
Entertainment
oi-Manohara M
ಮಹಾಕುಂಭ ಮೇಳದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ‘ಕುಂಭಮೇಳ ಗರ್ಲ್’ ಹಾಗೂ ನಟಿ ಮೋನಾಲಿಸಾ ಭೋಸಲೆ ಅವರು ಖ್ಯಾತ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯರೊಂದಿಗೆ ನಿರ್ದೇಶಕ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮೋನಾಲಿಸಾ, ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಕಿಡಿಕಾರಿದರು. ಆತ ಒಬ್ಬ ಅತ್ಯಂತ ಅಸಹ್ಯಕರ ವ್ಯಕ್ತಿ. ಚಿತ್ರರಂಗದಲ್ಲಿ ದೊಡ್ಡ ಅವಕಾಶ ಕೊಡಿಸುವುದಾಗಿ ನಂಬಿಸಿ, ಅವರು ಅಪ್ರಾಪ್ತ ಬಾಲಕಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಹೆಸರನ್ನು ಉಲ್ಲೇಖಿಸಲು ನನಗೆ ನಾಚಿಕೆಯಾಗುತ್ತಿದೆ ಎಂದು ಮೋನಾಲಿಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಫರ್ಮನ್ ಖಾನ್ ಅವರನ್ನು ವಿವಾಹವಾಗಿರುವ ಮೋನಾಲಿಸಾ, “ನಮ್ಮ ಅಂತರ್ಧರ್ಮೀಯ ವಿವಾಹವನ್ನು ಅವರು ‘ಲವ್ ಜಿಹಾದ್’ ಎಂದು ಬಿಂಬಿಸುತ್ತಿದ್ದಾರೆ. ನನ್ನ ಪತಿಯನ್ನು ಭಯೋತ್ಪಾದಕ ಎಂದು ಕರೆದು ಸಾರ್ವಜನಿಕರನ್ನು ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ ಮತ್ತು ತಮ್ಮ ಪತಿಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿವೆ. ಸಾರ್ವಜನಿಕವಾಗಿ ತಮ್ಮ ಪೋಸ್ಟರ್‌ಗಳನ್ನು ಸುಡಲಾಗುತ್ತಿದೆ ಎಂದು ತಿಳಿಸಿರುವ ಅವರು, ರಕ್ಷಣೆಗಾಗಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಖಕ್ಕೆ ಹಲವಾರು ಬಾರಿ ಗುದ್ದಿದ್ದರು
ಸನೋಜ್ ಮಿಶ್ರಾ ವಿರುದ್ಧ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿರುವ ಮೊನಾಲಿಸಾ, ಚಿತ್ರೀಕರಣದ ವೇಳೆ ನಿರ್ದೇಶಕರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಮುಖಕ್ಕೆ ಹಲವಾರು ಬಾರಿ ಗುದ್ದಿದ್ದರು ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಚಿತ್ರದ ಸೆಟ್‌ನಲ್ಲಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ನನ್ನ ಮುಖಕ್ಕೆ ಹಲವು ಬಾರಿ ಗುದ್ದಿದ್ದರು. ಆ ಸಮಯದಲ್ಲಿ ನಾನು ಅಪ್ರಾಪ್ತೆಯಾಗಿದ್ದೆ ಎಂದು ಮೋನಾಲಿಸಾ ಹೇಳಿದ್ದಾರೆ. ಈ ಕುರಿತು ಶೀಘ್ರದಲ್ಲೇ ಪೊಲೀಸರಿಗೆ ದೂರು ನೀಡಲಿರುವುದಾಗಿ ಅವರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದಾಗ, ಅವರು ಸಹಾಯ ಮಾಡುವ ಬದಲು ನಿರ್ಲಕ್ಷ್ಯ ತೋರಿದ್ದರು. ಇದು ನಿನ್ನ ಮೊದಲ ಸಿನಿಮಾ, ಹೊಂದಾಣಿಕೆ ಮಾಡಿಕೊ ಎಂದು ಕುಟುಂಬದವರು ಹೇಳಿದ್ದಾಗಿ ಮೊನಾಲಿಸಾ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ವಾರಗಳ ಹಿಂದೆ ಮೊನಾಲಿಸಾ ಅವರು ತಿರುವನಂತಪುರದ ತಂಪನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಕುಟುಂಬದವರು ತಮಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಕಾನೂನುಬದ್ಧವಾಗಿ ತಮಗೆ 18 ವರ್ಷ ತುಂಬಿರುವುದರಿಂದ ಸ್ವತಂತ್ರವಾಗಿ ಬಾಳುವ ಹಕ್ಕಿದೆ ಎಂದು ಪೊಲೀಸರಿಗೆ ತಿಳಿಸಿದ ಮೊನಾಲಿಸಾ, ಕೇರಳದ ಅರುಮನೂರು ನೈನಾರ್ ದೇವಾಲಯದಲ್ಲಿ ಫರ್ಮನ್ ಖಾನ್ ಅವರನ್ನು ವಿವಾಹವಾಗಿದ್ದರು. ಈ ವಿವಾಹಕ್ಕೆ ಕೇರಳದ ಸಚಿವ ವಿ.ಶಿವನ್‌ಕುಟ್ಟಿ ಮತ್ತು ಸಿಪಿಐ(ಎಂ) ನಾಯಕ ಎಂ.ವಿ.ಗೋವಿಂದನ್ ಸಾಕ್ಷಿಯಾಗಿದ್ದರು.
ಮೊನಾಲಿಸಾ ಯಾರು?
2025ರ ಮಹಾಕುಂಭದ ಸಮಯದಲ್ಲಿ ಫೋಟೋಗಳ ಮೂಲಕ ವೈರಲ್ ಆಗಿದ್ದ ಮೋನಾಲಿಸಾ ಅವರನ್ನು ಸನೋಜ್ ಮಿಶ್ರಾ ತಮ್ಮ ‘ದಿ ಡೈರಿ ಆಫ್ ಮಣಿಪುರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅಂದಹಾಗೆ, ಸನೋಜ್ ಮಿಶ್ರಾ ಅವರು ಈ ಹಿಂದೆ 2025ರಲ್ಲಿ ದೆಹಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದರು. ಪ್ರಸ್ತುತ ಈ ವಿವಾದವು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ಉತ್ತರ ಪ್ರದೇಶ ಮತ್ತು ಕೇರಳ ಪೊಲೀಸರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದುನೋಡಬೇಕಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/actress-monalisa-bhosle-accuses-director-sanoj-mishra-of-misconduct-during-shooting-kumh-mela-girl-448297.html. xn--babytilbehr-pgb.com does not claim ownership of this content. All rights remain with the original publisher.
