
Karnataka
oi-Shiddalingesh S
ಬೆಂಗಳೂರು: ಮಾಜಿ ಸೈನಿಕರ ಕೋಟಾದ ಅಡಿಯಲ್ಲಿ ನಿವೇಶನ ಕೋರಿ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಅರ್ಜಿ ಬಾಕಿ ಇವೆ ಎಂದು ಪರಿಗಣಿಸಿ ಈ ವರ್ಷಾಂತ್ಯದೊಳಗೆ ಬಡಾವಣೆ ನಿರ್ಮಿಸಿ ನಿವೇಶನ ನೀಡುವ ಗುರಿ ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು. ರಾಜ್ಯಾದ್ಯಂತ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ವಾಸಯೋಗ್ಯ ಜಾಗ ಗುರುತಿಸಿ ಹೊಸ ಬಡಾವಣೆಗಳನ್ನು ನಿರ್ಮಿಸುವ ಮೂಲಕ ನಿವೃತ್ತ ಸೈನಿಕರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ವಿಧಾನಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಹರಿಹರ ತಾಲೂಕು ಶಾಸಕರಾದ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟಾರೆ 338 ಜನ ಮಾಜಿ ಸೈನಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯಾದ್ಯಂತ ಇರುವ ಎಲ್ಲಾ ಅರ್ಹ ಮಾಜಿ ಸೈನಿಕರಿಗೆ ಅರ್ಹತೆ ಆಧಾರದಲ್ಲಿ ನಿವೇಶನ ನೀಡಬೇಕು ಎಂದು ಸರ್ಕಾರವೂ ಘೋಷಿಸಿದೆ. ಆದರೆ, ಈ ಯೋಜನೆಯ ಅನುಷ್ಠಾನಗೊಳಿಸಲು ಸಾಕಷ್ಟು ಜಮೀನಿನ ಅಗತ್ಯವಿದೆ. ವಾಸಯೋಗ್ಯ ಸ್ಥಳವನ್ನು ಗುರುತಿಸಿ ಬಡವಾಣೆ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ 14 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಕನಿಷ್ಠ 350 ನಿವೇಶನಗಳನ್ನು ನಿರ್ಮಿಸಬಹುದು ಎಂದು ಸದನಕ್ಕೆ ಮಾಹಿತಿ ನೀಡಿದರು.

ಬೆರಳ ತುದಿಯಲ್ಲಿ ಮಾಹಿತಿ:
ರಾಜ್ಯದ ಯಾವ ತಾಲೂಕು ಹಾಗೂ ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಮಾಜಿ ಸೈನಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ದಾಖಲೆ ಬೆರಳ ತುದಿಯಲ್ಲಿದೆ. ಈ ಎಲ್ಲಾ ಅರ್ಜಿಗಳನ್ನೂ ಆನ್ಲೈನ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ. ಈ ಹಿಂದೆ ಅರ್ಜಿಗಳ ಸಮಗ್ರ ದಾಖಲೆಗಳು ಲಭ್ಯವಾಗದ ಕಾರಣ, ಯಾವ ತಾಲೂಕಿನಲ್ಲಿ ಎಷ್ಟು ಅರ್ಜಿ ಇದೆ ಎಂದು ತಹಶೀಲ್ದಾರ್ ಗೆ ಪತ್ರ ಬರೆಯಬೇಕಿತ್ತು. ಆದರೆ ಈಗ ಎಲ್ಲಾ ಅರ್ಜಿಗಳನ್ನು ಆನ್ಲೈನ್ ಮೂಲಕ ಡಿಜಿಟಲೀಕರಣಗೊಳಿಸಲಾಗಿದ್ದು, ರಾಜ್ಯದ ಯಾವುದೇ ಭಾಗದ ಮಾಹಿತಿಯನ್ನೂ ತಕ್ಷಣವೇ ಪಡೆಯಬಹುದಾಗಿದೆ. ನಮ್ಮ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ಲಭ್ಯವಿದ್ದು, ವರ್ಷಾಂತ್ಯದೊಳಗೆ ಮಾಜಿ ಸೈನಿಕರಿಗೆ ನಿವೇಶನ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕಲಾಪದ ಮುಖ್ಯಾಂಶಗಳು:
* ವಾಸಯೋಗ್ಯ ಸ್ಥಳ ಗುರುತಿಸಿ ಹೊಸ ಬಡಾವಣೆ ನಿರ್ಮಾಣ
* ಸೈನಿಕರ ಅರ್ಜಿಗಳನ್ನೆಲ್ಲಾ ಆನ್ಲೈನ್ ಮೂಲಕ ಡಿಜಿಟಲೀಕರಣ
* ಅರ್ಹತೆ ಆಧಾರದಲ್ಲಿ ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-government-to-allot-housing-sites-to-ex-servicemen-by-year-end-says-krishna-byre-gowda-446493.html. xn--babytilbehr-pgb.com does not claim ownership of this content. All rights remain with the original publisher.
