ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ | Karnataka Budget Debate: R Ashoka Allegations Against CM Siddaramaiah Over Debt Capital Expenditure

Karnataka

oi-Shiddalingesh S

ಕರ್ನಾಟಕ ಬಜೆಟ್ ಕುರಿತ ಚರ್ಚೆ ಸದನದಲ್ಲಿ ತೀವ್ರವಾಗುತ್ತಿದ್ದಂತೆ ರಾಜಕೀಯ ವಾಗ್ವಾದಕ್ಕೂ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಕುರಿತು ನೀಡಿದ ಹೇಳಿಕೆಗಳ ವಿರುದ್ಧ ವಿರೋಧ ಪಕ್ಷ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಸಾಲದ ಬಳಕೆ ಮತ್ತು ಬಂಡವಾಳ ವೆಚ್ಚದ ವಿಚಾರದಲ್ಲಿ ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ, ಸಾಲದ ಪ್ರಮಾಣ ಮತ್ತು ಅದರ ಬಳಕೆಯ ಕುರಿತ ಚರ್ಚೆ ಇದೀಗ ರಾಜಕೀಯವಾಗಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ದಾಖಲೆಯ 17 ಬಜೆಟ್‌ಗಳನ್ನು ಮಂಡಿಸಿರುವ, ಹೈಕಮಾಂಡ್ ಒಪ್ಪಿದರೆ ಇನ್ನೂ 2 ಬಜೆಟ್‌ಗಳನ್ನು ಮಂಡಿಸಲು ಸಿದ್ಧವಿರುವ ಸ್ವಯಂಘೋಷಿತ ಆರ್ಥಿಕ ತಜ್ಞರು, ಬಜೆಟ್ ಬೃಹಸ್ಪತಿಗಳಾದ ಸಿದ್ದರಾಮಯ್ಯನವರಿಗೆ “ಬಂಡವಾಳ ವೆಚ್ಚ” ಮತ್ತು “ಉತ್ಪಾದಕ ಆಸ್ತಿ ಸೃಜನೆ” ಬಗ್ಗೆ ಪಾಠ ಹೇಳಬೇಕಾದ ಶೋಚನೀಯ ಪರಿಸ್ಥಿತಿ ಬಂದಿರುವುದು ವಿಷಾದಕರ.

Karnataka Budget Debate

ಸಿಎಂ ಸಿದ್ದರಾಮಯ್ಯನವರೇ,

ಸಾಲ ಮಾಡುವುದು ತಪ್ಪಲ್ಲ. ಆದರೆ ಆ ಸಾಲವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಲದ ದೊಡ್ಡ ಭಾಗ ಬಂಡವಾಳ ವೆಚ್ಚಕ್ಕೆ (Capital Expenditure) ಹೋಗುತ್ತಿದೆ. ಇಂದು ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ ಸುಮಾರು ₹12.2 ಲಕ್ಷ ಕೋಟಿ, ಅಂದರೆ GDP ಯ ಸುಮಾರು 3.1%, ಮತ್ತು ಒಟ್ಟು ಸರ್ಕಾರಿ ವೆಚ್ಚದ ಸುಮಾರು 22-23%.
ಅಂದರೆ ಕೇಂದ್ರ ಸರ್ಕಾರ ತಾನು ಮಾಡಿದ ಸಾಲವನ್ನು ಮುಖ್ಯವಾಗಿ ರಸ್ತೆಗಳು, ರೈಲು ಮಾರ್ಗಗಳು, ಮೂಲಸೌಕರ್ಯ ಹಾಗೂ ದೀರ್ಘಕಾಲಿಕ ಆರ್ಥಿಕ ಸಾಮರ್ಥ್ಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರದ ಅಂಕಿ ಅಂಶ

ಆದರೆ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಂಕಿ ಅಂಶಗಳು ರಾಜ್ಯವನ್ನು ಬೆಚ್ಚಿಬೀಳಿಸುವಂತಿವೆ. ತಾವು ಮಂಡಿಸಿದ 2026-27ರ ಕರ್ನಾಟಕ ರಾಜ್ಯ ಬಜೆಟ್‌ನ ಒಟ್ಟು ಗಾತ್ರ ₹4.48 ಲಕ್ಷ ಕೋಟಿ ಇದ್ದರೂ, ಅದರಲ್ಲಿ ಬಂಡವಾಳ ವೆಚ್ಚ ಕೇವಲ ₹74,682 ಕೋಟಿ ಮಾತ್ರ. ಅಂದರೆ ಇದು ಒಟ್ಟು ವೆಚ್ಚದ ಸುಮಾರು 16-17% ಮಾತ್ರ, ಮತ್ತು GSDP ಯ ಕೇವಲ 2.2-2.5%. ಇದರ ಜೊತೆಗೆ ರಾಜ್ಯದ ಒಟ್ಟು ಸಾಲ ಈಗಾಗಲೇ ₹8.24 ಲಕ್ಷ ಕೋಟಿ (GSDP ಯ ಸರಿಸುಮಾರು 25%) ಮುಟ್ಟಿದೆ. ಈ ವರ್ಷ ಒಂದರಲ್ಲೇ ₹1.32 ಲಕ್ಷ ಕೋಟಿ ಹೊಸ ಸಾಲ ತೆಗೆದುಕೊಳ್ಳಲಾಗುತ್ತಿದೆ.

ಇನ್ನೂ ಮುಖ್ಯವಾಗಿ, ₹22,957 ಕೋಟಿ ರಾಜಸ್ವ ಕೊರತೆ ಇದೆ. ರಾಜಸ್ವ ಕೊರತೆ ಎಂದರೆ ರಾಜ್ಯ ಸರ್ಕಾರ ತನ್ನ ದಿನನಿತ್ಯದ ಆಡಳಿತಾತ್ಮಕ ಖರ್ಚುಗಳನ್ನು ಪೂರೈಸಲು ಕೂಡ ಸಾಲ ತೆಗೆದುಕೊಳ್ಳಬೇಕಾಗಿರುವುದು. ಅಂದರೆ ಸಾಲದ ಒಂದು ದೊಡ್ಡ ಭಾಗ ಮೂಲಸೌಕರ್ಯ ನಿರ್ಮಾಣಕ್ಕೆ ಅಲ್ಲ, ದಿನನಿತ್ಯದ ವೆಚ್ಚಗಳಿಗೆ ಹೋಗುತ್ತಿದೆ ಎಂಬುದೇ ಅರ್ಥ, ಹೀಗಾಗಿ ವ್ಯತ್ಯಾಸ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸಾಲ ತೆಗೆದುಕೊಂಡು ಉತ್ಪಾದಕ ಆಸ್ತಿಗಳನ್ನು ನಿರ್ಮಿಸುತ್ತದೆ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಸಾಲದ ಒಂದು ದೊಡ್ಡ ಭಾಗ

ಆದರೆ ನಿಮ್ಮ ಸರ್ಕಾರದ ಬಜೆಟ್ ನೋಡಿದರೆ, ಸಾಲದ ಒಂದು ದೊಡ್ಡ ಭಾಗ ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ ಹೋಗುತ್ತಿದೆ. ಹೀಗಾಗಿ ಪ್ರಶ್ನೆ ಇರುವುದು ಸಾಲದ ಪ್ರಮಾಣದ ಬಗ್ಗೆ ಅಲ್ಲ. ಸಾಲದ ಬಳಕೆಯ ಗುಣಮಟ್ಟದ ಬಗ್ಗೆ. ತೆಗೆದುಕೊಂಡ ಸಾಲ ಯಾವುದಕ್ಕೆ ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ. ಮೂಲಸೌಕರ್ಯ ನಿರ್ಮಿಸಲು ಮಾಡಿದ ಸಾಲವು ಭವಿಷ್ಯದ ಆರ್ಥಿಕ ಶಕ್ತಿಯನ್ನು ನಿರ್ಮಿಸುತ್ತದೆ. ದಿನನಿತ್ಯದ ವೆಚ್ಚಗಳಿಗೆ ತೆಗೆದ ಸಾಲವು ಕನ್ನಡಿಗರ ಸಾಲದ ಭಾರವನ್ನು ಮಾತ್ರ ಹೆಚ್ಚಿಸುತ್ತದೆ.

ಸಿದ್ದರಾಮಯ್ಯನವರೇ, 17 ಬಜೆಟ್ ಮಂಡಿಸಿರುವ ತಮಗೆ ಇವೆಲ್ಲ ತಿಳಿದಿಲ್ಲ ಅಂತೇನೂ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ, ಇದರ ದುಷ್ಪರಿಣಾಮಗಳೇನು ಎನ್ನುವುದು ಎಲ್ಲರಿಗಿಂತ ತಮಗೇ ಚೆನ್ನಾಗಿ ಗೊತ್ತಿದೆ. ಆದರೆ ಕುರ್ಚಿಗೆ ಅಂಟಿಕೊಂಡು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೀರಲ್ಲ, ಇದು ನಿಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದುರಂತ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-debate-r-ashoka-allegations-against-cm-siddaramaiah-over-debt-capital-expenditure-448285.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo