
Karnataka
oi-Pragathi S
ಬೆಂಗಳೂರು: ಮುಂಬರುವ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮವನ್ನು ತಮ್ಮ ಕುಟುಂಬದವರೊಂದಿಗೆ ಆಚರಿಸಲು ಊರಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ. ಸಾಲು ಸಾಲು ರಜೆಗಳ ಕಾರಣದಿಂದಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇದ್ದು, ಇದನ್ನು ಸುಗಮವಾಗಿ ನಿಭಾಯಿಸಲು ಹಾಗೂ ಖಾಸಗಿ ಬಸ್ಗಳ ಸುಲಿಗೆಯಿಂದ ಜನಸಾಮಾನ್ಯರನ್ನು ಪಾರು ಮಾಡಲು ಕೆಎಸ್ಆರ್ಟಿಸಿ ಬರೋಬ್ಬರಿ 2000 ಹೆಚ್ಚುವರಿ ವಿಶೇಷ ಬಸ್ಗಳ ಕಾರ್ಯಾಚರಣೆಯನ್ನು ಘೋಷಿಸಿದೆ.
ಮಾರ್ಚ್ 18, 19 ಮತ್ತು 20 ರಂದು ವಿಶೇಷ ಕಾರ್ಯಾಚರಣೆ
ಹಬ್ಬದ ಪ್ರಯುಕ್ತ ಮಾರ್ಚ್ 18, 19 ಹಾಗೂ 20, 2026 ರಂದು ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ಮೂಲೆಗಳಿಗೆ ಹಾಗೂ ನೆರೆ ರಾಜ್ಯಗಳಿಗೆ ಈ 2000 ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಗೋಕರ್ಣ ಸೇರಿದಂತೆ ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಮತ್ತು ಬೀದರ್ ಕಡೆಗೆ ಬಸ್ಗಳು ತೆರಳಲಿವೆ. ಕೇವಲ ರಾಜ್ಯ ಮಾತ್ರವಲ್ಲದೆ, ನೆರೆ ರಾಜ್ಯಗಳ ಪ್ರಮುಖ ನಗರಗಳಾದ ತಿರುಪತಿ, ವಿಜಯವಾಡ ಮತ್ತು ಹೈದರಾಬಾದ್ಗೂ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದಲೂ ಸೌಲಭ್ಯ
ಮೈಸೂರು ಮತ್ತು ಕೊಡಗು ಭಾಗಕ್ಕೆ ತೆರಳುವವರ ಅನುಕೂಲಕ್ಕಾಗಿ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ (ಸ್ಯಾಟಲೈಟ್ ಬಸ್ ನಿಲ್ದಾಣ) ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗವಾಗಿ ವಿಶೇಷ ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಹಬ್ಬ ಮುಗಿದ ಬಳಿಕ ವಾಪಸ್ ಬೆಂಗಳೂರಿಗೆ ಮರಳುವವರಿಗಾಗಿ ಮಾರ್ಚ್ 22, 2026 ರಂದು ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳು ಸಂಚರಿಸಲಿವೆ.
ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ಭಾರಿ ರಿಯಾಯಿತಿ
ಪ್ರಯಾಣಿಕರನ್ನು ಆಕರ್ಷಿಸಲು ಮತ್ತು ಮುಂಗಡ ಬುಕ್ಕಿಂಗ್ ಅನ್ನು ಉತ್ತೇಜಿಸಲು ಕೆಎಸ್ಆರ್ಟಿಸಿ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ. ಅದೇ ರೀತಿ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ, ವಾಪಸ್ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ಪಡೆಯಬಹುದು.
ಟಿಕೆಟ್ ಬುಕ್ಕಿಂಗ್ ಮತ್ತು ಇತರ ಮಾಹಿತಿಗಳು
ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ನಿಗಮದ ಅಧಿಕೃತ ವೆಬ್ಸೈಟ್ ksrtc.karnataka.gov.in ಅಥವಾ ksrtc.in ಮೂಲಕ ಇ-ಟಿಕೆಟ್ ರೂಪದಲ್ಲಿ ಕಾಯ್ದಿರಿಸಬಹುದು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ ನಿಗಮದ ಕೌಂಟರ್ಗಳಲ್ಲೂ ಟಿಕೆಟ್ ಲಭ್ಯವಿದೆ. ಬಸ್ ಹತ್ತುವ ಮುನ್ನ ಟಿಕೆಟ್ನಲ್ಲಿ ನಮೂದಿಸಿರುವ ಬಸ್ ನಿಲ್ದಾಣ ಅಥವಾ ಪಿಕ್ಅಪ್ ಪಾಯಿಂಟ್ ಅನ್ನು ಕಡ್ಡಾಯವಾಗಿ ಗಮನಿಸುವಂತೆ ಕೆಎಸ್ಆರ್ಟಿಸಿ ಮನವಿ ಮಾಡಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದಲೂ ಹೆಚ್ಚುವರಿ ಬಸ್ಗಳನ್ನು ಓಡಿಸಲು ನಿಗಮ ಸಿದ್ಧತೆ ನಡೆಸಿದ್ದು, ಹಬ್ಬದ ಪ್ರಯಾಣವನ್ನು ಸುರಕ್ಷಿತ ಮತ್ತು ಆರಾಮದಾಯಕವಾಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಸಾಲು ಸಾಲು ರಜೆಗಳು ಬಂದಾಗಲೆಲ್ಲಾ ಖಾಸಗಿ ಬಸ್ಗಳು ಪ್ರಯಾಣ ದರವನ್ನು ಏರಿಕೆ ಮಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೆಎಸ್ಆರ್ಟಿಸಿಯ ಈ ಮುನ್ನೆಚ್ಚರಿಕಾ ಕ್ರಮವು ಮಧ್ಯಮ ವರ್ಗದ ಜನರಿಗೆ ದೊಡ್ಡ ರಿಲೀಫ್ ನೀಡಿದೆ. ಕೊನೆ ಕ್ಷಣದ ಗೊಂದಲಗಳನ್ನು ತಪ್ಪಿಸಲು ಪ್ರಯಾಣಿಕರು ಆದಷ್ಟು ಬೇಗ ತಮ್ಮ ಪ್ರಯಾಣದ ಟಿಕೆಟ್ಗಳನ್ನು ಕಾಯ್ದಿರಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 080 2625 2625 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ksrtc-special-buses-for-ugadi-and-ramzan-2026-book-tickets-now-for-2000-extra-buses-and-discounts-447301.html. xn--babytilbehr-pgb.com does not claim ownership of this content. All rights remain with the original publisher.
