
Karnataka
oi-Pragathi S
ಇಂದಿನ ದಿನಗಳಲ್ಲಿ ಶಾಲಾ ಮಕ್ಕಳ ಕೈಯಲ್ಲಿ ಮೊಬೈಲ್, ಲ್ಯಾಪ್ಟಾಪ್ಗಳಿರುವುದು ಸಾಮಾನ್ಯವಾಗಿದೆ. ಆದರೆ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಅತಿಯಾದ ಹಾಗೂ ಅಸುರಕ್ಷಿತ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಮ್ಹಾನ್ಸ್ (NIMHANS) ಸಹಯೋಗದಲ್ಲಿ ಸಮಗ್ರ ಕರಡು ನೀತಿಯೊಂದನ್ನು ಪ್ರಸ್ತಾಪಿಸಿದೆ.
ಪ್ರಸ್ತುತ ಅಂದಾಜು ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ಹೆಚ್ಚಾದ ಇಂಟರ್ನೆಟ್ ಬಳಕೆಯ ಸಮಸ್ಯೆಯ ಲಕ್ಷಣಗಳು ಕಾಣಿಸುತ್ತಿವೆ ಎಂದು ನೀತಿ ಎಚ್ಚರಿಸಿದೆ. ಅತಿ ಹೆಚ್ಚು ಸಮಯದ ಸ್ಕ್ರೀನ್ ಬಳಕೆಯಿಂದಾಗಿ ಮಕ್ಕಳಲ್ಲಿ ಆತಂಕ, ನಿದ್ರಾಹೀನತೆ, ಶೈಕ್ಷಣಿಕ ಹಿನ್ನಡೆ ಹಾಗೂ ಸಾಮಾಜಿಕವಾಗಿ ಒಂಟಿಯಾಗುವಂತಹ ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅಲ್ಲದೆ, ಜಾಲತಾಣಗಳ ಮುಖೇನ ಹೆಚ್ಚುತ್ತಿರುವ ಆನ್ಲೈನ್ ಕಿರುಕುಳ, ಮೋಸ ಮತ್ತು ಆನ್ಲೈನ್ ದುರುಪಯೋಗದಂತಹ ಸೈಬರ್ ಅಪಾಯಗಳು ಕೂಡ ಹೆಚ್ಚಾಗುತ್ತಿರುವುದನ್ನು ಈ ನೀತಿ ಪ್ರಮುಖವಾಗಿ ಒತ್ತಿ ಹೇಳಿದೆ.

ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ ಮತ್ತು ಭಾವನಾತ್ಮಕ ಸ್ಥೈರ್ಯವನ್ನು ಶಾಲಾ ಆಧಾರಿತ ವ್ಯವಸ್ಥೆಯ ಮೂಲಕ ಉತ್ತೇಜಿಸುವುದು ಈ ಕರಡು ನೀತಿಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ, ಸಮಸ್ಯೆಯ ತಡೆಗಟ್ಟುವಿಕೆ, ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗಿದೆ. ಡಿಜಿಟಲ್ ತಿಳುವಳಿಕೆ, ಮಾನಸಿಕ ಆರೋಗ್ಯ ಪ್ರೋತ್ಸಾಹ ಮತ್ತು ಸೈಬರ್ ಸುರಕ್ಷತೆಯನ್ನು ಶಾಲಾ ವ್ಯವಸ್ಥೆಯೊಂದಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಈ ಬೃಹತ್ ಕಾರ್ಯದಲ್ಲಿ ಶಾಲೆಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಸರ್ಕಾರದ ಪಾಲ್ಗೊಳ್ಳುವಿಕೆಯನ್ನು ನೀತಿಯು ಪ್ರಮುಖವಾಗಿ ಸೂಚಿಸುತ್ತದೆ.
ಪ್ರಮುಖ ನೀತಿ ಕ್ರಮಗಳು ಏನಿವೆ?
1. ಕರಡು ನೀತಿಯ ಪ್ರಕಾರ, ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ, ಜೀವನ ಕೌಶಲ್ಯ ಹಾಗೂ ಮಾಹಿತಿ ಸಂವಹನ ತಂತ್ರಜ್ಞಾನವನ್ನು (ICT) ಶಿಕ್ಷಣದ ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ.
2. ಶಾಲಾ ಡಿಜಿಟಲ್ ಬಳಕೆ ನೀತಿಯ ಅಡಿಯಲ್ಲಿ, ದಿನಕ್ಕೆ ಕೇವಲ 1 ಗಂಟೆಯಷ್ಟು ಮಾತ್ರ ಮನರಂಜನಾ ತಂತ್ರಜ್ಞಾನ ಬಳಕೆಗೆ ಸಮಯ ನಿಗದಿಪಡಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಜೊತೆಗೆ ಸೈಬರ್ ಅಪಾಯವನ್ನು ನಿರ್ವಹಿಸುವುದು ಮತ್ತು ಸಲಹಾ ಸೇವೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
3. ವಿದ್ಯಾರ್ಥಿಗಳ ವರ್ತನೆ ಹಾಗೂ ಶೈಕ್ಷಣಿಕ ಸಮಸ್ಯೆಗಳ ಸೂಚನೆಗಳನ್ನು ಆರಂಭದಲ್ಲೇ ಗುರುತಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಅಗತ್ಯವಿದ್ದರೆ ನಿಗದಿತ ಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಕೌನ್ಸೆಲರ್ಗಳು ಹಾಗೂ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯಲು ರೆಫರ್ ಮಾಡಲಾಗುತ್ತದೆ.
4. ನೀತಿಯ ಅನುಷ್ಠಾನ, ಜಾಗೃತಿ ಮತ್ತು ಘಟನೆಗಳ ನಿರ್ವಹಣೆಗಾಗಿ ಶಾಲಾ ಮಟ್ಟದಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ ಸಮಿತಿಗಳನ್ನು ರಚಿಸಲಾಗುತ್ತದೆ.
5. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ನಿಯಮಿತ ಸಂವೇದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
6. ದೈಹಿಕ ಚಟುವಟಿಕೆಗಳು ಮತ್ತು ಹವ್ಯಾಸಗಳನ್ನು ಪ್ರೋತ್ಸಾಹಿಸುವ ಮೂಲಕ “ತಂತ್ರಜ್ಞಾನೇತರ” ಅವಧಿಗಳನ್ನು (ಆಫ್ಲೈನ್ ಚಟುವಟಿಕೆ) ಹೆಚ್ಚಿಸಲಾಗುತ್ತದೆ.
7. ತಂತ್ರಜ್ಞಾನ ಬಳಕೆಯ ಒತ್ತಡವನ್ನು ಅಳೆಯಲು ಮತ್ತು ಮೌಲ್ಯಮಾಪನ ವ್ಯವಸ್ಥೆಗಳಿಗಾಗಿ Tele-MANAS (14416) ಮುಂತಾದ ಸೇವೆಗಳ ಬಳಕೆಗೆ ಒತ್ತು ನೀಡಲಾಗಿದೆ.
ಶಿಕ್ಷಕರು ಮತ್ತು ಪೋಷಕರ ಪಾತ್ರ
ಡಿಜಿಟಲ್ ಡಿಟಾಕ್ಸ್ ಮಾದರಿಯಲ್ಲಿ ಶಿಕ್ಷಕರಿಗೆ ‘ಟ್ರೈನಿಂಗ್ ಆಫ್ ಟ್ರೈನರ್ಸ್’ (ToT) ಮೂಲಕ ತರಬೇತಿ ನೀಡಲಾಗುತ್ತದೆ. ತಂತ್ರಜ್ಞಾನ ವ್ಯಸನದ ಮಾದರಿಗಳನ್ನು ಗುರುತಿಸಲು ಹಾಗೂ ತರಗತಿ ಮಟ್ಟದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಎಚ್ಚರಿಕೆಯಿಂದ ಗಮನಿಸುವ ಜವಾಬ್ದಾರಿ ಹೊಂದಿರುತ್ತಾರೆ.
ಕರ್ನಾಟಕದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಮನೆಯಲ್ಲಿ ತಂತ್ರಜ್ಞಾನ ಬಳಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಪೋಷಕರು ಪ್ರಮುಖ ಹಿತಾಸಕ್ತಿದಾರರಾಗಿದ್ದಾರೆ. ಸ್ಕ್ರೀನ್ ಸಮಯವನ್ನು ನಿಯಂತ್ರಿಸುವುದು, ಮತ್ತು ಕುಟುಂಬದೊಂದಿಗೆ ಬೆರೆಯಲು ಉತ್ತೇಜಿಸುವಂತೆ ಪೋಷಕರಿಗೆ ಮಾರ್ಗದರ್ಶನ ನೀಡಲಾಗುತ್ತದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-draft-policy-guidelines-issued-to-tackle-rising-student-tech-addiction-and-cyber-risks-449117.html. xn--babytilbehr-pgb.com does not claim ownership of this content. All rights remain with the original publisher.
