಅವರು ಸ್ಪಷ್ಟನೆ ನೀಡಿದರು. ನಮ್ಮ ಮುಂದೆ ನಾಯಕತ್ವ ಬದಲಾವಣೆಯ ಯಾವುದೇ ವಿಷಯವಿಲ್ಲ. ಅದು ಹೈಕಮಾಂಡ್, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ರಾಹುಲ್ ಗಾಂಧಿ ಅವರ ನಡುವಿನ ವಿಚಾರ. ಆ ಚರ್ಚೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತದೆ. ನಮ್ಮ ಉದ್ದೇಶ ಕೇವಲ ಸಂಪುಟ ಪುನರ್‌ರಚನೆಗೆ ವರಿಷ್ಠರಲ್ಲಿ ವಿನಂತಿಸುವುದು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಹಿರಿಯ ಶಾಸಕರ ಮನವಿಗೆ ಬಲ

ಸರ್ಕಾರದಲ್ಲಿ ಹೊಸ ಮುಖಗಳಿಗೆ ಅಥವಾ ಹಿರಿಯ ಶಾಸಕರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಜಯಚಂದ್ರ ಅವರ ಈ ದೆಹಲಿ ಭೇಟಿಯು, ಸಂಪುಟದಲ್ಲಿ ಸ್ಥಾನ ಸಿಗದ ಅತೃಪ್ತ ಅಥವಾ ಆಕಾಂಕ್ಷಿ ಶಾಸಕರ ನಿಯೋಗಕ್ಕೆ ಬಲ ತುಂಬಿದಂತಾಗಿದೆ. ಹೈಕಮಾಂಡ್ ಈ ಮನವಿಗೆ ಹೇಗೆ ಸ್ಪಂದಿಸಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಬೀಡುಬಿಟ್ಟ 30 ಶಾಸಕರು

ಸಂಪುಟ ಪುನರ್‌ರಚನೆಗೆ ಒತ್ತಾಯಿಸಿ ಸುಮಾರು 30ಕ್ಕೂ ಹೆಚ್ಚು ಶಾಸಕರು ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಶೋಕ್ ಪಟ್ಟಣ್, ಪಕ್ಷದ ವರಿಷ್ಠರಿಗೆ ಅವರು ನೀಡಿದ್ದ ಹಳೆಯ ಭರವಸೆಯನ್ನು ನೆನಪಿಸಿದ್ದಾರೆ. ಶಾಸಕರ ದೆಹಲಿ ಭೇಟಿಯ ಬಗ್ಗೆ ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಅಶೋಕ್ ಪಟ್ಟಣ್,”ನಾವಿಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರ ಬಣಗಳಾಗಿ ಬಂದಿಲ್ಲ. ಸುಮಾರು 30 ಶಾಸಕರು ಒಟ್ಟಾಗಿ ಬಂದಿದ್ದೇವೆ. ನಮ್ಮೆಲ್ಲರ ಬೇಡಿಕೆ ಇರುವುದು ಕೇವಲ ಸಂಪುಟ ಪುನರ್‌ರಚನೆಯ ಬಗ್ಗೆ ಮಾತ್ರ. ಇಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ” ಎಂದಿದ್ದಾರೆ.

ಸಂಪುಟ ರಚನೆಯ ಸಂದರ್ಭದಲ್ಲಿ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನೀಡಿದ್ದ ಭರವಸೆಯನ್ನು ಪಟ್ಟಣ್ ನೆನಪಿಸಿದರು. ಸಚಿವರನ್ನು ನೇಮಕ ಮಾಡುವಾಗ ಸುರ್ಜೇವಾಲಾ ಅವರು ಎಲ್ಲರಿಗೂ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈಗಲೂ ಅದೇ ವ್ಯಕ್ತಿಗಳು ನಾಲ್ಕನೇ ಬಾರಿಗೆ ಅದೇ ಸಚಿವ ಸ್ಥಾನಗಳಲ್ಲಿ ಮುಂದುವರಿಯುತ್ತಿದ್ದಾರೆ. ಹೈಕಮಾಂಡ್‌ಗೆ ಆ ಮಾತನ್ನು ನೆನಪಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಖಂಡಿತವಾಗಿಯೂ ನಮಗೆ ಅಸಮಾಧಾನವಿದೆ. ಆದರೆ ನಾವು ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ನಮಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಿ ಎಂದು ಕೇಳುತ್ತಿದ್ದೇವೆ ಅಷ್ಟೆ. ಎಲ್ಲರಿಗೂ ಅಧಿಕಾರ ಹಂಚಿಕೆಯಾಗಬೇಕು ಎಂಬುದು ನಮ್ಮ ನ್ಯಾಯಯುತ ಬೇಡಿಕೆ ಎಂದಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗಿರುವುದರಿಂದ ಹಳೆಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅಥವಾ ಹಿರಿಯ ಆಕಾಂಕ್ಷಿಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಈಗ ದೆಹಲಿ ಅಂಗಳದಲ್ಲಿದೆ. 30 ಶಾಸಕರ ಗುಂಪು ಹೈಕಮಾಂಡ್ ಭೇಟಿಯಾಗಿ ಯಾವ ರೀತಿಯ ತೀರ್ಮಾನ ಹೊರಬೀಳಲಿದೆ ಎಂಬುದು ಈಗ ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರಬಿಂದುವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/tb-jayachandra-pushes-for-cabinet-reshuffle-congress-mlas-camp-in-delhi-to-meet-high-command-450247.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo