
Sports
oi-Madhusudhan KR
Vaibhav Suryavanshi: ಸದ್ಯ ಐಪಿಎಲ್ 2026ನೇ ಸೀಸನ್‌ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದ ಮೂಲಕ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು, ವೈಭವ್ ಅವರನ್ನು ಕೂಡಲೇ ಸೀನಿಯರ್ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಆಗ್ರಹಿಸಿದ್ದಾರೆ.
ಕೇವಲ 15 ವರ್ಷದ ಈ ಬಾಲಕ, ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅತಿ ಹೆಚ್ಚು ರನ್ ಗಳಿಸಿದ ಕಾರಣ ವೈಭವ್ ಅವರು, ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ವೈಭವ್ ಅವರ ಈ ಅದ್ಭುತ ಪ್ರದರ್ಶನಕ್ಕೆ ಮನಸೋತ ಅರುಣ್ ಧುಮಾಲ್ ಅವರು ಟ್ವಿಟ್ ಮಾಡಿದ್ದು, “ಸೂರ್ಯವಂಶಿ ಭಾರತದ ಪರವಾಗಿ ಪಾದಾರ್ಪಣೆ ಮಾಡಲು ಅರ್ಹರಾಗಿದ್ದಾರೆ. ಆ ಮೂಲಕ ಅವರು ದೇಶದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ,” ಎಂದು ತಿಳಿಸಿದ್ದಾರೆ.

‘ಟೀಮ್ ಇಂಡಿಯಾ ಪಾದಾರ್ಪಣೆಗೆ ವೈಭವ್ ಅರ್ಹನಿದ್ದಾನೆ’
“ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ಖಂಡಿತವಾಗಿಯೂ ಅವನು ಅರ್ಹನಾಗಿದ್ದಾನೆ,” ಎಂದು ಧುಮಾಲ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅನಿಲ್ ಕುಂಬ್ಳೆ ಹೇಳಿದ್ದೇನು?
ವೈಭವ್ ಸೂರ್ಯವಂಶಿಯನ್ನು ಕೂಡಲೇ ತಂಡಕ್ಕೆ ಸೇರಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅನಿಲ್ ಕುಂಬ್ಳೆ ಅವರು ಧುಮಾಲ್ ಅವರಿಗಿಂತ ಭಿನ್ನವಾದ ಅಭಿಪ್ರಾಯವನ್ನು ಹಂಚಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡಿರುವ ಕುಂಬ್ಳೆ, ಈ ಯುವ ಪ್ರತಿಭೆಯ ಪಯಣದಲ್ಲಿ ಆತುರ ತೋರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವೈಭವ್ ಮೇಲೆ ಒತ್ತಡ ಹೇರಬೇಡಿ?
ಆಟಗಾರನನ್ನು ತಂಡಕ್ಕೆ ತಕ್ಷಣವೇ ಸೇರಿಸಿಕೊಳ್ಳಬೇಕೆ ಅಥವಾ ಹಂತ ಹಂತವಾಗಿ ಬೆಳೆಸಬೇಕೆ ಎಂಬ ಚರ್ಚೆಯ ಕುರಿತು ಮಾತನಾಡಿದ ಕುಂಬ್ಳೆ, “ಬಹುಶಃ ಆಟಗಾರನೇ ಸ್ವತಃ ಆ ಪ್ರಶ್ನೆಗೆ ಉತ್ತರಿಸುತ್ತಾನೆ” ಎಂದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡುವ ಮೂಲಕ ಈ ವಿಷಯವನ್ನು ಸಮರ್ಥಿಸಿಕೊಂಡರು. ಸಚಿನ್ ಅವರು 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮುಂದುವರೆದು ಮಾತನಾಡಿದ ಅವರು, ಆ ಹದಿಹರೆಯದ ಹುಡುಗ “ಸರಿಯಾದ ಹಾದಿಯಲ್ಲೇ ನಡೆಯುತ್ತಿದ್ದಾನೆ. “ಈ ಹಂತದಲ್ಲಿ, ನೀನು ಇನ್ನು ಎರಡು ತಿಂಗಳಲ್ಲಿ ಭಾರತದ ಪರ ಆಡಬೇಕೆಂದು ಹೇಳುವುದು ಆ ಯುವ ಪ್ರತಿಭೆ ಮೇಲೆ ಒಂದು ರೀತಿಯ ಒತ್ತಡ ಹೇರಿದಂತೆ ಆಗುತ್ತದೆ,” ಎಂದು ಅವರು ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/vaibhav-suryavanshi-shines-in-ipl-2026-calls-grow-for-india-debut-amid-mixed-reactions-huge-viral-450219.html. xn--babytilbehr-pgb.com does not claim ownership of this content. All rights remain with the original publisher.
