
Karnataka
oi-Manohara M
ಬೆಂಗಳೂರು: ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬದ ವಿರುದ್ಧ ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸರ್ಕಾರ ಹಗರಣ ರಹಿತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿದೆ. ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.
ನಗರದ ನೆಹರೂ ತಾರಾಲಯದ ಬಳಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಯುವಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಲಿಲ್ಲ. ಆ ಅವಧಿಯಲ್ಲಿ ಹಲವು ಹಗರಣಗಳು ನಡೆದವು. ನಮಗೆ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ನಮ್ಮ ಸರ್ಕಾರದ ಆದ್ಯತೆ ಎಂದರು.

ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ
ಹುದ್ದೆಗಳ ಭರ್ತಿ ಕುರಿತು ಸರ್ಕಾರ ಸಮಗ್ರ ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು. ಕೆಪಿಎಸ್ಸಿ ಸೇರಿದಂತೆ ವಿವಿಧ ನೇಮಕಾತಿ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಶಿಕ್ಷಕರ ಹಾಗೂ ಆರೋಗ್ಯ ಇಲಾಖೆಯ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರಿದಿದೆ ಎಂದರು. ಒಳಮೀಸಲಾತಿ ವಿಚಾರದಲ್ಲಿ ಕೆಲವು ಅಡಚಣೆಗಳು ಎದುರಾಗುತ್ತಿವೆ. ನಿರುದ್ಯೋಗಿ ಯುವಕರಿಗೆ ನೆರವಾಗುವ ಉದ್ದೇಶದಿಂದಲೇ ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
2027ರೊಳಗೆ ಮೆಟ್ರೋ ವಿಸ್ತರಣೆ
ಮೆಟ್ರೋ ಜಾಲವನ್ನು 2027ರೊಳಗೆ 175 ಕಿ.ಮೀ.ಗೆ ವಿಸ್ತರಿಸಲು ಗಡುವು ನೀಡಿರುವ ಕುರಿತು ಪ್ರಶ್ನಿಸಿದಾಗ, ಈ ಕುರಿತು ಸರ್ವೇ ನಡೆಯುತ್ತಿದೆ. ಮೆಟ್ರೋ ವಿಚಾರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಡಬಲ್ ಡೆಕ್ಕರ್ ಯೋಜನೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳಿಗಾಗಿ ಕೇಂದ್ರ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡುತ್ತೇನೆ. ಮೆಟ್ರೋ ವಿಸ್ತರಣೆ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಇನ್ನು ಎಲ್ಲ ಇಲಾಖೆಗಳಲ್ಲೂ ಬಿಲ್ ಬಾಕಿ ಇರುವ ಬಗ್ಗೆ ಕೇಳಿದಾಗ, “ಹಿಂದಿನ ಸರ್ಕಾರಗಳು ಆರ್ಥಿಕ ಸ್ಥಿತಿ ಪರಿಶೀಲಿಸದೆ ಹೆಚ್ಚಿನ ಕಾಮಗಾರಿಗಳಿಗೆ ಅನುಮತಿ ನೀಡಿದ ಪರಿಣಾಮ ಈಗ ಸಮಸ್ಯೆಗಳು ಎದುರಾಗಿವೆ. ಹಣ ಲಭ್ಯತೆ ಇಲ್ಲದ ಸಂದರ್ಭದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಡಿ ಎಂದು ನಾವು ಸಲಹೆ ನೀಡಿದ್ದರೂ, ಕೆಲವು ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಕೇಳಿದಾಗ, “ಈ ಕುರಿತು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದೂ ಹೇಳಿದರು. ಖಾಲಿ ಹುದ್ದೆಗಳ ಭರ್ತಿ, ಮೆಟ್ರೋ ವಿಸ್ತರಣೆ ಹಾಗೂ ಬಿಲ್ ಬಾಕಿ ಸಮಸ್ಯೆಗಳ ಕುರಿತು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಸಿಎಂ ಹೇಳಿದ್ದೇನು?
ಈ ಪ್ರತಿಭಟನೆ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದು ಎಂದಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/dk-shivakumar-on-dharwad-protest-govt-committed-to-filling-vacant-posts-metro-expansion-by-2027-445073.html. xn--babytilbehr-pgb.com does not claim ownership of this content. All rights remain with the original publisher.
