ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್‌ ವಿವಾದದ ಬೆನ್ನಲ್ಲೇ ಫಿಲ್ಮ್‌ ಚೇಂಬರ್‌ಗೆ ಮಹಿಳಾ ಆಯೋಗ ಪತ್ರ | Karnataka State Commission for Women Writes to KFCC Over Prem KD Movie Seraga Sarse Song Row

Entertainment

oi-Manohara M

ಬೆಂಗಳೂರು: ಜೋಗಿ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದ ಸರಗೆ ಸರ್ಸೆ ಹಾಡು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಂತಹ ಅಶ್ಲೀಲ ಸಾಹಿತ್ಯ ಬಳಸಬಾರದಿತ್ತು ಎಂಬ ಖಂಡನೆಯೂ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮಹತ್ವದ ಹೆಜ್ಜೆ ಇಟ್ಟಿದೆ. ಕನ್ನಡ ಚಿತ್ರರಂಗದ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಮಹಿಳೆಯರ ಘನತೆಗೆ ಕುಂದು ತರುವಂತಹ ಅಶ್ಲೀಲ ಸಾಹಿತ್ಯ ಹಾಗೂ ಸಂಭಾಷಣೆಗಳ ಬಳಕೆಯಾಗುತ್ತಿರುವುದಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ಅಧಿಕೃತ ಪತ್ರ ಬರೆದಿದ್ದಾರೆ.

‘ಕೆಡಿ’ ಚಿತ್ರದ ಹಾಡಿನ ಬಗ್ಗೆ ಆಕ್ಷೇಪ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ “ಕೆಡಿ-ದ ಡೆವಿಲ್” ಚಿತ್ರದ ‘ಸೆರಗೆ ಸರ್ಸೆ…’ ಎಂಬ ಹಾಡಿನ ಸಾಹಿತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ತೀವ್ರ ವಿರೋಧವನ್ನು ಆಯೋಗವು ಪತ್ರದಲ್ಲಿ ಪ್ರಸ್ತಾಪಿಸಿದೆ. ಇಂತಹ ಸಾಹಿತ್ಯವು ಕೇವಲ ಅಶ್ಲೀಲತೆಯಿಂದ ಕೂಡಿದ್ದಲ್ಲದೆ, ಸಮಾಜದಲ್ಲಿ ಮಹಿಳೆಯರ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಸಿನಿಮಾ ಎಂಬುದು ಸಮಾಜದ ಮೇಲೆ ಬಲವಾದ ಪ್ರಭಾವ ಬೀರುವ ಮಾಧ್ಯಮವಾಗಿದೆ. ಇಂತಹ ಪ್ರಚೋದನಾಕಾರಿ ಸಾಹಿತ್ಯವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಮೇಲೆ ಪುಂಡಾಟಿಕೆ ಅಥವಾ ಚುಡಾಯಿಸಲು ಪ್ರೇರಣೆ ನೀಡುವ ಸಾಧ್ಯತೆಯಿದೆ ಎಂದು ಆಯೋಗ ಎಚ್ಚರಿಸಿದೆ.

Karnataka State Commission for Women

ಅಶ್ಲೀಲ ಹಾಡುಗಳನ್ನು ನಿರ್ಬಂಧಿಸಿ

ಮಹಿಳಾ ಗೌರವಕ್ಕೆ ಧಕ್ಕೆ ತರದಂತಹ ಸಾಹಿತ್ಯ ಮತ್ತು ಸಂಭಾಷಣೆಗಳನ್ನು ಬಳಸುವಂತೆ ಚಿತ್ರತಂಡಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತು ಕೆಲಸ ಮಾಡುವ ಇಂತಹ ಚಿತ್ರತಂಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಹಾಡುಗಳ ವಿರುದ್ಧ ನಿರ್ಬಂಧ ಹೇರಬೇಕು ಎಂದು ನಾಗಲಕ್ಷ್ಮಿ ಚೌಧರಿ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಏನಿದು ವಿವಾದ?

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ: ದ ಡೆವಿಲ್’ ಸಿನಿಮಾದ ‘ಸೆರಗ ಸರ್ಸೆ..’ ಹಾಡು ಸದ್ಯ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಈ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣವು ಅತ್ಯಂತ ಅಶ್ಲೀಲತೆಯಿಂದ ಕೂಡಿದೆ ಎಂಬುದು ಸಾರ್ವಜನಿಕರ ಪ್ರಮುಖ ಆರೋಪ. ಹಾಡಿನಲ್ಲಿ ಬಳಸಿರುವ ಕೆಲವು ಪದಗಳು ಡಬಲ್‌ ಮೀನಿಂಗ್‌ನಿಂದ ಕೂಡಿದ್ದು, ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡಿನ ನೃತ್ಯ ಸಂಯೋಜನೆಯೂ ಕೂಡ ಆಕ್ಷೇಪಾರ್ಹವಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಈ ಸಂಬಂಧ ಈಗಾಗಲೇ ವಕೀಲ ವಿನೀತ್ ಜಿಂದಾಲ್ ಎಂಬುವವರು ದೆಹಲಿ ಪೊಲೀಸ್ ಸೈಬರ್ ಸೆಲ್‌ಗೆ ದೂರು ನೀಡಿದ್ದು, ಹಾಡಿನಲ್ಲಿ ಲೈಂಗಿಕ ಪ್ರಚೋದಕ ಅಂಶಗಳಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಈ ಸಂಬಂಧ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ಸಾರ್ವಜನಿಕ ಒತ್ತಡ ಮತ್ತು ಕಾನೂನು ಕ್ರಮಗಳ ಭೀತಿಯಿಂದಾಗಿ, ಈ ಹಾಡಿನ ಹಿಂದಿ ಆವೃತ್ತಿಯನ್ನು ಈಗಾಗಲೇ ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಕನ್ನಡ ಆವೃತ್ತಿಯ ಬಗ್ಗೆಯೂ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಚಿತ್ರತಂಡವು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ. ಇಲ್ಲಿವರೆಗೆ ಈ ವಿವಾದದ ಬಗ್ಗೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/karnataka-state-commission-for-women-writes-to-kfcc-over-prem-kd-movie-seraga-sarse-song-row-447461.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo