ಸಬ್ಸಿಡಿ ಬೇಕಾ? ಬೇಡವಾ? ಕನ್ನಡ ಚಿತ್ರರಂಗದಲ್ಲಿ ಬಿಸಿಬಿಸಿ ಚರ್ಚೆ – ಚೇತನ್ ನಾಡಿಗೇರ್ ಬರಹ | Kannada Film Industry Subsidy Debate: Will Govt Stop The 10 Lakh Aid? Written By Chethan Nadiger

Karnataka

oi-Pragathi S

ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಗುಣಮಟ್ಟದ ಚಿತ್ರಗಳಿಗೆ ಪ್ರತೀ ವರ್ಷ ಸರ್ಕಾರ ನೀಡುವ 10 ಲಕ್ಷ ರೂ. ಸಬ್ಸಿಡಿ ಕುರಿತು ಮತ್ತೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರು ಸಹ ಸಬ್ಸಿಡಿ ಬೇಕೇ ಬೇಕು ಎಂದು ಕೆಲವು ಸಂದರ್ಶನಗಳಲ್ಲಿ ಒತ್ತಿ ಹೇಳುತ್ತಲೇ ಬಂದಿದ್ದಾರೆ.

ಇಷ್ಟಕ್ಕೂ ಸಬ್ಸಿಡಿಯ ಕುರಿತು ಈಗೇಕೆ ಇಷ್ಟೊಂದು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಕಳೆದ ಕೆಲವು ವರ್ಷಗಳಿಂದ (2021ರ ನಂತರ) ಸಬ್ಸಿಡಿ ಕೊಟ್ಟಿಲ್ಲದಿದ್ದರೂ, ಸಬ್ಸಿಡಿ ಕೊಡುವುದಿಲ್ಲ ಎಂದು ಸರ್ಕಾರವೇನೂ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.

Kannada Film Industry

ಚಿತ್ರರಂಗದಲ್ಲಿ ಈ ಬಗ್ಗೆ ಇಷ್ಟೊಂದು ಆತಂಕ ಮತ್ತು ಚರ್ಚೆ ಯಾಕೆ?

ಉತ್ತರವಿರೋದೇ ಇಲ್ಲಿ. ಸರ್ಕಾರವೇನೂ ಸಬ್ಸಿಡಿ ಕೊಡುವುದಿಲ್ಲ ಎಂದು ಹೇಳಿಲ್ಲ; ಆದರೆ, “ಯಾಕೆ ಕೊಡಬೇಕು?” ಎಂಬ ಪ್ರಶ್ನೆ ಸರ್ಕಾರದ ವಲಯದಲ್ಲಿ ಎದ್ದಿದೆ. ಆರ್ಥಿಕ ಹೊರೆಯ ದೃಷ್ಟಿಯಿಂದ ಅದನ್ನು ನಿಲ್ಲಿಸಿದರೆ ಹೇಗೆ ಎಂಬ ಚರ್ಚೆಯೂ ಆಂತರಿಕವಾಗಿ ಶುರುವಾಗಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ಚಿತ್ರರಂಗದವರಿಗೆ ಸಹಜವಾಗಿಯೇ ಟೆನ್ಶನ್‍ ಶುರುವಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಯವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ, 2022ನೇ ಕ್ಯಾಲೆಂಡರ್‍ ವರ್ಷದಿಂದ ಸಹಾಯಧನಕ್ಕಾಗಿ ಆಯ್ಕೆ ಮಾಡುವ ಚಲನಚಿತ್ರಗಳ ಸಂಖ್ಯೆಯನ್ನು ಗರಿಷ್ಠ 200ರಿಂದ 125ಕ್ಕೆ ಸೀಮಿತಗೊಳಿಸಿ, ಚಿತ್ರಗಳ ಸಂಖ್ಯೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಿ ಆದೇಶ ಹೊರಡಿಸಲಾಗಿದೆ. ಮುಂದುವರೆದು, ಆರ್ಥಿಕ ಇಲಾಖೆಯು ಗುಣಾತ್ಮಕ ಚಿತ್ರಗಳಿಗೆ ನೀಡಲಾಗುವ ಈ ಸಹಾಯಧನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಕುರಿತು ಸಾಧಕ – ಬಾಧಕಗಳನ್ನು ಚರ್ಚಿಸಿ ವರದಿ ಸಲ್ಲಿಸುವಂತೆ ಆಯುಕ್ತರ ಅಭಿಪ್ರಾಯವನ್ನು ಕೋರಿದೆ.

ಯಾವಾಗ ಇಂಥದ್ದೊಂದು ಪತ್ರ ಸರ್ಕಾರದ ವಲಯದಲ್ಲಿ ಹರಿದಾಡಿತೋ, ಚಿತ್ರರಂಗದಲ್ಲೂ ಭೀತಿ ಶುರುವಾಗಿದೆ. 200ರಿಂದ 125 ಚಿತ್ರಗಳಿಗೆ ಸಬ್ಸಿಡಿ ಇಳಿಸುವುದು ಒಂದು ಕಡೆಯಾದರೆ, ಸರ್ಕಾರ ಎಲ್ಲಿ ಈ 10 ಲಕ್ಷ ರೂ. ಸಬ್ಸಿಡಿಯನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತದೋ ಎಂಬ ಭಯ ಬೇರೂರಿದೆ. ಹಾಗಾಗಿ, ಸರ್ಕಾರ ಯಾವುದೇ ಕಾರಣಕ್ಕೂ ಸಬ್ಸಿಡಿಯನ್ನು ನಿಲ್ಲಿಸಬಾರದು, ಅದನ್ನು ಮುಂದುವರೆಸಬೇಕು ಎಂಬ ನಿಟ್ಟಿನಲ್ಲಿ ಡಾ. ಜಯಮಾಲಾ ಅವರು ಮಾತನಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ 1960ರ ದಶಕದಲ್ಲಿಯೇ ಸಬ್ಸಿಡಿಯನ್ನು ಘೋಷಿಸಲಾಯಿತು. ಸರ್ಕಾರವೇನೋ ಅಂದು ಒಂದೊಳ್ಳೆಯ ಉದ್ದೇಶ ಮತ್ತು ಆಶಯದಿಂದ ಇಂಥದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿತು. ಕ್ರಮೇಣ ಸಬ್ಸಿಡಿಯ ಮೊತ್ತವನ್ನಷ್ಟೇ ಅಲ್ಲದೆ, ಸಬ್ಸಿಡಿ ಕೊಡುವ ಚಿತ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ನಂತರದಲ್ಲಿ ಬಂದ ಸರ್ಕಾರಗಳು ಆ ಸಂಖ್ಯೆಯನ್ನು ಏರಿಸುತ್ತಲೇ ಹೋದವು. 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಬ್ಸಿಡಿ ಚಿತ್ರಗಳ ಸಂಖ್ಯೆಯನ್ನು ವರ್ಷಕ್ಕೆ 125ರಿಂದ 200ರವರೆಗೂ ಏರಿಸಿದ್ದರು. ಆದರೆ, ಈಗಿನ ಸರ್ಕಾರವು ಅದನ್ನು ಪುನಃ ಮೊದಲಿನಂತೆ 125 ಚಿತ್ರಗಳಿಗೆ ವಾಪಸ್ ಇಳಿಸಿದೆ.

ಸಬ್ಸಿಡಿಯಿಂದಾಗಿ ನಿರ್ಮಾಣವಾಗುವ ಚಿತ್ರಗಳ ಸಂಖ್ಯೆ ಗಣನೀಯವಾಗೇನೋ ಏರಿಕೆಯಾಗಿದೆ. ಆದರೆ, ಗುಣಮಟ್ಟದ ವಿಷಯದಲ್ಲಿ ಇದೇ ಮಾತನ್ನು ಹೇಳುವುದು ಬಹಳ ಕಷ್ಟ. ಎಷ್ಟೋ ಚಿತ್ರಗಳು ಕೇವಲ 10 ಲಕ್ಷ ರೂ. ಸಬ್ಸಿಡಿ ಪಡೆಯುವುದಕ್ಕಾಗಿಯೇ ನಿರ್ಮಾಣವಾದ ಉದಾಹರಣೆಗಳು ಕಣ್ಣ ಮುಂದಿವೆ. ಅಂತಹ ಚಿತ್ರಗಳನ್ನು ಸಬ್ಸಿಡಿ ಸಮಿತಿಯವರು ನೋಡುವುದು ಬಿಟ್ಟರೆ, ಬೇರೆ ಯಾರೂ ನೋಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಏಕೆಂದರೆ, ಆ ಬಹುಪಾಲು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದೇ ಇಲ್ಲ. ಇನ್ನೊಂದು ಕಡೆ, ಸಬ್ಸಿಡಿ ಕೊಡಿಸುವುದಕ್ಕೆ ಮತ್ತು ಪಡೆಯುವುದಕ್ಕೆ ಸಿಕ್ಕಾಪಟ್ಟೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿಬರುತ್ತಿವೆ. ಹಾಗಾಗಿ, ಸಬ್ಸಿಡಿ ನಿಲ್ಲಿಸುವುದೇ ಒಳ್ಳೆಯದು ಎಂಬ ಮಾತುಗಳೂ ಗಟ್ಟಿಯಾಗಿವೆ.

ಇನ್ನು, 2019ರಿಂದ ಸಬ್ಸಿಡಿಯನ್ನು ನೀಡಿರಲಿಲ್ಲ. 2024ರಲ್ಲಿ ಸರ್ಕಾರವು 2019, 2020 ಮತ್ತು 2021ನೇ ಸಾಲಿಗೆ ಆಯ್ಕೆ ಸಮಿತಿಗಳನ್ನು ರಚಿಸಿತ್ತು. ಆ ಆಯ್ಕೆ ಸಮಿತಿಗಳು ಚಿತ್ರಗಳನ್ನು ನೋಡಿ, ಕಳೆದ ವರ್ಷವೇ ತಮ್ಮ ಕೆಲಸವನ್ನು ಮುಗಿಸಿವೆ. ಈ ಪೈಕಿ ಬಹಳಷ್ಟು ಚಿತ್ರಗಳಿಗೆ ಈಗಾಗಲೇ ದುಡ್ಡು ಕೊಟ್ಟಾಗಿದೆಯಂತೆ. ಚಿತ್ರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆಯಾದರೂ, ವಿಚಿತ್ರವೆಂದರೆ ಆಯ್ಕೆ ಸಮಿತಿ ಸದಸ್ಯರುಗಳಿಗೇ ತಾಂತ್ರಿಕ ಸಮಸ್ಯೆಗಳಿಂದಾಗಿ ಇನ್ನೂ ದುಡ್ಡು ಮುಟ್ಟಿಲ್ಲ. ಮೂರೂ ವರ್ಷಗಳ ಆಯ್ಕೆ ಸಮಿತಿ ಸದಸ್ಯರು ತಮ್ಮ ಸ್ವಂತ ಕೈಯಿಂದ ಖರ್ಚು ಮಾಡಿ ಚಿತ್ರಗಳನ್ನು ನೋಡಿದ್ದಾರೆ. ಒಂದೊಂದು ಸಮಿತಿಯ ಸದಸ್ಯರು 150ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ ಉದಾಹರಣೆಗಳಿವೆ. ಆದರೆ, ಅವರ ಶ್ರಮ, ಸಮಯ, ಸಂಯಮಕ್ಕೆ ಇನ್ನೂ ತಲುಪಬೇಕಾದ ಸಂಭಾವನೆ ತಲುಪಿಲ್ಲ ಎಂಬ ಅಸಮಾಧಾನವಿದೆ.

ಒಟ್ಟಿನಲ್ಲಿ ಸಬ್ಸಿಡಿ ವಿಚಾರವಾಗಿ ಚಿತ್ರರಂಗದಲ್ಲಿ ಬೇರೆಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಕನ್ನಡ ಚಿತ್ರರಂಗದ ಇವತ್ತಿನ ದುಸ್ಥಿತಿಗೆ, ಸರ್ಕಾರ ಕೊಡುವ ಈ ಸಬ್ಸಿಡಿಯೇ ಕಾರಣ, ಅದನ್ನು ಮೊದಲು ನಿಲ್ಲಿಸಬೇಕು ಎಂಬುದು ಹಲವರ ಸ್ಪಷ್ಟ ಅಭಿಪ್ರಾಯ. ಸರ್ಕಾರವು ಸಬ್ಸಿಡಿಯನ್ನೇ ಕೊಡುವುದನ್ನು ನಿಲ್ಲಿಸಿದರೆ, ಆಗ ಬೇಕಾಬಿಟ್ಟಿ ಕಳಪೆ ಚಿತ್ರಗಳು ನಿರ್ಮಾಣವಾಗುವುದು ತಪ್ಪುತ್ತದೆ ಮತ್ತು ಇದರಿಂದ ಚಿತ್ರರಂಗದ ಪರಿಸ್ಥಿತಿ ತಾನಾಗಿಯೇ ಸರಿಹೋಗಬಹುದು ಎಂಬ ವಾದ ಕೇಳಿಬರುತ್ತಿದೆ.

ಒಂದು ವಲಯವು “ಸಬ್ಸಿಡಿ ಕೊಡುವ ಬದಲು, ಚಿತ್ರರಂಗಕ್ಕೆ ಅತ್ಯಗತ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸಬೇಕು, ಚಿತ್ರರಂಗವನ್ನು ಒಂದು ಉದ್ಯಮವಾಗಿ ಪರಿಗಣಿಸಬೇಕು ಮತ್ತು ಉದ್ಯಮಕ್ಕೆ ಸಲ್ಲುವ ಕೆಲವು ಸೌಲಭ್ಯಗಳನ್ನು ಚಿತ್ರರಂಗಕ್ಕೂ ವಿಸ್ತರಿಸಬೇಕು” ಎನ್ನುತ್ತಿದೆ. ಇನ್ನೊಂದು ವಲಯವು, “ಚಿತ್ರರಂಗವು ಕಲೆ ಮತ್ತು ವಾಣಿಜ್ಯದ ಸಂಗಮವಾದ್ದರಿಂದ ಅದನ್ನು ಕಲೋದ್ಯಮವೆಂದು ಪರಿಗಣಿಸಿ, ಉದ್ಯಮದ ಸ್ಥಾನಮಾನ ನೀಡುವುದರ ಜೊತೆಗೆ ಕಡಿಮೆ ಸಂಖ್ಯೆಯ ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡುವುದನ್ನು ಮುಂದುವರೆಸಬೇಕು” ಎನ್ನುತ್ತಿದೆ. ಮತ್ತೊಂದು ವಲಯವು, “ಸರ್ಕಾರ ಸಬ್ಸಿಡಿ ಕೊಡುವುದನ್ನು ಮುಂದುವರೆಸುವುದಷ್ಟೇ ಅಲ್ಲ, ಬಿಡುಗಡೆಯಾಗುವ ಎಲ್ಲಾ ಚಿತ್ರಗಳಿಗೂ ಸಬ್ಸಿಡಿ ಕೊಡುವಂತಾಗಬೇಕು” ಎಂದು ವಾದಿಸುತ್ತಿದೆ. ಇನ್ನೊಂದೆಡೆ “ಒಂದು ಪಕ್ಷ ಸಬ್ಸಿಡಿ ನಿಲ್ಲಿಸಿದರೆ, ಚಿತ್ರರಂಗ ಬಾಗಿಲು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂಬ ಆತಂಕವೂ ಇದೆ.

ಒಟ್ಟಾರೆ, ಸಬ್ಸಿಡಿ ವಿಚಾರವಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗಳಾಗುತ್ತಿವೆ. ಈ ಕುರಿತು ಸರ್ಕಾರದ ಅಂತಿಮ ನಿಲುವೇನು? ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ? ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/kannada-film-industry-subsidy-debate-will-govt-stop-the-10-lakh-aid-written-by-chethan-nadiger-443385.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo