ಸಿನಿಮಾ ಚಿತ್ರೀಕರಣ ಅನುಮತಿಗೆ “ಸಿನಿ ಮಿತ್ರ” ಆನ್‌ಲೈನ್‌ ವ್ಯವಸ್ಥೆ, ಪುಟ್ಟಣ್ಣ ಕಣಗಾಲ್ ಸ್ಮಾರಕ: ಸ್ಯಾಂಡಲ್‌ವುಡ್‌ಗೆ ಬಜೆಟ್‌ನಲ್ಲ | Cine Mitra Portal Mysuru Film City Puttanna Kanagal Memorial What Karnataka Budget Offers Sandalwood

Entertainment

oi-Manohara M

ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆಗಳಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಸರ್ಕಾರವು, 2026-27ನೇ ಸಾಲಿನ ಬಜೆಟ್‌ನಲ್ಲಿ ಸಿನಿಮೋದ್ಯಮಕ್ಕೆ ಹೊಸ ಚೈತನ್ಯ ನೀಡುವ ಯೋಜನೆಗಳನ್ನು ಪ್ರಕಟಿಸಿದೆ. ಚಿತ್ರೀಕರಣಕ್ಕೆ ಏಕಗವಾಕ್ಷಿ ಅನುಮತಿಯಿಂದ ಹಿಡಿದು ಬಾಕಿ ಇರುವ ಸಹಾಯಧನ ಬಿಡುಗಡೆಯವರೆಗೆ ಹಲವು ಪ್ರಮುಖ ನಿರ್ಧಾರಗಳನ್ನು ಬಜೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ.

‘ಸಿನಿ ಮಿತ್ರ’ ಏಕಗವಾಕ್ಷಿ ಡಿಜಿಟಲ್‌ ವ್ಯವಸ್ಥೆ

ರಾಜ್ಯದಲ್ಲಿ ಸಿನಿಮಾ ಹಾಗೂ ಇತರೆ ಚಿತ್ರೀಕರಣಗಳಿಗೆ ವಿವಿಧ ಇಲಾಖೆಗಳ ಅನುಮತಿಗಳನ್ನು ಪಡೆಯಲು ನಿರ್ಮಾಪಕರು ಮತ್ತು ಚಿತ್ರತಂಡಗಳು ಹಲವು ಕಚೇರಿಗಳಿಗೆ ತೆರಳಬೇಕಾಗುವ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ ‘ಸಿನಿ ಮಿತ್ರ’ (Cine Mitra) ಎಂಬ ಆನ್‌ಲೈನ್‌ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಬಜೆಟ್‌ ಮಂಡನೆ ವೇಳೆ ಹೇಳಿದರು.

Cine Mitra

ಈ ವ್ಯವಸ್ಥೆಯ ಮೂಲಕ ಪೊಲೀಸ್‌, ಪ್ರವಾಸೋದ್ಯಮ, ಅರಣ್ಯ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ಡಿಜಿಟಲ್‌ ವೇದಿಕೆಯಲ್ಲಿ ಪಡೆಯುವ ಅವಕಾಶ ಸಿಗಲಿದೆ. ಇದರಿಂದ ಚಿತ್ರೀಕರಣ ಪ್ರಕ್ರಿಯೆ ಸುಗಮವಾಗುವ ಜೊತೆಗೆ ಸಮಯ ಮತ್ತು ವೆಚ್ಚವೂ ಕಡಿಮೆಯಾಗಲಿದೆ.

‘ಕರ್ನಾಟಕ ಫಿಲ್ಮ್ ಲೊಕೇಷನ್ ಡಿಜಿಟಲ್ ಮ್ಯಾಪ್’

ರಾಜ್ಯದಲ್ಲಿ ಚಿತ್ರೀಕರಣಕ್ಕೆ ಸೂಕ್ತವಾಗಿರುವ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ನೈಸರ್ಗಿಕ ಸ್ಥಳಗಳ ಮಾಹಿತಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ‘ಕರ್ನಾಟಕ ಫಿಲ್ಮ್ ಲೊಕೇಷನ್ ಡಿಜಿಟಲ್ ಮ್ಯಾಪ್’ ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡಿಜಿಟಲ್‌ ಮ್ಯಾಪ್‌ ರೂಪುಗೊಳ್ಳಲಿದ್ದು, ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ರಾಜ್ಯದ ವಿವಿಧ ಚಿತ್ರೀಕರಣ ಸ್ಥಳಗಳ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಲು ನೆರವಾಗಲಿದೆ. ಇದರಿಂದ ಕರ್ನಾಟಕದಲ್ಲಿ ಚಿತ್ರೀಕರಣ ಹೆಚ್ಚಾಗುವ ಸಾಧ್ಯತೆಯಿದೆ.

ಸಿನಿಮಾಗಳಿಗೆ ಸಹಾಯಧನ

ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡಲಾಗುತ್ತಿದ್ದ ಸಹಾಯಧನ ಕೆಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಸರ್ಕಾರ ಮತ್ತೆ ಸಹಾಯಧನ ವ್ಯವಸ್ಥೆಯನ್ನು ಪುನರಾರಂಭಿಸಿದೆ. 2025-26ನೇ ಸಾಲಿನಲ್ಲಿ ಕಳೆದ ಮೂರು ವರ್ಷಗಳ ಸಿನಿಮಾಗಳನ್ನು ಗುರುತಿಸಿ ಸಹಾಯಧನ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಉಳಿದಿರುವ ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಸಹಾಯಧನ ನೀಡಲು 20 ಕೋಟಿ ರೂಪಾಯಿ ಅನುದಾನ ಒದಗಿಸಲಾಗುತ್ತದೆ ಎಂದು ಘೋಷಿಸಲಾಗಿದೆ.

‘ಡಿಜಿಟಲ್ ದೃಶ್ಯ ಕರ್ನಾಟಕ’ ವೇದಿಕೆ

ಚಿತ್ರಕಲಾ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಲಭ್ಯವಿರುವ ಹಳೆಯ ಛಾಯಾಚಿತ್ರಗಳು ಮತ್ತು ವೀಡಿಯೊ ಡಾಕ್ಯುಮೆಂಟರಿಗಳನ್ನು ಡಿಜಿಟಲ್ ಮಾದರಿಗೆ ಪರಿವರ್ತಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ‘ಡಿಜಿಟಲ್ ದೃಶ್ಯ ಕರ್ನಾಟಕ’ ಎಂಬ ಹೊಸ ಡಿಜಿಟಲ್ ವೇದಿಕೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಮೈಸೂರು ಫಿಲ್ಮ್ ಸಿಟಿ ಯೋಜನೆ

ಚಿತ್ರೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಈ ಮೊದಲು 500 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಈ ಫಿಲ್ಮ್ ಸಿಟಿಯನ್ನು ಪಿಪಿಪಿ (ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್‌ಶಿಪ್) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಚಿತ್ರೀಕರಣ ಸೌಲಭ್ಯಗಳ ಜೊತೆಗೆ ಪ್ರವಾಸಿಗರಿಗೂ ಆಕರ್ಷಕವಾಗುವಂತೆ ಥೀಮ್ ಪಾರ್ಕ್‌, ಸ್ಟಾರ್ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ ವ್ಯವಹಾರ ಪಾಲುದಾರರನ್ನು ನೇಮಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮ್ಯೂಸಿಯಂ ಆಗಿ ಪುಟ್ಟಣ್ಣ ಕಣಗಾಲ್ ಮನೆ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಅವರ ನಿವಾಸವನ್ನು ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಆಗಿ ರೂಪಿಸಲಾಗುತ್ತದೆ. ಇದು ಕನ್ನಡ ಸಿನಿಮಾದ ಇತಿಹಾಸವನ್ನು ಪರಿಚಯಿಸುವ ಪ್ರಮುಖ ಕೇಂದ್ರವಾಗಲಿದೆ. ಇದರೊಂದಿಗೆ ಯುವಜನರಿಗೆ ಮಹಾತ್ಮ ಗಾಂಧಿ ಅವರ ವಿಚಾರಧಾರೆಗಳನ್ನು ಪರಿಚಯಿಸಲು ‘ಮಹಾತ್ಮಾ ಗಾಂಧಿ ಜನ ಶಿಕ್ಷಣ ಕೇಂದ್ರ’ ಎಂಬ ಯೋಜನೆ ಜಾರಿಗೊಳಿಸಲಾಗುತ್ತದೆ. ಇದರೊಂದಿಗೆ ಜಿಲ್ಲೆಯ ಗಾಂಧಿ ಭವನಗಳನ್ನು ಪುನರುಜ್ಜೀವನಗೊಳಿಸುವುದು, ಹಾಗೆಯೇ ಗಾಂಧೀಜಿ ಭೇಟಿ ನೀಡಿದ ರಾಜ್ಯದ ವಿವಿಧ ಸ್ಥಳಗಳಲ್ಲಿ ಅವರ ಸ್ಮರಣಾರ್ಥ ಗಾಂಧಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸುವ ಯೋಜನೆ ಕೂಡ ಸರ್ಕಾರ ಘೋಷಿಸಿದೆ. ಈ ಮೂಲಕ 2026ರ ರಾಜ್ಯ ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರದ ಅಭಿವೃದ್ಧಿ, ಸಂಸ್ಕೃತಿ ಸಂರಕ್ಷಣೆ ಹಾಗೂ ಯುವಜನರಿಗೆ ರಾಷ್ಟ್ರನಾಯಕರ ವಿಚಾರಧಾರೆ ಪರಿಚಯಿಸುವ ಹಲವು ಮಹತ್ವದ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/cine-mitra-portal-mysuru-film-city-puttanna-kanagal-memorial-what-karnataka-budget-offers-sandalwood-446149.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo