
Sports
oi-Madhusudhan KR
Mayank Agarwal: ಹುಬ್ಬಳ್ಳಿಯಲ್ಲಿನ ರಾಜನಗರದಲ್ಲಿರುವ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2026ರ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತೀವ್ರ ಒತ್ತಡದಲ್ಲಿದೆ. ಇನ್ನೂ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಹಿನ್ನೆಲೆ, ಕರ್ನಾಟಕದ ತಂಡಕ್ಕೆ ದೊಡ್ಡ ಸವಾಲು ಎದುರಾಗಿದೆ. ಮೂರನೇ ದಿನದ ಆಟದ ಅಂತ್ಯಕ್ಕೆ ಕರ್ನಾಟಕವು 69 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದೆ. ಅದರಲ್ಲೀ ಮಯಾಂಕ್ ಶತಕ ಸಿಡಿಸಿ ದಾಖಲೆ ಮಾಡಿದ್ದು, ನಾಲ್ಕನೇ ದಿನದಾಟಕ್ಕೆ ಕಾದಿದ್ದಾರೆ.
ಅನುಭವಿಯ ಮಯಾಂಕ್ ಅಗರ್ವಾಲ್ ಅಜೇಯ 130 ರನ್ಗಳೊಂದಿಗೆ ಕ್ರೀಸ್ನಲ್ಲಿದ್ದು, ಪ್ರಸಿದ್ಧ ಕೃಷ್ಣ 27 ರನ್ಗಳೊಂದಿಗೆ ನಾಲ್ಕನೇ ದಿನಕ್ಕೆ ಆಟ ಮುಂದುವರೆಸಲಿದ್ದಾರೆ. ಇನ್ನೂ ಮೂರನೇ ದಿನದ ಆರಂಭದಲ್ಲಿ 6 ವಿಕೆಟ್ಗೆ 527 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಜಮ್ಮು ಕಾಶ್ಮೀರ ತಂಡ, 584 ರನ್ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ದೊಡ್ಡ ಮೊತ್ತ ಕಲೆಹಾಕಿದ ಜೆಕೆ ತಂಡವು ಕರ್ನಾಟಕಕ್ಕೆ ಬೃಹತ್ ಮೊತ್ತದ ಗುರಿ ನೀಡಿತು.

ಕರ್ನಾಟಕಕ್ಕೆ ಆರಂಭದಲ್ಲೇ ಅಘಾತ
ಗುರಿ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಅಘಾತ ಎದುರಾಯಿತು. ಕೆ.ಎಲ್. ರಾಹುಲ್ ಕೇವಲ 13 ರನ್ಗಳಿಗೆ ಔಟಾದರು. ನಂತರ ನಾಯಕ ದೇವದತ್ ಪಡಿಕ್ಕಲ್ 11 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಅನುಭವಿ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಶೂನ್ಯಕ್ಕೆ ಔಟಾಗಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. 17.6 ಓವರ್ಗಳಲ್ಲಿ 57 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಸ್ಥಿತಿಯಲ್ಲಿ ಕರ್ನಾಟಕ ಒತ್ತಡಕ್ಕೆ ಸಿಲುಕಿತ್ತು. ಆಗ ನೆರವಾಗಿ ಕ್ರೀಸ್ನಲ್ಲಿ ಶಾಂತ ರೀತಿಯಲ್ಲೇ ಮಯಾಂಕ್ ಆಟ ಮುಂದುವರೆಸಿ ಶತನ ಸಿಡಿಸಿದರು.
ತಂಡಕ್ಕೆ ಆಸರೆಯಾದ ಮಯಾಂಕ್ ಅಗರ್ವಾಲ್
ಮಯಾಂಕ್ ಅಗರ್ವಾಲ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ತಂಡಕ್ಕೆ ಆಸರೆ ಆದರು. ಇಬ್ಬರೂ ಸೇರಿ ಐದನೇ ವಿಕೆಟ್ಗೆ 105 ರನ್ಗಳ ಅದ್ಭುತ ಜೊತೆಯಾಟ ಆಡಿದರು. ಶ್ರೇಯಸ್ 27 ರನ್ ಗಳಿಸಿ ಔಟಾದರೂ, ಮಯಾಂಕ್ ತಮ್ಮ ಅನುಭವದ ಆಟದಿಂದ ಶತಕ ಪೂರೈಸಿ ತಂಡದ ಹೋರಾಟ ಮುಂದುವರಿಸಿದರು. ದಿನದಾಟ ಮುಗಿಯುವ ವೇಳೆಗೆ ಮಯಾಂಕ್ ಹಾಗೂ ಪ್ರಸಿದ್ಧ ಕೃಷ್ಣ 6ನೇ ವಿಕೆಟ್ಗೆ 58 ರನ್ ಸೇರಿಸಿದ್ದು, ಕರ್ನಾಟಕ ಇನ್ನೂ 364 ರನ್ ಹಿನ್ನಡೆಯಲ್ಲಿದೆ. ನಾಲ್ಕನೇ ದಿನದಾಟದಲ್ಲಿ ರಾಜ್ಯ ತಂಡದ ಹೋರಾಟ ಹೇಗಿರಲಿದೆ ಎಂಬುದೇ ಇದೀಗ ಕುತೂಹಲ ಕೆರಳಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/mayank-agarwal-unbeaten-century-keeps-karnataka-in-the-fight-in-ranji-trophy-2026-final-know-detail-445247.html. xn--babytilbehr-pgb.com does not claim ownership of this content. All rights remain with the original publisher.
